ಅಂದು ಸಚಿನ್ ಅನುಭವಿಸಿದ ಪರಿಸ್ಥಿತಿಯೇ ಈಗ ರೋಹಿತ್ ಶರ್ಮಾಗೂ ಬಂದಿದೆ!

ಕೃಷ್ಣವೇಣಿ ಕೆ

ಶುಕ್ರವಾರ, 12 ಜುಲೈ 2019 (09:20 IST)
ಲಂಡನ್: 2003 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ರನ್ ಹೊಳೆಯನ್ನೇ ಹರಿಸಿದ್ದರು. ಈ ವಿಶ್ವಕಪ್ ಟೂರ್ನಿಯಲ್ಲಿ ಅಂದು ಸಚಿನ್ ಮಾಡಿದ್ದ ದಾಖಲೆಗಳನ್ನು ಮುರಿದರು. ಆದರೆ ಕೊನೆಗೆ ಇಬ್ಬರೂ ಒಂದೇ ಪರಿಸ್ಥಿತಿ ಎದುರಿಸಿದರು!


ದ.ಆಫ್ರಿಕಾದಲ್ಲಿ ನಡೆದ ಆ ಕ್ರಿಕೆಟ್ ಟೂರ್ನಿಯಲ್ಲಿ ಸಚಿನ್ ಪ್ರತೀ ಪಂದ್ಯದಲ್ಲೂ ಅದ್ಭುತವಾಗಿ ಆಡಿ ಭಾರತ ಆಸ್ಟ್ರೇಲಿಯಾ ಎದುರು ಫೈನಲ್ ವರೆಗೆ ಬಂದಿತ್ತು. ಆದರೆ ಫೈನಲ್ ನಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಮಾಡಿ ರನ್ ಹೊಳೆಯನ್ನೇ ಚಚ್ಚಿ ಹಾಕಿತ್ತು. ಅಂದಿನ ಕಾಲಕ್ಕೆ ಆಸ್ಟ್ರೇಲಿಯಾ 350 ಗಳಿಸಿದ್ದು ಏರಲಾರದ ಬಂಡೆಯಾಗಿತ್ತು.

ಚೇಸ್ ಮಾಡಲು ಆರಂಭಿಸಿದ್ದ ಭಾರತಕ್ಕೆ ಅದುವರೆಗೆ ಅದ್ಭುತ ಫಾರ್ಮ್ ನಲ್ಲಿದ್ದ ಸಚಿನ್ ಆರಂಭದಲ್ಲಿಯೇ ನಾಲ್ಕು ರನ್ ಗಳಿಗೆ ಕ್ಯಾಚ್ ಔಟ್ ಆಗುವ ಮೂಲಕ ಆಘಾತ ಸಿಕ್ಕಿತ್ತು. ಬಳಿಕ ವೀರೇಂದ್ರ ಸೆಹ್ವಾಗ್ ಒಬ್ಬರೇ ಏಕಾಂಗಿಯಂತೆ ಕೊನೆಯವರೆಗೂ ಹೋರಾಡಿದರೂ ಭಾರತದ ಸೋಲು ತಪ್ಪಿಸಲಾಗಲಿಲ್ಲ. ಆ ಟೂರ್ನಿಯಲ್ಲಿ ಒಟ್ಟು 673 ರನ್ ಗಳಿಸಿದ ಸಚಿನ್ ವಿಶ್ವದಾಖಲೆ ಮಾಡಿದ್ದಕ್ಕೆ ಚಿನ್ನದ ಬ್ಯಾಟ್ ನ್ನು ಗೌರವ ಪೂರ್ವಕವಾಗಿ ಬಹುಮಾನ ಪಡೆದರು. ಆದರೆ ಆ ಬಹುಮಾನ ಪಡೆಯುವಾಗ ಸಚಿನ್ ಗೆ ಸಂತೋಷವಾಗಲಿಲ್ಲ. ಕಾರಣ, ಭಾರತ ಆ ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಬಹುದು ಎಂಬ ಲೆಕ್ಕಾಚಾರ ತಲೆಕೆಳಗಾಗಿತ್ತು. ಎಲ್ಲರೂ ನಿರಾಶೆಯಲ್ಲಿದ್ದರು.

ಅದೇ ಪರಿಸ್ಥಿತಿಯಲ್ಲಿ ಇಂದು ರೋಹಿತ್ ಶರ್ಮಾ ಇದ್ದಾರೆ. ಈ ವಿಶ್ವಕಪ್ ನ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಸೋಲುವಾಗ ಹೆಚ್ಚು ದುಃಖವಾಗಿದ್ದು ರೋಹಿತ್ ಗೆ. ಯಾಕೆಂದರೆ ಅವರ ಪಾಲಿಗೆ ಇದು ಕನಸಿನ ವಿಶ್ವಕಪ್ ಆಗಿತ್ತು. ಪ್ರತೀ ಪಂದ್ಯದಲ್ಲೂ ಶತಕ, ದಾಖಲೆ ಮಾಡಿ ನಿರ್ಣಾಯಕ ಪಂದ್ಯದಲ್ಲೇ ಅವರು ತಂಡಕ್ಕೆ ಆಧಾರವಾಗಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಅವರಿಗೆ ಇಷ್ಟು ದಿನ ಹರಿಸಿದ ರನ್ ಹೊಳೆಗೆ ಯಾವುದೇ ಬೆಲೆ ಇಲ್ಲ ಎನಿಸಿರಬಹುದು. ಈ ವಿಶ್ವಕಪ್ ನಲ್ಲಿ ರೋಹಿತ್ ಸಚಿನ್ ದಾಖಲೆ ಮುರಿಯುವುದರ ಜತೆಗೆ ಅವರು ಅಂದು ಅನುಭವಿಸಿದ ದುಃಖವನ್ನೂ ಅನುಭವಿಸಿದ್ದಾರೆ ಎನ್ನುವುದು ವಿಪರ್ಯಾಸ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ