ರವಿಶಾಸ್ತ್ರಿ ಕೋಚ್ ಆಗುವುದು ಗಂಗೂಲಿಗೆ ಇಷ್ಟವಿರಲಿಲ್ಲ, ಅದಕ್ಕೆ ಗಂಗೂಲಿ ಮಾಡಿದ್ದು ಏನು ಗೊತ್ತಾ?
ಬುಧವಾರ, 12 ಜುಲೈ 2017 (10:59 IST)
ಮುಂಬೈ: ರವಿಶಾಸ್ತ್ರಿ ಟೀಂ ಇಂಡಿಯಾ ಕೋಚ್ ಆಗುವುದು ಮಾಜಿ ನಾಯಕ ಹಾಗೂ ಕ್ರಿಕೆಟ್ ಸಲಹಾ ಸಮಿತಿ ಸದಸ್ಯರಲ್ಲೊಬ್ಬರಾದ ಸೌರವ್ ಗಂಗೂಲಿಗೆ ಸುತರಾಂ ಇಷ್ಟವಿರಲಿಲ್ಲ. ಅದಕ್ಕೆ ಕಳೆದ ಬಾರಿ ಕೋಚ್ ಆಯ್ಕೆ ಸಂದರ್ಭ ಇಬ್ಬರ ನಡುವೆ ನಡೆದ ಕೆಸರೆರಚಾಟ.
ಹೀಗಾಗಿ ಶಾಸ್ತ್ರಿ ಕೋಚ್ ಆಗದಂತೆ ಗಂಗೂಲಿ ತಮ್ಮಿಂದಾದ ಪ್ರಯತ್ನ ನಡೆಸಿದ್ದರು. ಇದೇ ಕಾರಣಕ್ಕೆ ಕೋಚ್ ಹೆಸರು ಘೋಷಣೆ ಮಾಡುವಾಗ ಸಾಕಷ್ಟು ಗೊಂದಲಗಳು ನಡೆದವು. ಆದರೆ ಇನ್ನೊಬ್ಬ ಸದಸ್ಯರಾದ ಸಚಿನ್ ತೆಂಡುಲ್ಕರ್ ವೈಯಕ್ತಿಕ ಹಿತಾಸಕ್ತಿಗಿಂತ ತಂಡದ ಹಿತ ಮುಖ್ಯ ಎಂದು ಗಂಗೂಲಿಗೆ ಕಿವಿ ಮಾತು ಹೇಳಿದರು ಎನ್ನಲಾಗಿದೆ.
ಹಾಗಿದ್ದರೂ, ರವಿಶಾಸ್ತ್ರಿಗೆ ಮೂಗುದಾರ ಹಾಕಲು ಗಂಗೂಲಿ ಯಶಸ್ವಿಯಾದರು. ಶಾಸ್ತ್ರಿ ಕೋಚ್ ಆದರೆ ಜಹೀರ್ ಖಾನ್ ಬೌಲಿಂಗ್ ಕೋಚ್ ಆಗಬೇಕೆಂದು ಪಟ್ಟು ಹಿಡಿದರು ಎನ್ನಲಾಗಿದೆ. ಇದರೊಂದಿಗೆ ರವಿಶಾಸ್ತ್ರಿ ಮೆಚ್ಚಿನ ಭರತ್ ಅರುಣ್ ಗೆ ಬೌಲಿಂಗ್ ಕೋಚ್ ಹುದ್ದೆ ಸಿಗಲಿಲ್ಲ. ಅಲ್ಲದೆ, ದ್ರಾವಿಡ್ ರನ್ನೂ ಬ್ಯಾಟಿಂಗ್ ಸಲಹೆಗಾರರನ್ನಾಗಿ ನೇಮಿಸುವ ಮೂಲಕ ಗಂಗೂಲಿ ರವಿಶಾಸ್ತ್ರಿಗೆ ಎಲ್ಲಾ ಕಡೆಯಿಂದ ನಿರ್ಬಂಧ ಹೇರುವ ಪ್ರಯತ್ನ ನಡೆಸಿದ್ದಾರೆಂದು ಕೆಲವು ಬಿಸಿಸಿಐ ಮೂಲಗಳು ಆಂಗ್ಲ ಮಾಧ್ಯಮಗಳಿಗೆ ಹೇಳಿವೆ.