ಡಬ್ಲ್ಯುಪಿಎಲ್ 2024: ಮುಂಬೈ ಇಂಡಿಯನ್ಸ್ ಹೆಡೆಮುರಿ ಕಟ್ಟಿದ ಎಲ್ಲಿಸ್ ಪೆರ್ರಿ

Krishnaveni K

ಮಂಗಳವಾರ, 12 ಮಾರ್ಚ್ 2024 (21:08 IST)
Photo Courtesy: Twitter
ದೆಹಲಿ: ಡಬ್ಲ್ಯುಪಿಎಲ್ ಟೂರ್ನಿಯಲ್ಲಿ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಇಂದು ಮುಂಬೈ ಇಂಡಿಯನ್ಸ್ ವಿರುದ್ಧ ಎಲ್ಲಿಸ್ ಪೆರ್ರಿ ಅವರ ಬೆಂಕಿ ಚೆಂಡಿನಂತಹ ದಾಳಿಯಿಂದಾಗಿ ಆರ್ ಸಿಬಿ ಎದುರಾಳಿಯನ್ನು ಕೇವಲ ರನ್ ಗೆ ಕಟ್ಟಿಹಾಕಿದೆ.

ಕಳೆದ ಪಂದ್ಯದಲ್ಲಿ ಕೇವಲ 1 ರನ್ ನಿಂದ ಸೋತಿದ್ದ ಆರ್ ಸಿಬಿಗೆ ಪ್ಲೇ ಆಫ್ ಗೇರಲು ಇಂದಿನ ಪಂದ್ಯ ಗೆಲ್ಲಲೇಬೇಕಾಗಿದೆ. ಸೂಕ್ತ ಸಮಯದಲ್ಲೇ ಪ್ರಮುಖ ಆಟಗಾರ್ತಿ ಎಲ್ಲಿಸ್ ಪೆರ್ರಿ ಭರ್ಜರಿ ಬೌಲಿಂಗ್ ನಡೆಸಿ ವಿಕೆಟ್ ಕಿತ್ತಿದ್ದಾರೆ. ಅದರಲ್ಲೂ ಕಳೆದ ಪಂದ್ಯದಲ್ಲಿ ಅಬ್ಬರಿಸಿದ ಮುಂಬೈ ನಾಯಕಿ ಹರ್ಮನ್ ಪ್ರೀತ್ ಕೌರ್ ರನ್ನು ಗೋಲ್ಡನ್ ಡಕ್ ಗೆ ಪೆವಿಲಿಯನ್ ಗೆ ಕಳುಹಿಸಿದ್ದಂತೂ ಅದ್ಭುತವಾಗಿತ್ತು.

ಒಟ್ಟು 4 ಓವರ್ ಬೌಲಿಂಗ್ ಮಾಡಿದ ಎಲ್ಲಿಸ್ ಕೇವಲ 15 ರನ್ ಬಿಟ್ಟುಕೊಟ್ಟು 6 ವಿಕೆಟ್ ಕಬಳಿಸಿದರು. ಮುಂಬೈ ಪರ ಆರಂಭಿಕ ಮ್ಯಾಥ್ಯೂಸ್ 26, ಎಸ್ ಸಂಜನಾ 30 ರನ್ ಗಳಿಸಿ ಉತ್ತಮ ಆರಂಭ ನೀಡಿದರು. ಆದರೆ 65 ರನ್ ಗಳಿಸಿದ್ದಾಗ ಹರ್ಮನ್ ವಿಕೆಟ್ ಬಿದ್ದೊಡನೆ ಮುಂಬೈ ಕುಸಿತ ಆರಂಭವಾಯಿತು.

ಒಬ್ಬರಾದ ಮೇಲೊಬ್ಬರಂತೇ ಪೆವಿಲಿಯನ್ ಗಟ್ಟಿದ ಎಲ್ಲಿಸ್ ಪೆರ್ರಿ ಮುಂಬೈ ಬ್ಯಾಟಿಂಗ್ ಗೆ ಬಲವಾದ ಹೊಡೆತ ನೀಡಿದರು. ಅವರಿಗೆ ಸಾಥ್ ನೀಡಿದ ಸೋಫಿ ಡಿವೈನ್, ಸೋಫಿ ಮೊಲಿನಕ್ಸ್, ಶ್ರೇಯಾಂಕ ಪಾಟೀಲ್ ಮತ್ತು ಆಶಾ ಶೋಭನಾ ತಲಾ 1 ವಿಕೆಟ್ ಕಬಳಿಸಿದರು.

ಇದರಿಂದಾಗಿ ಮುಂಬೈಗೆ ಎಂದಿನಂತೇ ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಮುಂಬೈ 19 ಓವರ್ ಗಳಲ್ಲಿ 113 ರನ್ ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ಆರ್ ಸಿಬಿಗೆ ಈಗ ಗೆಲ್ಲಲು 114 ರನ್ ಗಳಿಸಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ