ಡಬ್ಲ್ಯುಪಿಎಲ್ 2024: ಆರ್ ಸಿಬಿಗೆ ಇಂದು ಗುಜರಾತ್ ಮಣಿಸುವ ತವಕ

Krishnaveni K

ಮಂಗಳವಾರ, 27 ಫೆಬ್ರವರಿ 2024 (09:10 IST)
ಬೆಂಗಳೂರು: ಡಬ್ಲ್ಯುಪಿಎಲ್ 2024 ಟೂರ್ನಿಯಲ್ಲಿ ಮೊದಲ ಗೆಲುವು ಕಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದೀಗ ಎರಡನೇ ಪಂದ್ಯವಾಡಲು ಸಜ್ಜಾಗಿದೆ.

ಕಳೆದ ಪಂದ್ಯದಲ್ಲಿ ಆರ್ ಸಿಬಿ ರೋಚಕ ಗೆಲುವು ಕಂಡಿತ್ತು. ಮೊದಲ ಆವೃತ್ತಿಯಲ್ಲಿ ಸತತ ಸೋಲಿನಿಂದ ಕಂಗೆಟ್ಟಿದ್ದ ಆರ್ ಸಿಬಿಗೆ ಈ ಬಾರಿ ತವರಿನಲ್ಲಿ ಮೊದಲ ಪಂದ್ಯದಲ್ಲೇ ಗೆಲುವು ಸಿಕ್ಕ ಸಂಭ್ರಮ ಹೇಳತೀರದಾಗಿತ್ತು. ಅದರಲ್ಲೂ ಕನ್ನಡತಿ ಶ್ರೇಯಾಂಕ ಪಾಟೀಲ್ ಸಿಕ್ಸರ್ ನ್ನು ಅಭಿಮಾನಿಗಳು ಮರೆಯುವಂತೇ ಇಲ್ಲ.

ಕ್ಯಾಪ್ಟನ್ ಸ್ಮೃತಿ ಮಂಧಾನಾ ಮೇಲೆ ಅಭಿಮಾನಿಗಳು ಭಾರೀ ನಿರೀಕ್ಷೆಯಿಟ್ಟುಕೊಂಡಿದ್ದಾರೆ. ಭಾರತದ ಸ್ಟಾರ್ ಆಟಗಾರ್ತಿ ಬ್ಯಾಟ್ ನಿಂದ ರನ್ ಬರುವುದನ್ನೇ ಕಾದಿದ್ದಾರೆ. ಆದರೆ ಕಳೆದ ಆವೃತ್ತಿ ಮತ್ತು ಕಳೆದ ಪಂದ್ಯದಲ್ಲಿ ಸ್ಮೃತಿ ನಿರಾಸೆ ಮೂಡಿಸಿದ್ದರು. ಸ್ಮೃತಿ ಇದುವರೆಗೆ ಡಬ್ಲ್ಯುಪಿಎಲ್ ನಲ್ಲಿ ಹೇಳಿಕೊಳ್ಳುವಂತಹ ಇನಿಂಗ್ಸ್ ಆಡಿಲ್ಲ. ಇದೀಗ ಬೆಂಗಳೂರಿನ ಮೈದಾನದಲ್ಲಿ ಸಾವಿರಾರು ಅಭಿಮಾನಿಗಳ ಮುಂದೆ ಮಿಂಚುವ ಅವಕಾಶವನ್ನು ಅವರು ಸದುಪಯೋಗಪಡಿಸಿಕೊಳ್ಳುತ್ತಾರಾ ಕಾದು ನೋಡಬೇಕು.

ಕಳೆದ ಪಂದ್ಯದಲ್ಲಿ ಭಾರತೀಯ ಆಟಗಾರ್ತಿಯರೇ ಆರ್ ಸಿಬಿ ಕೈ ಹಿಡಿದಿದ್ದು. ವಿದೇಶೀ ತಾರೆಯರಾದ ಸೋಫಿ ಡಿವೈನ್, ಎಲ್ಸಿ ಪೆರಿಯಿಂದ ನಿರೀಕ್ಷೆಗೆ ತಕ್ಕ ಆಟ ಬರಲಿಲ್ಲ. ಆದರೆ ಭಾರತೀಯ ತಾರೆಯರಾದ ರಿಚಾ ಘೋಷ್ ಅದ್ಭುತ ಫಾರ್ಮ್ ನಲ್ಲಿದ್ದಾರೆ.

ಅತ್ತ ಗುಜರಾತ್ ಜೈಂಟ್ಸ್ ತಂಡಕ್ಕೆ ಬೆತ್ ಮೂನಿ ನಾಯಕತ್ವವಿದೆ. ಆದರೆ ಕಳೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸೋತಿತ್ತು. ಹೀಗಾಗಿ ಈಗ ಮೊದಲ ಗೆಲುವಿನ ಹುಡುಕಾಟದಲ್ಲಿದೆ. ಕಳೆದ ಪಂದ್ಯದಲ್ಲಿ ಗುಜರಾತ್ ಗೆ ಬ್ಯಾಟಿಂಗ್ ಕೈ ಕೊಟ್ಟಿತ್ತು. ಈ ಬಾರಿ ಸುಧಾರಿತ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದ್ದು, ಜಿಯೋ ಸಿನಿಮಾದಲ್ಲಿ ನೇರಪ್ರಸಾರ ವೀಕ್ಷಿಸಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ