ಕನಿಷ್ಠ ಶ್ರೇಯಾಂಕಕ್ಕೆ ಕುಸಿದ ಪಾಕ್: ವಿಶ್ವಕಪ್ ನೇರ ಅರ್ಹತೆ ಹಾದಿ ದುರ್ಗಮ

ಮಂಗಳವಾರ, 6 ಸೆಪ್ಟಂಬರ್ 2016 (15:24 IST)
ಐಸಿಸಿ ನೂತನ ಏಕದಿನ ಶ್ರೇಯಾಂಕ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇತ್ತೀಚಿಗೆ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯನ್ನು 1-4ರಲ್ಲಿ ಸೋತಿರುವ ಪಾಕಿಸ್ತಾನ, ಶ್ರೇಯಾಂಕದಿತಿಹಾಸದಲ್ಲಿ ಮೊದಲ ಬಾರಿಗೆ ಕನಿಷ್ಠ ಅಂಕಗಳನ್ನು ಗಳಿಸಿ ಕೊನೆಯ ಸ್ಥಾನಕ್ಕೆ ಜಾರಿದೆ. ನೆರೆ ದೇಶದ ಈ ಅಧಃ ಪತನ 2019ರಲ್ಲಿ ನಡೆಯಲಿರುವ ವಿಶ್ವ ಕಪ್‌ಗೆ ಪಾಕಿಸ್ತಾನದ ನೇರ ಪ್ರವೇಶದ ಹಾದಿಯನ್ನು ದುರ್ಗಮಗೊಳಿಸಿದೆ. 

ಇಂಗ್ಲೆಂಡ್ ವಿರುದ್ಧದ ಐದನೆಯ ಮತ್ತು ಕೊನೆಯ ಪಂದ್ಯವನ್ನು ನಾಲ್ಕು ವಿಕೆಟ್‌ಗಳಿಂದ ಜಯಿಸಿದರೂ ಪಾಕಿಸ್ತಾನ ಗಂಭೀರ ಅಪಾಯದಲ್ಲಿ ಸಿಲುಕಿದೆ. 8 ನೇ ಸ್ಥಾನದಲ್ಲಿರುವ ವೆಸ್ಟ್ ಇಂಡೀಸ್‌ಗಿಂತ ಪಾಕ್ 8 ಅಂಕ ಕೆಳಗಿದೆ. 
 
87 ಅಂಕಗಳಿಂದ ಇಂಗ್ಲೆಂಡ್ ವಿರುದ್ಧದ ಸರಣಿಯನ್ನು ಆರಂಭಿಸಿದ್ದ ಪಾಕಿಸ್ತಾನ ಹೀನಾಯ ಸೋಲಿನಿಂದಾಗಿ 1 ಅಂಕ ಕಳೆದುಕೊಂಡು 
86ಕ್ಕೆ ಕುಸಿದಿದೆ.  ಶ್ರೇಯಾಂಕ ಪದ್ಧತಿ ಪರಿಚಯವಾದಾಗಿನಿಂದ (2001)  ಇಲ್ಲಿಯವರೆಗೆ ಪಾಕ್ ಎಂದಿಗೂ ಸಹ ಈ ದಯನೀಯ ಸ್ಥಿತಿಗೆ ಇಳಿದಿರಲಿಲ್ಲ. 
 
2019ರಲ್ಲಿ ನಡೆಯಲಿರುವ ವಿಶ್ವ ಕಪ್‌ಗೆ ನೇರ ಪ್ರವೇಶ ಗಿಟ್ಟಿಸಬೇಕೆಂದರೆ ಪಾಕ್ ಮುಂಬರುವ ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾದೊಂದಿಗಿನ ಏಕದಿನ ಸರಣಿಗಳಲ್ಲಿ ತಮ್ಮ ಅಂಕವನ್ನು ಹೆಚ್ಚಿಸಿಕೊಳ್ಳಬೇಕಾಗುತ್ತದೆ. ಇಲ್ಲವಾದರೆ ಪಾಕ್‌ಗೆ ಅರ್ಹತಾ ಸುತ್ತು ಆಡುವುದು ಅನಿವಾರ್ಯ. 
 
124 ಅಂಕ ಸಂಪಾದಿಸಿರುವ ಆಸೀಸ್ ಮೊದಲ ಸ್ಥಾನದಲ್ಲಿದ್ದರೆ, 113 ಅಂಕ ಗಳಿಸಿರುವ ನ್ಯೂಜಿಲೆಂಡ್ ಎರಡನೆಯ ಸ್ಥಾನದಲ್ಲಿದೆ. ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ತಲಾ 110 ಅಂಕ ಗಳಿಸಿದ್ದರೂ ದಶಾಂಶಗಳ ಅಂಕಗಳ ಆಧಾರದ ಮೇಲೆ ಭಾರತಕ್ಕೆ ಮೂರನೆಯ ಸ್ಥಾನ ಲಭಿಸಿದೆ. 
 
ತವರು ನೆಲದಲ್ಲಿ ಪಾಕಿಸ್ತಾನದ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ ಇಂಗ್ಲೆಂಡ್ (104 ಅಂಕ) ತನ್ನ ಸ್ಥಾನದಲ್ಲಿ ಬಡ್ತಿ ಪಡೆದಿದ್ದು 5ನೆಯ ಸ್ಥಾನಕ್ಕೇರಿದೆ. ಆಸೀಸ್ ವಿರುದ್ಧ ಹೀನಾಯ ಸೋಲು ಕಂಡ ಲಂಕನ್ನರು 101 ಅಂಕಗಳೊಂದಿಗೆ 6ನೆಯ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ.
 
98 ಅಂಕ ಗಳಿಸಿ ಬಾಂಗ್ಲಾ 7 ನೇ ಸ್ಥಾನ, 94 ಅಂಕದೊಂದಿಗೆ ವೆಸ್ಟ್ ಇಂಡೀಸ್ 8 ಮತ್ತು 86 ಅಂಕದೊಂದಿಗೆ ಪಾಕ್ 9 ನೇ ಸ್ಥಾನದಲ್ಲಿದೆ.
 
30 ಸೆಪ್ಟೆಂಬರ್ 2017ರೊಳಗೆ ಟಾಪ್ 8 ಸ್ಥಾನದಲ್ಲಿರುವ ತಂಡಗಳು ವಿಶ್ವಕಪ್‌ಗೆ ನೇರ ಪ್ರವೇಶ ಪಡೆಯಲಿವೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ