ವಿಶ್ವಕಪ್ 2019: ಇಂದು ಟೀಂ ಇಂಡಿಯಾದ ಗೆಲುವಿನ ಮೇಲೆ ಮೂರು ತಂಡಗಳ ಭವಿಷ್ಯ ನಿಂತಿದೆ!
ಭಾನುವಾರ, 30 ಜೂನ್ 2019 (09:07 IST)
ಲಂಡನ್: ವಿಶ್ವಕಪ್ ಕೂಟದಲ್ಲಿ ಇಂದು ಭಾರತ ಮತ್ತು ಇಂಗ್ಲೆಂಡ್ ನಡುವೆ ಮಹತ್ವದ ಪಂದ್ಯ ನಡೆಯಲಿದ್ದು, ಇಂದು ಟೀಂ ಇಂಡಿಯಾ ಗೆಲುವಿಗಾಗಿ ಪಾಕಿಸ್ತಾನ, ಬಾಂಗ್ಲಾ ತಂಡಗಳೂ ಪ್ರಾರ್ಥಿಸುವಂತೆ ಆಗಿದೆ.
ನಿರ್ಣಾಯಕ ಘಟ್ಟ ತಲುಪಿರುವ ವಿಶ್ವಕಪ್ ಕೂಟದಲ್ಲಿ ಇಂದು ಭಾರತ ಗೆದ್ದರೆ ಸೆಮಿಫೈನಲ್ ಗೇರಲಿದೆ. ಇದುವರೆಗೆ ಸೋಲರಿಯದೇ ಮುನ್ನುಗ್ಗುತ್ತಿರುವ ಭಾರತಕ್ಕೆ ಇಂದು ಸೋತರೂ ನಷ್ಟವಿಲ್ಲ. ಆದರೆ ಟೀಂ ಇಂಡಿಯಾ ಸೋತರೆ ನಷ್ಟವಾಗುವುದು ಇತರ ಮೂರು ತಂಡಗಳಿಗೆ! ಹೀಗಾಗಿ ಇಂದು ಭಾರತ ಗೆಲ್ಲಲಿ ಎಂದು ಪಾಕ್, ಬಾಂಗ್ಲಾ ತಂಡಗಳೂ ಪ್ರಾರ್ಥಿಸುತ್ತಿವೆ.
ಇಂಗ್ಲೆಂಡ್ ಸೋತರೆ ಅದರ ಸೆಮಿಫೈನಲ್ ಹಾದಿ ಕಷ್ಟವಾಗಲಿದ್ದು, ಪಾಕಿಸ್ತಾನ ಮತ್ತು ಬಾಂಗ್ಲಾದೇಶಕ್ಕೆ ಅವಕಾಶದ ಹಾದಿ ತೆರೆಯುತ್ತದೆ. ಅದರಲ್ಲೂ ಹೆಚ್ಚು ಲಾಭವಾಗುವುದು ಪಾಕಿಸ್ತಾನಕ್ಕೆ. ಹೀಗಾಗಿ ಇಂದಿನ ಪಂದ್ಯಕ್ಕೆ ಹೆಚ್ಚು ಮಹತ್ವ ಸಿಕ್ಕಿದೆ.
ಟೀಂ ಇಂಡಿಯಾ ವಿಚಾರವನ್ನು ನೋಡುವುದಾದರೆ ಕಳೆದ ಎರಡು ಪಂದ್ಯಗಳಿಂದ ಬ್ಯಾಟಿಂಗ್ ವೈಫಲ್ಯ ಕಾಡುತ್ತಿದೆ. ಅದರಲ್ಲೂ ಆರಂಭಿಕ ರೋಹಿತ್ ಶರ್ಮಾ ಬೇಗನೇ ವಿಕೆಟ್ ಕಳೆದುಕೊಂಡರೆ ಭಾರತ ಸಂಕಷ್ಟಕ್ಕೆ ಸಿಲುಕುತ್ತದೆ. ಹೀಗಾಗಿ ಎದುರಾಳಿಗಳು ರೋಹಿತ್ ರನ್ನು ಬೇಗನೇ ಪೆವಿಲಿಯನ್ ಗೆ ಕಳುಹಿಸಲು ತಂತ್ರ ರೂಪಿಸಬಹುದು.
ಇನ್ನು, ನಾಲ್ಕನೇ ಕ್ರಮಾಂಕದಲ್ಲಿ ಆಡಲಿಳಿದಿರುವ ವಿಜಯ್ ಶಂಕರ್ ರಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಬಾರದೇ ಇರುವುದು ನಾಯಕ ಕೊಹ್ಲಿಗೆ ಚಿಂತೆಯಾಗಿದೆ. ಹೀಗಾಗಿ ಈ ಪಂದ್ಯಕ್ಕೆ ವಿಜಯ್ ಬದಲಿಗೆ ದಿನೇಶ್ ಕಾರ್ತಿಕ್ ಅಥವಾ ರಿಷಬ್ ಪಂತ್ ಆಗಮನವಾದರೂ ಅಚ್ಚರಿಯಿಲ್ಲ. ಉಳಿದಂತೆ ಭಾರತ ತಂಡದಲ್ಲಿ ಬದಲಾವಣೆ ಸಾಧ್ಯತೆ ಕಡಿಮೆ.