ದೆಹಲಿ: ಡಬ್ಲ್ಯುಪಿಎಲ್ ಕೂಟದಲ್ಲಿ ಕಳೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೊನೆಯ ಕ್ಷಣದಲ್ಲಿ ಸೋತಿದ್ದ ಆರ್ ಸಿಬಿಗೆ ಇಂದು ಮತ್ತೊಂದು ಪ್ರಬಲ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ ಮಾಡು ಇಲ್ಲವೇ ಮಡಿ ಪಂದ್ಯ.
ಕಳೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆದ್ದಿದ್ದರೆ ಆರ್ ಸಿಬಿಗೆ ಪ್ಲೇ ಆಫ್ ಅವಕಾಶ ಗಟ್ಟಿಯಾಗುತ್ತಿತ್ತು. ಆದರೆ ಕಳೆದ ಪಂದ್ಯವನ್ನು 1 ರನ್ ನಿಂದ ಸೋತ ಆರ್ ಸಿಬಿ ಇಂದು ಮುಂಬೈ ಇಂಡಿಯನ್ಸ್ ವಿರುದ್ಧ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಹೀಗಾಗಿ ಕಳೆದ ಪಂದ್ಯದ ಸೋಲಿನ ಹತಾಶೆಯಿಂದ ಮೇಲೆದ್ದು ಇಂದು ಆರ್ ಸಿಬಿ ಹೊಸ ಹುರುಪಿನಿಂದ ಆಡಬೇಕಿದೆ.
ಅತ್ತ ಮುಂಬೈ ಇಂಡಿಯನ್ಸ್ ತಂಡ ಸುಲಭದ ಎದುರಾಳಿಯಲ್ಲ. ಇದುವರೆಗೆ ಆರ್ ಸಿಬಿಗೆ ಮುಂಬೈ ತಂಡವನ್ನು ಸೋಲಿಸಲು ಸಾಧ‍್ಯವಾಗಿಲ್ಲ. ಕಳೆದ ಪಂದ್ಯದಲ್ಲಿ ಮುಂಬೈ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಭರ್ಜರಿ ಬ್ಯಾಟಿಂಗ್ ನೋಡಿದರೆ ಎದುರಾಳಿಗಳಿಗೆ ನಡುಕ ಬರೋದು ಗ್ಯಾರಂಟಿ. ಅವರು ಸಿಡಿದು ನಿಂತರೆ ಯಾವ ಬೌಲರ್ ನ ಯೋಜನೆಯೂ ತಲೆಕೆಳಗು ಮಾಡಬಲ್ಲರು.
ಆದರೆ ಆರ್ ಸಿಬಿಗೆ ದೊಡ್ಡ ಪ್ಲಸ್ ಪಾಯಿಂಟ್ ಎಲ್ಸಿ ಪೆರಿ, ರಿಚಾ ಘೋಷ್ ಫಾರ್ಮ್. ಆದರೆ ನಾಯಕಿ ಸ್ಮೃತಿ ಮಂಧಾನ ಅಗತ್ಯ ಬಂದಾಗ ಕೈ ಕೊಡುವುದು ದೊಡ್ಡ ಕೊರತೆಯಾಗಿ ಕಾಡುತ್ತಿದೆ. ಕಳೆದ ಪಂದ್ಯದಲ್ಲೂ ಸ್ಮೃತಿ ಉತ್ತಮ ಆರಂಭ ನೀಡಿದ್ದರೆ ಸೋಲುತ್ತಿರಲಿಲ್ಲ. ಮುಂಬೈ ವಿರುದ್ಧ ಗೆಲ್ಲಲು ಆರ್ ಸಿಬಿ ಎಲ್ಲಾ ಕೊರತೆಗಳನ್ನು ನೀಗಿಸಬೇಕಿದೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.