ನವಿ ಮುಂಬೈ: ಆತಿಥೇಯ ಭಾರತ ತಂಡವು ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದೆ. ಇದೇ 30ರಂದು ಏಳು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ.
ಹರ್ಮನ್‌ಪ್ರೀತ್ ಕೌರ್ ಬಳಗವು ತವರಿನ ಮೈದಾನದ ಲಾಭ ಪಡೆದು ಮೊದಲ ಐಸಿಸಿ ಪ್ರಶಸ್ತಿ ಗೆಲ್ಲುವತ್ತ ಚಿತ್ತ ಹರಿಸಿದೆ. ಗುಂಪು ಹಂತದಲ್ಲಿ ಮೂರು ಗೆಲುವು ಮತ್ತು ಮೂರು ಸೋಲು ಕಂಡಿರುವ ಭಾರತ ತಂಡ ಮುಂದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನದ ವಿಶ್ವಾಸದಲ್ಲಿದೆ.
ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಸೆಮಿಫೈನಲ್ ಪಂದ್ಯಕ್ಕೆ ಇಳಿಯುವ ಮುನ್ನ ಭಾರತ ತಂಡ ತನ್ನ ದೌರ್ಬಲ್ಯಗಳನ್ನು ಸರಿಪಡಿಸಿಕೊಳ್ಳಲು ಕೊನೆಯ ಅವಕಾಶ ಇಂದು ಒದಗಿದೆ. ಬಾಂಗ್ಲಾದೇಶ ವಿರುದ್ಧ ನಡೆಯಲಿರುವ ಕೊನೆಯ ಲೀಗ್ ಪಂದ್ಯ ಆತಿಥೇಯ ತಂಡಕ್ಕೆ ಈ ನಿಟ್ಟಿನಲ್ಲಿ ನೆರವಾಗಲಿದೆ.
ಸೆಮಿಫೈನಲ್ ಸ್ಥಾನ ಅಲುಗಾಡುವ ಹಂತದಲ್ಲಿದ್ದಾಗ ಹರ್ಮನ್‌ಪ್ರೀತ್ ಕೌರ್ ಪಡೆ ಅಮೋಘ ಪ್ರದರ್ಶನ ನೀಡಿ, ನ್ಯೂಜಿಲೆಂಡ್ ತಂಡವನ್ನು ಸುಲಭವಾಗಿ ಸೋಲಿಸಿತ್ತು. ಸ್ಮೃತಿ ಮಂದಾನ (105, 95ಎ) ಮತ್ತು ಪ್ರತಿಕಾ ರಾವಲ್ (122, 135ಎ) ಬಿರುಸಿನ ಶತಕಗಳನ್ನು ಗಳಿಸಿದ್ದರು. ಜೆಮಿಮಾ ಕೂಡ ಅಜೇಯ 76 ರನ್ ಬಾರಿಸಿ ಲಯಕ್ಕೆ ಮರಳಿದ್ದರು.