ನವದೆಹಲಿ: ವಿಶ್ವಕಪ್ ಫೈನಲ್ ವರೆಗೆ ಹೋಗಿ ಬಂದ ಭಾರತ ಮಹಿಳಾ ಕ್ರಿಕೆಟ್ ತಂಡದ ಶುಭ ದಿನಗಳು ಬಂದಿದೆ ಎಂತಲೇ ಹೇಳಬೇಕು. ಒಂದೆಡೆ ಬಿಸಿಸಿಐ ಮಹಿಳೆಯರನ್ನು ಸನ್ಮಾನಿಸಲು ಏರ್ಪಾಟು ಮಾಡುತ್ತಿದ್ದರೆ, ಕೇಂದ್ರ ಕ್ರೀಡಾ ಸಚಿವ ವಿಜಯ್ ಗೋಯೆಲ್ ಸನ್ಮಾನ ಮಾಡಿಯೇಬಿಟ್ಟಿದ್ದಾರೆ.
ನಿನ್ನೆಯಷ್ಟೇ ಭಾರತಕ್ಕೆ ಬಂದಿಳಿದ ಮಹಿಳಾ ಕ್ರಿಕೆಟ್ ತಂಡವನ್ನು ಕರೆಸಿಕೊಂಡ ಕ್ರೀಡಾ ಸಚಿವರು ತಮ್ಮ ಇಲಾಖೆ ವತಿಯಿಂದ ಕ್ರಿಕೆಟಿಗರನ್ನು ಸನ್ಮಾನಿಸಿದರು. ಇನ್ನೊಂದೆಡೆ ಬಿಸಿಸಿಐ ಕೂಡಾ ಇಂದು ಮಹಿಳಾ ಕ್ರಿಕೆಟಿಗರಿಗೆ ಸನ್ಮಾನ ಸಮಾರಂಭ ಏರ್ಪಡಿಸಿದ್ದು, ಆ ಸಂದರ್ಭದಲ್ಲಿ ನಗದು ಬಹುಮಾನ ನೀಡಿ ಗೌರವಿಸಲಿದೆ.
ಈಗಾಗಲೇ ಬಿಸಿಸಿಐ ಪ್ರತೀ ಆಟಗಾರರಿಗೆ 50 ಲಕ್ಷ ರೂ. ಮತ್ತು ಸಹಾಯಕ ಸಿಬ್ಬಂದಿಗೆ 25 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಿಸಿತ್ತು. ಇದೀಗ ಮಹಿಳಾ ಕ್ರಿಕೆಟಿಗರಿಗೆ ಸಿಗುತ್ತಿರುವ ಅಪೂರ್ವ ಬೆಂಬಲ ನೋಡಿ ಬಿಸಿಸಿಐ ಬಹುಮಾನ ಮೊತ್ತ ಹಾಗೂ ವೇತನ ಹೆಚ್ಚಿಸುವ ಘೋಷಣೆ ಮಾಡಿದರೂ ಅಚ್ಚರಿಯಿಲ್ಲ ಎನ್ನಲಾಗಿದೆ.
ಸ್ವತಃ ಬಿಸಿಸಿಐ ಕಾರ್ಯಕಾರಿ ಮುಖ್ಯಸ್ಥರೇ ಮಹಿಳೆಯರ ವೇತನ ಹೆಚ್ಚಳದ ಬಗ್ಗೆ ಮಾತನಾಡಿದ್ದಾರೆ. ಈ ವರ್ಷದ ಆರಂಭದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ ಗೆದ್ದ ಭಾರತದ ಪುರುಷರ ತಂಡಕ್ಕೆ ಮೊದಲು 50 ಲಕ್ಷ ರೂ. ಬಹುಮಾನ ಘೋಷಿಸಿ ನಂತರ 1 ಕೋಟಿಗೆ ಏರಿಕೆ ಮಾಡಲಾಗಿತ್ತು. ಹೀಗಾಗಿ ಇಷ್ಟೆಲ್ಲಾ ಸೆನ್ಸೇಷನ್ ಕ್ರಿಯೇಟ್ ಮಾಡಿರುವ ಮಹಿಳಾ ಕ್ರಿಕೆಟಿಗರಿಗೆ ನೀಡಲು ಉದ್ದೇಶಿಸಿರುವ ಬಹುಮಾನ ಮೊತ್ತದಲ್ಲೂ ಹೆಚ್ಚಳವಾಗಬಹುದೆಂದು ನಿರೀಕ್ಷಿಸಲಾಗಿದೆ.