ಡಬ್ಲ್ಯುಪಿಎಲ್ 2024: ಯುಪಿ ವಾರಿಯರ್ಸ್ ಬ್ಯಾಟಿಂಗ್ ಗೆ ಅಂಕುಶ ಹಾಕಿದ ಡೆಲ್ಲಿ

Krishnaveni K

ಸೋಮವಾರ, 26 ಫೆಬ್ರವರಿ 2024 (21:09 IST)
Photo Courtesy: Twitter
ಬೆಂಗಳೂರು: ಡಬ್ಲ್ಲುಪಿಎಲ್ ಟೂರ್ನಿಯಲ್ಲಿ ಇಂದು ಯುಪಿ ವಾರಿಯರ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಪಂದ್ಯ ನಡೆಯುತ್ತಿದ್ದು ಮೊದಲು ಬ್ಯಾಟಿಂಗ್ ಮಾಡಿದ ಯುಪಿ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 119 ರನ್ ಗಳಿಸಿದೆ.

ಟಾಸ್ ಗೆದ್ದ ಡೆಲ್ಲಿ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಅದಕ್ಕೆ ತಕ್ಕಂತೆ ಆಟವಾಡಿದ ಡೆಲ್ಲಿ ಬೌಲರ್ ಗಳು ಎದುರಾಳಿಗಳ ಬ್ಯಾಟಿಂಗ್ ಅಬ್ಬರಕ್ಕೆ ಸಂಪೂರ್ಣವಾಗಿ ನಿಯಂತ್ರಣ ಹೇರಿದರು. ಆರಂಭದಲ್ಲೇ ವೃಂದಾ ದಿನೇಶ್ ರನ್ನು ಶೂನ್ಯಕ್ಕೆ ಕಳೆದುಕೊಂಡ ಯುಪಿ ಬಳಿಕ ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಒಂದು ಹಂತದಲ್ಲಿ 85 ರನ್ ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಆಸರೆಯಾಗಿದ್ದು ಶ್ವೇತಾ ಶೆರಾವತ್ ಬ್ಯಾಟಿಂಗ್. ಒಟ್ಟು 42 ಎಸೆತ ಎದುರಿಸಿದ ಶ್ವೇತಾ 45 ರನ್ ಗಳಿಸಿದರು.

ಉಳಿದ ಯಾವುದೇ ಬ್ಯಾಟಿಗರ ಸ್ಕೋರ್ ಕೂಡಾ 20 ರನ್ ದಾಟಲಿಲ್ಲ. ಶೆರಾವತ್ ಬ್ಯಾಟಿಂಗ್ ನಿಂದಾಗಿ ಯುಪಿ ಗೌರವಯುತ ಮೊತ್ತ ಕಲೆ ಹಾಕುವಂತಾಯಿತು. ಕಳೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಸೋತಿದ್ದ ಯುಪಿಗೆ ಈಗ ಗೆಲುವು ಅನಿವಾರ್ಯವಾಗಿದೆ.

ಅತ್ತ ಡೆಲ್ಲಿ ಪರ ಮರಿಝಾನೆ ಕಪ್, ರಾಧಾ ಯಾದವ್ ತಲಾ 3 ವಿಕೆಟ್ ಕಬಳಿಸಿದರು. ಅದರಲ್ಲೂ ಮರಿಝಾನೆ ಕಪ್ 4 ಓವರ್ ಬೌಲಿಂಗ್ ಮಾಡಿ ಕೇವಲ 5 ರನ್ ಗಳಿಗೆ 3 ವಿಕೆಟ್ ಉಡಾಯಿಸುವ ಮೂಲಕ ಅದ್ಭುತ ಸ್ಪೆಲ್ ಮಾಡಿದರು. ಆರುಂಧತಿ ರೆಡ್ಡಿ, ಅನ್ನಾಬೆಲ್ ಸುದರ್ ಲ್ಯಾಂಡ್ ತಲಾ 1 ವಿಕೆಟ್ ಕಬಳಿಸಿದ್ದಾರೆ. ಇದೀಗ ಡೆಲ್ಲಿ ಗೆಲುವಿಗೆ 120 ರನ್ ಗಳಿಸಬೇಕಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ