ನವದೆಹಲಿ: ತಕ್ಕ ಸಮಯದಲ್ಲಿ ಬೌಲರ್ ಗಳ ಅದ್ಭುತ ಪ್ರದರ್ಶನದಿಂದಾಗಿ ಮುಂಬೈ ಇಂಡಿಯನ್ಸ್ ವಿರುದ್ಧ 5 ರನ್ ಗಳ ರೋಚಕ ಗೆಲುವು ಸಾಧಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಡಬ್ಲ್ಯುಪಿಎಲ್ ಫೈನಲ್ ಗೇರಿದೆ.
ಇದೀಗ ಫೈನಲ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರ್ ಸಿಬಿ ಕಪ್ ಗಾಗಿ ಹೋರಾಡಬೇಕಿದೆ. ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 135 ರನ್ ಗಳಿಸಿತು. ಎಲ್ಲಿಸ್ ಪೆರ್ರಿ 66 ರನ್ ಸಿಡಿಸಿದರು. ಈ ಮೊತ್ತವನ್ನು ಮುಂಬೈ ಸುಲಭವಾಗಿ ಬೆನ್ನತ್ತಬಹುದು ಎಂಬುದೇ ಎಲ್ಲರ ಲೆಕ್ಕಾಚಾರವಾಗಿತ್ತು.
ಆದರೆ ಡೆತ್ ಓವರ್ ಗಳಲ್ಲಿ ಅದ್ಭುತ ಬೌಲಿಂಗ್ ನಡೆಸಿದ ಆರ್ ಸಿಬಿ ಬೌಲರ್ ಗಳು ಎದುರಾಳಿಯನ್ನು 130 ರನ್ ಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಮುಂಬೈ 6 ವಿಕೆಟ್ ನಷ್ಟಕ್ಕೆ 130 ರನ್ ಗಳಿಸಲಷ್ಟೇ ಶಕ್ತವಾಯಿತು. ನಾಯಕಿ ಹರ್ಮನ್ ಪ್ರೀತ್ ಕೌರ್ 33 ರನ್ ಗಳಿಸಿದ್ದಾಗ ಶ್ರೇಯಾಂಕ ಪಾಟೀಲ್ ಎಸೆತದಲ್ಲಿ ಸೋಫಿ ಡಿವೈನ್ ಕ್ಯಾಚಿತ್ತು ನಿರ್ಗಮಿಸಿದರು. ಇದು ಪಂದ್ಯಕ್ಕೆ ತಿರುವ ನೀಡಿತು. ಬಳಿಕ ಅಮೇಲಿಯಾ ಕೆರ್ ಅಜೇಯ 27 ರನ್ ಗಳಿಸಿದರೂ ತಂಡಕ್ಕೆ ಗೆಲುವು ಕೊಡಿಸಲಾಗಲಿಲ್ಲ.
ಆರ್ ಸಿಬಿ ಕೊನೆಯ ಮೂರು ಓವರ್ ಗಳಲ್ಲಿ ಒಂದೇ ಒಂದು ಬೌಂಡರಿ ಬಿಟ್ಟುಕೊಡದೇ 14 ರನ್ ಮಾತ್ರ ಬಿಟ್ಟುಕೊಟ್ಟಿತು. ಜೊತೆಗೆ 3 ವಿಕೆಟ್ ಕೂಡಾ ಕಬಳಿಸಿತು. ಶ್ರೇಯಾಂಕ ಪಾಟೀಲ್ 4 ಓವರ್ ಗಳಿಂದ ಕೇವಲ 16 ರನ್ ಬಿಟ್ಟುಕೊಟ್ಟು 2 ವಿಕೆಟ್ ಕಬಳಿಸಿದರು. ಉಳಿದಂತೆ ಎಲ್ಲಿಸ್ ಪೆರಿ, ಸೋಫಿ ಮೊಲಿನಕ್ಸ್, ಜಾರ್ಜಿಯಾ ವಾರೆಹಾಂ, ಆಶಾ ಶೋಭನಾ ತಲಾ 1 ವಿಕೆಟ್ ತಮ್ಮದಾಗಿಸಿಕೊಂಡರು. ಇದರೊಂದಿಗೆ ಆರ್ ಸಿಬಿಯ ಈ ಸಲ ಕಪ್ ನಮ್ದೇ ಸ್ಲೋಗನ್ ಮತ್ತೊಮ್ಮೆ ನನಸಾಗುವ ನಿರೀಕ್ಷೆ ಅಭಿಮಾನಿಗಳಿಗೆ ಮೂಡಿದೆ.