ಮುಂಬೈ: ಐಪಿಎಲ್ ಆವೃತ್ತಿಯಲ್ಲಿ ಮುಂಬೈ ಸತತ ಸೋಲನ್ನು ಅನುಭವಿಸಿ, ಟ್ರೋಲ್‌ಗೆ ಒಳಗಾದ ಬೆನ್ನಲ್ಲೇ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರು ದೇವರ ಮೊರೆ ಹೋಗಿದ್ದಾರೆ.
ಪಾಂಡ್ಯ ಇಂದು ಗುಜರಾತ್‌ನ ಸೋಮನಾಥ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದ್ದು, ಈ ವಿಡಿಯೋವನ್ನು ದೇವಸ್ಥಾನದ ಸಮಿತಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.
ಈ ಆವೃತ್ತಿಯಲ್ಲಿ ತಾನಾಡಿದ ಮೊದಲ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ 6 ವಿಕೆಟ್ ಅಂತರದಿಂದ ಮುಗ್ಗರಿಸಿದ್ದ ಮುಂಬೈ, ನಂತರ ಸನ್‌ರೈಸರ್ಸ್ ಹೈದರಾಬಾದ್ ಎದುರು 31 ರನ್ ಅಂತರದಿಂದ ಸೋತ್ತಿತ್ತು. ಮೂರನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ ವಿರುದ್ಧ 6 ವಿಕೆಟ್‌ಗಳಿಂದ ಸೋಲೊಪ್ಪಿಕೊಂಡಿದೆ.
ಗುಜರಾತ್ ಟೈಟನ್ಸ್‌ಗೆ ಗುಡ್‌ಬೈ ಹೇಳಿದ ಪಾಂಡ್ಯ ಅವರಿಗೆ ಮುಂಬೈ ತಂಡದ ನಾಯಕನ ಹೊಣೆಯನ್ನು ನೀಡಲಾಗಿತ್ತು. ಆದರೆ ಅವರ ನಾಯಕತ್ವದಲ್ಲಿ ತಂಡ ಕಳಪೆ ಪ್ರದರ್ಶನವನ್ನು ನೀಡಿ, ಸತತ ಸೋಲನ್ನು ಅನುಭವಿಸಿದೆ. ಅದಲ್ಲದೆ ರೋಹಿತ್ ಶರ್ಮಾ ಅವರನ್ನು ನಾಯಕನ ಸ್ಥಾನದಿಂದ ಇಳಿಸಿದ್ದಕ್ಕೆ ಅವರ ಅಭಿಮಾನಿಗಳು ಅಸಮಾಧಾನವಾಗಿದ್ದರು. ಇನ್ನೂ ಸತತ ಸೋಲಿಗೆ ಪಾಂಡ್ಯ ಅವರ ನಾಯಕತ್ವವೇ ಕಾರಣ ಎನ್ನಲಾಗಿದೆ. ಪಂದ್ಯಗಳು ನಡೆಯುವಾಗಲೇ ಹಾರ್ದಿಕ್ ವಿರುದ್ಧ ಘೋಷಣೆಗಳನ್ನು ಕೂಗಿ, ಕಿಡಿಕಾರುತ್ತಿದ್ದಾರೆ.
ಈ ಬೆಳವಣಿಗೆ ನಂತರ ಪಾಂಡ್ಯ ಅವರು ದೇವರ ಮೊರೆ ಹೋಗಿದ್ದಾರೆ.
ಏಪ್ರಿಲ್ 7ರಂದು ನಡೆಯುವ ಮುಂದಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಸವಾಲು ಎದುರಿಸಲಿದೆ.