Urvil Patel: ಐಪಿಎಲ್ ನಲ್ಲಿ ಅನ್ ಸೋಲ್ಡ್, 28 ಎಸೆತಗಳಲ್ಲಿ ಶತಕ ಸಿಡಿಸಿದ ಉರ್ವಿಲ್ ಪಟೇಲ್ ಯಾರು

Krishnaveni K

ಗುರುವಾರ, 28 ನವೆಂಬರ್ 2024 (11:55 IST)
ಮುಂಬೈ: ಐಪಿಎಲ್ ನಲ್ಲಿ ಅನ್ ಸೋಲ್ಡ್ ಆದ ಬೆನ್ನಲ್ಲೇ ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ವೇಗದ ಶತಕ ಸಿಡಿಸಿ ದಾಖಲೆ ಮಾಡಿದ್ದಾರೆ. ಅಷ್ಟಕ್ಕೂ ಈ ಉರ್ವಿಲ್ ಪಟೇಲ್ ಯಾರು, ಆತನ ಹಿನ್ನಲೆಯೇನು ನೋಡಿ.

ಗುಜರಾತ್ ಟೈಟನ್ಸ್ ತಂಡದ ಮಾಜಿ ವಿಕೆಟ್ ಕೀಪರ್ ಬ್ಯಾಟಿಗ ಉರ್ವಿಲ್ ಪಟೇಲ್ ಮೊನ್ನೆಯಷ್ಟೇ ನಡೆದ ಐಪಿಎಲ್ 2025 ಮೆಗಾ ಹರಾಜಿನಲ್ಲಿ ಅನ್ ಸೋಲ್ಡ್ ಆಗಿ ಉಳಿದಿದ್ದರು. ಯಾವ ತಂಡವೂ ಅವರನ್ನು ಖರೀದಿ ಮಾಡಲು ಉತ್ಸಾಹ ತೋರಿರಲಿಲ್ಲ. ವಿಪರ್ಯಾಸವೆಂದರೆ ಇದಾದ ಮರುದಿನವೇ ಅವರು ಮುಷ್ತಾಕ್ ಅಲಿ ಟೂರ್ನಿಯಲ್ಲಿ 28 ಎಸೆತಗಳಲ್ಲಿ ಶತಕ ಸಿಡಿಸಿ ವೇಗದ ಶತಕ ಸಿಡಿಸಿದ ದಾಖಲೆ ಮಾಡಿದ್ದಾರೆ.

ಉರ್ವಿಲ್ ಪಟೇಲ್ ಮೂಲತಃ ಬರೋಡಾದವರು. ಗುಜರಾತ್ ನ ಕಹಿಪುರ್ ಎಂಬ ಗ್ರಾಮದವರು. ಮಧ್ಯಮ ವರ್ಗದ ಕುಟುಂಬದಿಂದ ಬಂದ ಉರ್ವಿಲ್ ಗೆ ಕ್ರಿಕೆಟ್ ಎಂದರೆ ಹುಚ್ಚು. 26 ವರ್ಷದ ಉರ್ವಿಲ್ ಬರೋಡಾ ಪರ ಪ್ರಥಮ ದರ್ಜೆ ಕ್ರಿಕೆಟ್ ಆಡುತ್ತಾ ಐಪಿಎಲ್ ಲೋಕಕ್ಕೆ ಕಾಲಿಟ್ಟಿದ್ದ.

ಈತನನ್ನು 2023 ರ ಹರಾಜಿನಲ್ಲಿ ಗುಜರಾತ್ ಟೈಟನ್ಸ್ 20 ಲಕ್ಷ ರೂ. ಬೆಲೆಗೆ ಖರೀದಿ ಮಾಡಿತ್ತು. ಆದರೆ ಅವರಿಗೆ ಐಪಿಎಲ್ ನಲ್ಲಿ ತಮ್ಮ ತಾಕತ್ತು ಪ್ರದರ್ಶಿಸಲು ಅವಕಾಶ ಸಿಗಲಿಲ್ಲ. ಹೀಗಾಗಿ ಅವರ ಸಾಮರ್ಥ್ಯದ ಬಗ್ಗೆ ಯಾರಿಗೂ ಪರಿಚಯವೇ ಇರಲಿಲ್ಲ. ಈಗ ಮುಷ್ತಾಕ್ ಅಲಿ ಟೂರ್ನಿ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಬಹುಶಃ ಎರಡು ದಿನ ಮೊದಲು ಈ ಶತಕ ದಾಖಲಾಗಿದ್ದರೂ ಅವರನ್ನು ಐಪಿಎಲ್ ನಲ್ಲಿ ಯಾವುದಾದರೂ ತಂಡ ಖರೀದಿ ಮಾಡುತ್ತಿತ್ತೇನೋ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ