ಧೋನಿಯನ್ನು ಮೆಂಟರ್ ಮಾಡುವುದರ ಹಿಂದಿದೆಯಾ ಭವಿಷ್ಯದ ಲೆಕ್ಕಾಚಾರ?

ಶುಕ್ರವಾರ, 10 ಸೆಪ್ಟಂಬರ್ 2021 (08:52 IST)
ಮುಂಬೈ: ಟೀಂ ಇಂಡಿಯಾ ಟಿ20 ವಿಶ್ವಕಪ್ ತಂಡದ ಜೊತೆಗೆ ಮಾಜಿ ನಾಯಕ ಧೋನಿ ಕೂಡಾ ಮೆಂಟರ್ ಆಗಿ ಪ್ರವಾಸ ಮಾಡಲಿದ್ದಾರೆ. ಧೋನಿಯನ್ನು ಇದ್ದಕ್ಕಿದ್ದ ಹಾಗೆ ತಂಡದ ಮೆಂಟರ್ ಮಾಡಿರುವುದರ ಹಿಂದೆ ಭಾರೀ ಲೆಕ್ಕಾಚಾರವಿದೆ ಎನ್ನಲಾಗಿದೆ.


ಕೋಚ್ ಆಗಿ ರವಿಶಾಸ್ತ್ರಿ ಗುತ್ತಿಗೆ ಅವಧಿ ಇನ್ನೇನು ಮುಗಿಯುತ್ತಾ ಬಂದಿದೆ. ಅವರ ಸ್ಥಾನಕ್ಕೆ ನಾಯಕ ಕೊಹ್ಲಿಗೂ ಹೊಂದಾಣಿಕೆಯಾಗುವಂತಹ ಕೋಚ್ ಅಗತ್ಯವಿದೆ. ಧೋನಿ ಮೇಲೆ ಎಲ್ಲಾ ಆಟಗಾರರಿಗೂ ಗೌರವವಿದೆ. ಕೊಹ್ಲಿಯಂತೂ ಅವರನ್ನು ಆಲ್ ಟೈಮ್ ನಾಯಕ ಎಂದೇ ಕರೆಯುತ್ತಾರೆ. ಹೀಗಾಗಿ ರವಿಶಾಸ್ತ್ರಿ ಬಳಿಕ ಧೋನಿಯೇ ಟೀಂ ಇಂಡಿಯಾ ಕೋಚ್ ಆದರೂ ಅಚ್ಚರಿಯಿಲ್ಲ.

ಇದಲ್ಲದೆ, ಧೋನಿ ಲಕ್ಕೀ ನಾಯಕ ಎಂದೇ ಹೆಸರು ವಾಸಿ. ಅವರ ನಾಯಕತ್ವದಲ್ಲಿ ಭಾರತ ಎಲ್ಲಾ ಐಸಿಸಿ ಟೂರ್ನಿಗಳನ್ನು ಗೆದ್ದುಕೊಂಡಿದೆ. ಆದರೆ ಕೊಹ್ಲಿ-ರವಿಶಾಸ್ತ್ರಿ ಜೋಡಿಗೆ ಇದುವರೆಗೆ ಐಸಿಸಿ ಪ್ರಶಸ್ತಿ ಮರೀಚಿಕೆಯಾಗಿದೆ. ಹೀಗಾಗಿ ಈ ಅಪವಾದ ನೀಗಲು ಟಿ20 ವಿಶ್ವಕಪ್ ಗೆ ಧೋನಿಯನ್ನು ಮೆಂಟರ್ ಆಗಿ ಆಯ್ಕೆ ಮಾಡಿರಬಹುದು.

ಇನ್ನೊಂದು ಕಾರಣವೆಂದರೆ ಕಳೆದ ಏಕದಿನ ವಿಶ್ವಕಪ್ ನಲ್ಲಿ ಗೆದ್ದು ಧೋನಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ಗೌರವಯುತ ವಿದಾಯ ನೀಡಬೇಕೆಂಬುದು ತಂಡದ, ಬಿಸಿಸಿಐ ಬಯಕೆಯಾಗಿತ್ತು. ಆದರೆ ಅಂದು ಭಾರತ ಸೆಮಿಫೈನಲ್ ನಲ್ಲಿ ಸೋತಿತು. ಭಾರತ ಆಘಾತಕಾರಿಯಾಗಿ ಕೂಟದಿಂದ ಹೊರಬಿತ್ತು. ಇದಾದ ಬಳಿಕ ಧೋನಿ ಟೀಂ ಇಂಡಿಯಾದಲ್ಲಿ ಆಡಲೇ ಇಲ್ಲ. ಹೀಗಾಗಿ ಅವರಿಗೊಂದು ಗೌರವಯುತ ವಿದಾಯ ಕೊಡಲು ಈ ‘ಮೆಂಟರ್’  ಹುದ್ದೆ ಸೃಷ್ಟಿಯಾಗಿರಬಹುದು ಎನ್ನಲಾಗಿದೆ. ಅದೇನೇ ಇದ್ದರೂ ಧೋನಿ ಅನುಭವದ ಲಾಭ ಯುವ ಕ್ರಿಕೆಟಿಗರು ಪಡೆಯಬಹುದಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ