ನವದೆಹಲಿ: ಟೀಂ ಇಂಡಿಯಾ ಹಿರಿಯ ವಿಕೆಟ್ ಕೀಪರ್ ಧೋನಿ ಹಲವು ಬಾರಿ ಗಾಯಗೊಂಡಿದ್ದರೂ ತಂಡಕ್ಕಾಗಿ ಅದನ್ನು ಮರೆತು ಪಂದ್ಯವಾಡಿದ ಹಲವು ಉದಾಹರಣೆಗಳಿವೆ ಎಂದು ಹಿಂದೊಮ್ಮೆ ಹೇಳಿಕೊಂಡಿದ್ದರು. ಇದೀಗ ಧೋನಿ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುವ ಸಲುವಾಗಿಯೂ ಅದನ್ನೇ ಮಾಡಿದ್ದಾರಂತೆ.
ವಿಶ್ವಕಪ್ ನಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದ ವೇಳೆ ಧೋನಿ ಕೈ ಬೆರಳಿಗೆ ಗಾಯ ಮಾಡಿಕೊಂಡು ರಕ್ತ ಉಗುಳುತ್ತಿದ್ದ ಫೋಟೋಗಳು ವೈರಲ್ ಆಗಿತ್ತು. ಆಗ ಟೀಂ ಇಂಡಿಯಾ ಮೂಲಗಳು ಧೋನಿ ಗಾಯದ ಬಗ್ಗೆ ತುಟಿಪಿಟಕ್ ಎಂದಿರಲಿಲ್ಲ. ಆದರೆ ಧೋನಿ ಬೆರಳು ಮುರಿತಕ್ಕೊಳಗಾಗಿದ್ದರು ಎನ್ನಲಾಗಿದೆ. ಆದರೆ ವಿಶ್ವಕಪ್ ನ ಮುಂದಿನ ಪಂದ್ಯಗಳು ಮತ್ತು ನಂತರ ಸೇನೆ ಸೇರಲು ಅನರ್ಹ ಎಂದು ಎನಿಸಿಕೊಳ್ಳದೇ ಇರಲು ಧೋನಿ ಗಾಯ ಮುಚ್ಚಿಟ್ಟಿದ್ದರು ಎಂಬ ಅಂಶವನ್ನು ಆಂಗ್ಲ ಮಾಧ್ಯಮಗಳು ಬಹಿರಂಗಗೊಳಿಸಿವೆ.
ಧೋನಿಗೆ ಬೆರಳು ಮಡಚಲೂ ಆಗದಷ್ಟು ನೋವಿದ್ದರೂ ವೈದ್ಯರ ಬಳಿ ಹೋದರೆ ವಿಷಯ ಬಹಿರಂಗವಾಗಬಹುದು ಎಂದು ಮುಚ್ಚಿಟ್ಟಿದ್ದರಂತೆ. ಒಂದು ವೇಳೆ ಬೆರಳಿಗೆ ಗಾಯವಾಗಿದೆಯೆಂದಾಗಿದ್ದರೆ, ಅವರು ಸೇನೆಯಲ್ಲಿ ತರಬೇತಿ ಪಡೆಯಲು ಅನರ್ಹರಾಗಿರುತ್ತಿದ್ದರು. ಆದರೆ ಯಾವುದೇ ಕಾರಣಕ್ಕೂ ಯೋಧನಾಗಿ ಕರ್ತವ್ಯ ನಿಭಾಯಿಸುವ ಅವಕಾಶವನ್ನು ಕಳೆದುಕೊಳ್ಳಲು ಇಷ್ಟಪಡದ ಧೋನಿ ಇದನ್ನೆಲ್ಲಾ ಮುಚ್ಚಿಟ್ಟಿದ್ದರು ಎನ್ನಲಾಗಿದೆ.