ಕೊಹ್ಲಿ ರೂಪದಲ್ಲಿ ಸಚಿನ್ ತೆಂಡುಲ್ಕರ್ ಕಂಡ ಮೇಲೆ ಪೂಜಾರ ರೂಪದಲ್ಲಿ ದ್ರಾವಿಡ್ ನ ಕಾಣಬಾರದೇ?!

ಕೃಷ್ಣವೇಣಿ ಕೆ

ಸೋಮವಾರ, 20 ಮಾರ್ಚ್ 2017 (09:37 IST)
ರಾಂಚಿ: ಅದೊಂದಿತ್ತು ಕಾಲ. ಟೀಂ ಇಂಡಿಯಾ ಯಾವುದೇ ಪಂದ್ಯವಾಡಲಿ. ಎಲ್ಲರ ಗಮನ ಸಚಿನ್ ತೆಂಡುಲ್ಕರ್ ಮೇಲೆಯೇ ಇರುತ್ತಿತ್ತು. ಎದುರಾಳಿಗಳನ್ನು ಅವರನ್ನೇ ಟಾರ್ಗೆಟ್ ಮಾಡುತ್ತಿದ್ದರು. ಆದರೆ ರಾಹುಲ್ ದ್ರಾವಿಡ್ ಸದ್ದಿಲ್ಲದೆಯೇ ಎದುರಾಳಿಗಳ ತಲೆ ಕೆಡಿಸುತ್ತಿದ್ದರು.

 

 
ಆದರೂ ಯಾವುದೇ ಎದುರಾಳಿಗಳು ಮೊದಲು ಟಾರ್ಗೆಟ್ ಮಾಡುತ್ತಿದ್ದುದು ಸಚಿನ್ ತೆಂಡುಲ್ಕರ್ ರನ್ನೇ. ಎಲ್ಲರ ಹೊಗಳಿಕೆಗೆ ಹೆಚ್ಚು ಪಾತ್ರವಾಗುತ್ತಿದ್ದುದು, ತೆಂಡುಲ್ಕರ್ ಒಬ್ಬರೇ. ಸಚಿನ್ ಸ್ವಭಾವದಲ್ಲಿ ಶಾಂತನಾದರೂ, ಆಟದಲ್ಲಿ ಆಕ್ರಮಣಕಾರಿ. ದ್ರಾವಿಡ್ ಸ್ವಭಾವ ಮತ್ತು ಆಟ ಎರಡೂ ಸಾಗರದಷ್ಟೇ ಅಚಲ. ಹಾಗಾಗಿ ಎಲ್ಲರಿಗೂ ತೆಂಡುಲ್ಕರ್ ಇಷ್ಟವಾಗುತ್ತಿದ್ದರು. ಕಷ್ಟ ಬಂದಾಗ ಮಾತ್ರ ದ್ರಾವಿಡ್ ನೆನಪಾಗುತ್ತಿದ್ದರು.

 
ಇಂದೂ ಹಾಗೇ. ಭಾರತದ ವಿರುದ್ಧ ಟೆಸ್ಟ್ ಆಡಲು ಬರುವ ಪ್ರತೀ ಎದುರಾಳಿಗಳ ಮೊದಲ ಟಾರ್ಗೆಟ್ ವಿರಾಟ್ ಕೊಹ್ಲಿ. ಚೇತೇಶ್ವರ ಪೂಜಾರರನ್ನು ಯಾರೂ ಗಮನಿಸುವುದಿಲ್ಲ. ಅವರೊಂಥರಾ ತಂಡದೊಳಗಿನ ಅಂತರ್ಗಾಮಿ ಶಕ್ತಿ. ಆಂಗ್ಲ ಭಾಷೆಯಲ್ಲಿ ಹೇಳುವುದಾದರೆ, ಅನ್ ನೋಟೀಸ್ಡ್ ಎನಿಮಿ.

 
ಹೀಗಾಗಿ ಪ್ರತೀ ಪಂದ್ಯದಲ್ಲೂ ಪೂಜಾರ ಒತ್ತಡವಿಲ್ಲದೇ ಆಡುತ್ತಾರೆ. ದೊಡ್ಡ ಇನಿಂಗ್ಸ್ ಕಟ್ಟುತ್ತಾರೆ. ವೈಯಕ್ತಿಕ ದಾಖಲೆಗಳಿಗಿಂತ ಟೆಸ್ಟ್ ಕ್ರಿಕೆಟ್ ಗೆ ಹೇಳಿ ಮಾಡಿಸಿದ ಇನಿಂಗ್ಸ್ ಆಡುತ್ತಾರೆ. ಇದರಿಂದಾಗಿ  ತಂಡವನ್ನು ಬಚಾವ್ ಮಾಡುತ್ತಾರೆ.

 
ಈ ಋತುವಿನಲ್ಲಿ ಪೂಜಾರ ಅತೀ ಹೆಚ್ಚು ರನ್ ಗಳಿಸಿದ ದಾಖಲೆ ಮಾಡಿದ್ದಾರೆ. ನಿನ್ನೆ ಅವರು ಮಾಡಿದ್ದು ಟೆಸ್ಟ್ ಕ್ರಿಕೆಟ್ ನಲ್ಲಿ ಮೂರನೇ ದ್ವಿಶತಕ. ಪ್ರಸಕ್ತ ಟೆಸ್ಟ್ ಶ್ರೇಯಾಂಕದಲ್ಲಿ ಅವರು 6 ನೇ ಕ್ರಮಾಂಕದಲ್ಲಿದ್ದಾರೆ. ಇದು ಅವರ ವೈಯಕ್ತಿಕ ಹೆಗ್ಗಳಿಕೆ.

 
ಆದರೆ ಕೊಹ್ಲಿಯನ್ನು ಹೇಗೆ ನಾವು ತೆಂಡುಲ್ಕರ್ ರನ್ನು ಹುಡುಕುತ್ತೇವೆಯೋ, ಹಾಗೇ ಪೂಜಾರನಲ್ಲಿ ಒಬ್ಬ ದ್ರಾವಿಡ್ ನನ್ನು ಕಾಣಬಹುದು. ದಾಖಲೆಗಳು,  ಆಕ್ರಮಣಕಾರಿ ಸ್ವಭಾವಗಳು ಎಲ್ಲಾ ಕೊಹ್ಲಿಗೇ ಇರಲಿ. ಆದರೆ ಪೂಜಾರ ದ್ರಾವಿಡ್ ನಷ್ಟೇ ಎಷ್ಟೇ ಹೊತ್ತು ನಿಂತು ಆಡಿದರೂ ತಾವು ಸುಸ್ತಾಗುವುದಿಲ್ಲ, ಎದುರಾಳಿಗಳನ್ನು ಸುಸ್ತು ಮಾಡುತ್ತಾರೆ. ಅದರಿಂದಾಗಿಯೇ ಕಳೆದ 44 ವರ್ಷಗಳ ಇತಿಹಾಸದಲ್ಲೇ ಆಸ್ಟ್ರೇಲಿಯಾ ಇಷ್ಟು ಸುದೀರ್ಘ ಸಮಯ ಯಾರಿಗೂ ಬೌಲಿಂಗ್ ಮಾಡಿರಲಿಲ್ಲ ಎಂಬುದೇ ಸಾಕ್ಷಿ!

 
ತಮ್ಮ ಕ್ರಿಕೆಟ್ ಬದುಕಿನ ಆರಂಭದಲ್ಲಿ ಪೂಜಾರ ಮೇಲೆ ದ್ರಾವಿಡ್ ಪ್ರಭಾವ ಸಾಕಷ್ಟಿತ್ತು. ಹಾಗಂತ ಸ್ವತಃ ಪೂಜಾರ ಹೇಳಿಕೊಂಡಿದ್ದರು. ಅವರು ಆಡುವ ಶೈಲಿಯಿಂದ ಹಿಡಿದು ಪ್ರತಿಯೊಂದರಲ್ಲೂ ದ್ರಾವಿಡ್ ರನ್ನು ಕಾಣಬಹುದು. ದ್ರಾವಿಡ್ ನಿವೃತ್ತಿಯಾದ ಮೇಲೆ ಭಾರತಕ್ಕೆ ಇನ್ನು ಮಿಸ್ಟರ್ ಡಿಪೆಂಡೇಬಲ್ ಯಾರು ಎಂದು ಪ್ರಶ್ನೆ ಮೂಡಿತ್ತು. ಅದನ್ನೀಗ ತುಂಬುವ ಕೆಲಸವನ್ನು ಪೂಜಾರ ಮಾಡುತ್ತಿದ್ದಾರೆ. ಆಲ್ ದಿ ಬೆಸ್ಟ್!

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ