ಮಂಗಳೂರು: ಟೀಂ ಇಂಡಿಯಾ ಕ್ರಿಕೆಟಿಗ, ಕರ್ನಾಟಕ ಮೂಲದ ಕೆಎಲ್ ರಾಹುಲ್ ನಿನ್ನೆ ಧರ್ಮಸ್ಥಳಕ್ಕೆ ಭೇಟಿ ನೀಡಿದರು. ಈ ವೇಳೆ ಅವರಿಗೆ ಉಡುಗೊರೆ ಕೊಟ್ಟು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹರಸಿ ಕಳುಹಿಸಿಕೊಟ್ಟಿದ್ದಾರೆ.
ಗಾಯಗೊಂಡು ಸದ್ಯಕ್ಕೆ ಕ್ರಿಕೆಟ್ ನಿಂದ ದೂರವಿರುವ ಕೆಎಲ್ ರಾಹುಲ್ ಬೆಂಗಳೂರಿನ ಎನ್ ಸಿಎನಲ್ಲಿ ಪುನಶ್ಚೇತನ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಏಷ್ಯಾ ಕಪ್ ವೇಳೆಗೆ ತಂಡಕ್ಕೆ ಮರಳು ಗುರಿ ಹಾಕಿಕೊಂಡಿರುವ ರಾಹುಲ್ ಇದಕ್ಕಾಗಿ ಕಠಿಣ ಪರಿಶ್ರಮ ಪಡುತ್ತಿದ್ದಾರೆ.
ಈ ನಡುವೆ ಅವರು ತಮ್ಮ ಸಂಗಡಿಗರೊಂದಿಗೆ ಧರ್ಮಸ್ಥಳ ಮಂಜುನಾಥಸ್ವಾಮಿಯ ದರ್ಶನ ಪಡೆದಿದ್ದಾರೆ. ಸಾಂಪ್ರದಾಯಿಕ ಪಂಚೆ ತೊಟ್ಟುಕೊಂಡು ದೇವಾಲಯಕ್ಕೆ ಭೇಟಿ ಕೊಟ್ಟ ರಾಹುಲ್ ಬಳಿಕ ಧರ್ಮಾಧಿಕಾರಿಗಳನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಅವರಿಗೆ ಚಿನ್ನ ಲೇಪಿತ ಪ್ರತಿಮೆಯೊಂದನ್ನು ನೀಡಿ ಹೆಗ್ಗಡೆಯವರು ಆಶೀರ್ವದಿಸಿದರು.