ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕ್ರಿಕೆಟಿಗ ಯುವರಾಜ್ ಸಿಂಗ್ ಬಿಜೆಪಿಯಿಂದ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಈಗ ಜೋರಾಗಿ ಕೇಳಿಬರುತ್ತಿದೆ.
ಇತ್ತೀಚೆಗಷ್ಟೇ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಯುವರಾಜ್ ಸಿಂಗ್ ಅವರ ಕುಟುಂಬವನ್ನು ಭೇಟಿ ಮಾಡಿತ್ತು. ಈ ವೇಳೆ ಯುವಿ ಕೂಡಾ ಇದ್ದರು. ಇದರ ಬೆನ್ನಲ್ಲೇ ಯುವಿ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂಬ ಮಾತು ಜೋರಾಗಿ ಕೇಳಿಬರುತ್ತಿದೆ. 2011 ರ ವಿಶ್ವಕಪ್ ವಿಜೇತ ಭಾರತ ತಂಡದ ಹೀರೋ ಆಗಿರುವ ಯುವರಾಜ್ ಪಂಜಾಬ್ ನಿಂದ ಕಣಕ್ಕಿಳಿಯಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
ಪಂಜಾಬ್ ನ ಗುರುದಾಸ್ ಪುರ್ ಕ್ಷೇತ್ರದಿಂದ ಯುವಿಯನ್ನು ಕಣಕ್ಕಿಳಿಸಲು ಬಿಜೆಪಿ ತಯಾರಿ ನಡೆಸಿದೆ ಎನ್ನಲಾಗಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಬಿಜೆಪಿ ನಟ ಸನ್ನಿ ಡಿಯೋಲ್ ರನ್ನು ಕಣಕ್ಕಿಳಿಸಿ ಗೆಲುವು ಸಾಧಿಸಿತ್ತು. ಇದೀಗ ಯುವಿಯನ್ನು ಕರೆತರಲು ಪ್ರಯತ್ನ ನಡೆದಿದೆ. ಆದರೆ ಈ ಸುದ್ದಿಯನ್ನು ಯುವಿ ಕುಟುಂಬಸ್ಥರು ಅಧಿಕೃತಗೊಳಿಸಿಲ್ಲ.
ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದ ಯವರಾಜ್ ಮಹಾಮಾರಿಯನ್ನು ಯಶಸ್ವಿಯಾಗಿ ಗೆದ್ದು ಬಳಿಕ ಕ್ಯಾನ್ಸರ್ ರೋಗಿಗಳ ಚಿಕಿತ್ಸೆಗೆ ನೆರವಾಗಲು ತಮ್ಮದೇ ಫೌಂಡೇಷನ್ ನಿರ್ಮಿಸಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದಕ್ಕೆ ಮೊದಲು ಕ್ರಿಕೆಟಿಗ ಗೌತಮ್ ಗಂಭೀರ್, ಹರ್ಭಜನ್ ಸಿಂಗ್, ಅಜರುದ್ದೀನ್, ನವಜೋತ್ ಸಿಂಗ್ ಸಿದು ಸೇರಿದಂತೆ ಅನೇಕ ಕ್ರಿಕೆಟಿಗರು ರಾಜಕೀಯದಲ್ಲೂ ಮಿಂಚಿದ್ದಾರೆ. ಈ ಸಾಲಿಗೆ ಯುವಿ ಸೇರುತ್ತಾರಾ ಎಂದು ಕಾದು ನೋಡಬೇಕಿದೆ.
ಯುವರಾಜ್ ಸಿಂಗ್ ಭಾರತದ ಪರ 304 ಏಕದಿನ, 40 ಟೆಸ್ಟ್ ಮತ್ತು 58 ಟಿ20 ಪಂದ್ಯಗಳನ್ನಾಡಿದ್ದಾರೆ. ಅದರಲ್ಲೂ ಟಿ20 ವಿಶ್ವಕಪ್ ನಲ್ಲಿ ಒಂದೇ ಓವರ್ ನ ಆರೂ ಎಸೆತಗಳನ್ನು ಸಿಕ್ಸರ್ ಗಟ್ಟಿದ ಬಳಿಕ ಸಿಕ್ಸರ್ ಕಿಂಗ್ ಎಂದೇ ಹೆಸರುವಾಸಿಯಾಗಿದ್ದರು.