ಆರ್ ಸಿಬಿ ಕೈ ಬಿಟ್ಟಿದ್ದಕ್ಕೆ ಬೇಸರಗೊಂಡರಾ ಮೊಹಮ್ಮದ್ ಸಿರಾಜ್: ಅಭಿಮಾನಿಗಳಿಗೆ ಪತ್ರ

Krishnaveni K

ಬುಧವಾರ, 27 ನವೆಂಬರ್ 2024 (10:50 IST)
Photo Credit: X
ಬೆಂಗಳೂರು: ಈ ಬಾರಿ ಐಪಿಎಲ್ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಅತ್ಯುತ್ತಮ ವೇಗಿ ಮೊಹಮ್ಮದ್ ಸಿರಾಜ್ ರನ್ನು ಕೈಬಿಟ್ಟಿದೆ. ಇದರ ಬೆನ್ನಲ್ಲೇ ಸಿರಾಜ್ ಅಭಿಮಾನಿಗಳಿಗೆ ಭಾವುಕರಾಗಿ ಸಂದೇಶ ಬರೆದಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಆರ್ ಸಿಬಿ ಅಭಿಮಾನಿಗಳಿಗೆ ಸುದೀರ್ಘ ಸಂದೇಶ ಬರೆದಿರುವ ಮೊಹಮ್ಮದ್ ಸಿರಾಜ್ ನಿಮ್ಮಂತಹ ಅಭಿಮಾನಿಗಳನ್ನು ಇನ್ನೆಲ್ಲೂ ನನಗೆ ಸಿಗಲಾರರು ಎಂದು ಬರೆದಿದ್ದಾರೆ. ಆರ್ ಸಿಬಿಗಾಗಿ ಕಳೆದ ಏಳು ವರ್ಷಗಳಿಂದ ಆಡಿರುವ ಬಗ್ಗೆ ನನಗೆ ಯಾವತ್ತೂ ಹೆಮ್ಮೆಯಿದೆ ಎಂದಿದ್ದಾರೆ. ಸಿರಾಜ್ ಬರೆದಿರುವ ಪತ್ರದ ಸಾರಾಂಶ ಹೀಗಿದೆ:

‘ಆರ್ ಸಿಬಿಯೊಂದಿಗೆ ಕಳೆದ ಏಳು ವರ್ಷಗಳು ನನ್ನ ಹೃದಯಕ್ಕೆ ಹತ್ತಿರವಾಗಿದೆ. ಆರ್ ಸಿಬಿಗಾಗಿ ಆಡಿದ ಈ ಏಳು ವರ್ಷಗಳ ಬಗ್ಗೆ ನನಗೆ ಹೆಮ್ಮೆ, ಧನ್ಯತಾ ಭಾವವಿದೆ. ಆರ್ ಸಿಬಿ ಜೆರ್ಸಿಯನ್ನು ಮೊದಲ ಬಾರಿಗೆ ತೊಟ್ಟುಕೊಂಡಾಗ, ನಮ್ಮ ನಡುವೆ ಇಷ್ಟು ಬಾಂಧವ್ಯ ಬೆಳೆಯಬಹುದು ಎಂದು ನಾನು ಅಂದುಕೊಂಡೇ ಇರಲಿಲ್ಲ. ಆರ್ ಸಿಬಿ ಜೆರ್ಸಿ ತೊಟ್ಟು ನಾನು ಎಸೆದ ಮೊದಲ ಬಾಲ್ ನಿಂದ ಹಿಡಿದು, ಮೊದಲ ವಿಕೆಟ್, ಪ್ರತೀ ಪಂದ್ಯಗಳು, ಪ್ರತೀ ಗಳಿಗೆಗಳು ಅದ್ಭುತವಾಗಿತ್ತು. ಈ ಪ್ರಯಾಣದಲ್ಲಿ ಸಾಕಷ್ಟು ಏಳು ಬೀಳುಗಳಿದ್ದವು, ಆದರೆ ಇದೆಲ್ಲದರ ನಡುವೆ ಒಂದು ಮಾತ್ರ ಸ್ಥಿರವಾಗಿತ್ತು. ಅದು ನಿಮ್ಮ ಬೆಂಬಲ. ಆರ್ ಸಿಬಿ ಎನ್ನುವುದು ಕೇವಲ ಒಂದು ಫ್ರಾಂಚೈಸಿಯಲ್ಲ. ಇದು ನನ್ನ ಕನಸು, ಹೃದಯ ಬಡಿತ ಮತ್ತು ಕುಟುಂಬವೇ ಆಗಿತ್ತು.

ಹಲವು ರಾತ್ರಿಗಳು ಸೋಲಿನ ಹತಾಶೆಯಲ್ಲಿ ಬೇಸರಗೊಂಡು ಕೂತಿದ್ದು ಇತ್ತು. ಆದರೆ ಮೈದಾನದಲ್ಲಿ, ಸೋಷಿಯಲ್ ಮೀಡಿಯಾ ಪುಟಗಳಲ್ಲಿ ನಿಮ್ಮ ಬೆಂಬಲ ಸಂದೇಶಗಳು ನಮ್ಮನ್ನು ಮತ್ತೆ ಪುಟಿದೇಳುವಂತೆ ಮಾಡುತ್ತಿದ್ದವು. ನೀವು ನೀಡುತ್ತಿದ್ದ ಶಕ್ತಿ, ಪ್ರೀತಿ ಅದಕ್ಕೆ ಯಾವುದೂ ಸಾಟಿಯಿಲ್ಲ ಪ್ರತೀ ಬಾರಿ ಮೈದಾನಕ್ಕಿಳಿದಾಗ ನಿಮ್ಮ ಕನಸು, ಭರವಸೆಯ ಭಾರ ನನಗಾಗುತ್ತಿತ್ತು. ನೀವು ನನ್ನ ಬೆನ್ನ ಹಿಂದೆ ಇದ್ದೀರಿ ಎಂಬ ಭರವಸೆಯಲ್ಲಿ ನನ್ನ ನೂರು ಪ್ರತಿಶತ ಶ್ರಮ ನೀಡುತ್ತಿದ್ದೆ.

ನಾವು ಸೋತಾಗ ನೀವು ಕಣ್ಣೀರು ಹಾಕಿದ್ದು ನೋಡಿದ್ದೇನೆ, ನಾವು ಗೆದ್ದಾಗ ನೀವು ಸಂಭ್ರಮಿಸಿದ್ದು ನೋಡಿದ್ದೇನೆ. ಒಂದು ವಿಷಯ ನಾನು ಹೇಳಲೇಬೇಕು, ನಿಮ್ಮಂತಹಾ ಅಭಿಮಾನಿಗಳು ಬೇರೆಲ್ಲೂ ಇಲ್ಲ. ನಿಮ್ಮ ಪ್ರೀತಿ, ಧನ್ಯತಾ ಭಾವ, ಸಮರ್ಪಣಾ ಭಾವವನ್ನು ನನ್ನ ಜೀವನ ಪರ್ಯಂತ ಮರೆಯಲ್ಲ.

ನಾನು ಈಗ ಆರ್ ಸಿಬಿ ತಂಡದಿಂದ ಹೊರಹೋಗಿರಬಹುದು, ಆದರೆ ಆರ್ ಸಿಬಿಗೆ ನನ್ನ ಹೃದಯಲ್ಲಿ ಪ್ರತ್ಯೇಕ ಸ್ಥಾನವಿದೆ.  ಇದು ಗುಡ್ ಬೈ ಅಲ್ಲ, ಧನ್ಯವಾದ. ನನ್ನ ಮೇಲೆ ನಂಬಿಕೆಯಿಟ್ಟಿದ್ದಕ್ಕೆ ಧನ್ಯವಾದ, ಕ್ರಿಕೆಟ್ ಗಿಂತಲೂ ಮಿಗಿಲಾಗಿ ನಾನು ಶ್ರೇಷ್ಠವಾಗಿರುವ ಒಂದು ವಿಚಾರದ ಭಾಗ ಎಂದು ಸ್ಥಾನ ಕೊಟ್ಟಿರುವುದಕ್ಕೆ ಧನ್ಯವಾದಗಳು’

ಮೊಹಮ್ಮದ್ ಸಿರಾಜ್ ಅವರ ಈ ಸಂದೇಶ ಅನೇಕ ಆರ್ ಸಿಬಿಗಳ ಕಣ್ಣಂಚು ಒದ್ದೆಯಾಗಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ