ಸುರೇಶ್ ರೈನಾ ಬಳಿಕ ಸಿಎಸ್ ಕೆಗೆ ಕೊಕ್ ಕೊಡಲು ತಯಾರಾದ ಹರ್ಭಜನ್ ಸಿಂಗ್
ಮಂಗಳವಾರ, 1 ಸೆಪ್ಟಂಬರ್ 2020 (11:56 IST)
ಚೆನ್ನೈ: ಈ ಬಾರಿಯ ಐಪಿಎಲ್ ಆರಂಭಕ್ಕೂ ಮೊದಲೇ ಚೆನ್ನೈ ಆಂತರಿಕ ಬಿಕ್ಕಟ್ಟಿನಿಂದ ತತ್ತರಿಸಿ ಹೋಗಿದೆ. ಒಂದೆಡೆ ಕೊರೋನಾ, ಮತ್ತೊಂದೆಡೆ ಸುರೇಶ್ ರೈನಾ ಕೂಟದಿಂದ ಹೊರಬಿದ್ದಿದ್ದು, ಸಾಲದೆಂಬಂತೆ ಈಗ ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ಕೂಡಾ ಸಿಎಸ್ ಕೆ ತಂಡಕ್ಕೆ ಕೊಕ್ ಕೊಡಲು ಸಿದ್ಧರಾಗಿದ್ದಾರೆ.
ರೈನಾ ವೈಯಕ್ತಿಕ ಕಾರಣ ನೀಡಿ ಹೊರಬಂದಿದ್ದರೂ ಅವರು ತಂಡದ ಜತೆಗೆ ವೈಮನಸ್ಯ ಮಾಡಿಕೊಂಡಿದ್ದರು ಎಂಬ ಊಹಾಪೋಹಗಳು ಕೇಳಿಬರುತ್ತಿವೆ. ಈ ನಡುವೆ ಚೆನ್ನೈ ತಂಡದಲ್ಲಿ ಕೊರೋನಾ ಪ್ರಕರಣಗಳು ಪತ್ತೆಯಾಗಿರುವುದರಿಂದ ತಂಡದ ಆಟಗಾರರಿಗೆ ಇನ್ನೂ ಅಭ್ಯಾಸಕ್ಕಿಳಿಯಲು ಸಾಧ್ಯವಾಗಿಲ್ಲ. ವಿದೇಶೀ ಆಟಗಾರರು ಸಿಎಸ್ ಕೆ ತಂಡ ಕೂಡಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.
ಈ ನಡುವೆ ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ಕೂಡಾ ತಂಡವನ್ನು ಕೂಡಿಕೊಳ್ಳಲು ಹಿಂಜರಿಯುತ್ತಿದ್ದಾರೆ ಎಂಬ ಸುದ್ದಿ ಬಂದಿದೆ. ತಾಯಿಯ ಅನಾರೋಗ್ಯ ನಿಮಿತ್ತ ಚೆನ್ನೈ ತಂಡದೊಂದಿಗೆ ದುಬೈಗೆ ಪ್ರಯಾಣ ಬೆಳೆಸದ ಭಜಿ ಈಗ ಕೊರೋನಾ ಪ್ರಕರಣ ಪತ್ತೆಯಾದ ಮೇಲೆ ಆತಂಕಕ್ಕೊಳಗಾಗಿದ್ದಾರೆ. ಈ ಹಿನ್ನಲೆಯಲ್ಲಿ ಈ ಬಾರಿಯ ಐಪಿಎಲ್ ಕೂಟದಿಂದಲೇ ಹೊರಬರಲು ಚಿಂತನೆ ನಡೆಸಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ.