ಏಕದಿನ, ಟಿ-ಟ್ವೆಂಟಿ ನಾಯಕತ್ವಕ್ಕೆ ಮಹೇಂದ್ರ ಸಿಂಗ್ ಧೋನಿ ಗುಡ್ ಬೈ
ಗುರುವಾರ, 5 ಜನವರಿ 2017 (04:56 IST)
ರಾಂಚಿ: ಟೀಂ ಇಂಡಿಯಾದ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿ ಏಕದಿನ ಮತ್ತು ಟಿ-ಟ್ವೆಂಟಿ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಕೊನೆಗೂ ಅವರು ಯಾವಾಗ ಕ್ಯಾಪ್ಟನ್ ಶಿಪ್ ಗೆ ಗುಡ್ ಬೈ ಹೇಳುತ್ತಾರೋ ಎಂದು ಕಾದು ಕುಳಿತಿದ್ದ ಟೀಕಾಕಾರರಿಗೆ ಉತ್ತರ ಕೊಟ್ಟಿದ್ದಾರೆ.
9 ವರ್ಷಗಳ ಕಾಲ ಭಾರತೀಯ ಕ್ರಿಕೆಟ್ ನ್ನು ಯಶಸ್ಸಿನ ಉತ್ತುಂಗಕ್ಕೆ ಕರೆದೊಯ್ದಿದ್ದ ಧೋನಿ ಇನ್ನು ಮುಂದೆ ತಂಡದಲ್ಲಿ ಕೇವಲ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಆಗಿ ಮುಂದುವರಿಯಲಿದ್ದಾರೆ. ಡಿಸೆಂಬರ್ 2014 ರಂದು ಧೋನಿ ಟೆಸ್ಟ್ ಮಾದರಿಯ ಪಂದ್ಯದಿಂದ ನಿವೃತ್ತಿಯಾಗಿದ್ದರು.
ಒಟ್ಟು 199 ಏಕದಿನ ಪಂದ್ಯಗಳಲ್ಲಿ ಮತ್ತು 72 ಟಿಟ್ವೆಂಟಿ ಪಂದ್ಯಗಳಲ್ಲಿ ಅವರು ಭಾರತ ತಂಡವನ್ನು ಮುನ್ನಡೆಸಿದ್ದರು. ಧೋನಿಯಷ್ಟು ಪಂದ್ಯಗಳಲ್ಲಿ ಯಾವ ನಾಯಕನೂ ತಂಡವನ್ನು ಮುನ್ನಡೆಸಿರಲಿಲ್ಲ.
ಮಹಿ ನಾಯಕತ್ವದಲ್ಲಿ ಭಾರತ ಏಕದಿನ ವಿಶ್ವಕಪ್, ಟಿ-ಟ್ವೆಂಟಿ ವಿಶ್ವಕಪ್, ಏಷ್ಯಾ ಕಪ್, ಚಾಂಪಿಯನ್ಸ್ ಟ್ರೋಫಿ ಗೆದ್ದಿತ್ತು. 2009 ರಲ್ಲಿ ಮೊದಲ ಬಾರಿಗೆ ಭಾರತ ತಂಡ ಅವರ ನಾಯಕತ್ವದಲ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ ನಂ.1 ಎನಿಸಿಕೊಂಡಿತ್ತು. ಧೋನಿ ನಿವೃತ್ತಿ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ ಬಿಸಿಸಿಐ ಸಿಇಒ ರಾಹುಲ್ ಜೋಹ್ರಿ “ಎಲ್ಲಾ ಭಾರತೀಯರ ಪರವಾಗಿ ದೇಶದ ಕ್ರಿಕೆಟ್ ನ್ನು ಉತ್ತುಂಗಕ್ಕೆ ಕೊಂಡೊಯ್ದ ಎಂಎಸ್ ಧೋನಿಗೆ ಧನ್ಯವಾದ ತಿಳಿಸಲು ಬಯಸುತ್ತೇನೆ” ಎಂದಿದ್ದಾರೆ. ಇದರೊಂದಿಗೆ ವಿರಾಟ್ ಕೊಹ್ಲಿ ಎಲ್ಲಾ ಮಾದರಿಯ ಪಂದ್ಯಗಳಿಗೆ ನಾಯಕನಾಗುವುದು ಬಹುತೇಕ ಖಚಿತವಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ