ಗಂಗೂಲಿ-ಶಾಸ್ತ್ರಿ ಜಗಳದಲ್ಲಿ ಸೆಹ್ವಾಗ್ ಗೆ ಲಾಭ?!

ಮಂಗಳವಾರ, 11 ಜುಲೈ 2017 (09:49 IST)
ಮುಂಬೈ: ಇಬ್ಬರ ಜಗಳ ಮೂರನೆಯವನಿಗೆ ಲಾಭ ಎಂಬ ಗಾದೆಯಿದೆ. ಅದೀಗ ಟೀಂ ಇಂಡಿಯಾ ಕೋಚ್ ಹುದ್ದೆಯ ವಿಚಾರದಲ್ಲಿ ಸತ್ಯವಾಗುವ ಲಕ್ಷಣ ಗೋಚರಿಸುತ್ತಿದೆ.


ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿರುವ ರವಿ ಶಾಸ್ತ್ರಿ ಮತ್ತು ಕೋಚ್ ಆಯ್ಕೆ ಸಮಿತಿ ಸದಸ್ಯರಾಗಿರುವ ಸೌರವ್ ಗಂಗೂಲಿ ನಡುವಿನ ತಿಕ್ಕಾಟ ಇನ್ನೊಬ್ಬ ಕೋಚ್ ಅಭ್ಯರ್ಥಿ ವೀರೇಂದ್ರ ಸೆಹ್ವಾಗ್ ಗೆ ಲಾಭವಾಗುವ ನಿರೀಕ್ಷೆ ಕಾಣುತ್ತಿದೆ.

ಎಲ್ಲಾ ಸರಿಯಾಗಿದ್ದರೆ, ನಿನ್ನೆಯೇ ಹೊಸ ಕೋಚ್ ಘೋಷಣೆಯಾಗಬೇಕಿತ್ತು. ಸೆಹ್ವಾಗ್, ರವಿಶಾಸ್ತ್ರಿ ಸೇರಿದಂತೆ ಐವರು ನಿನ್ನೆ ಸಂದರ್ಶನ ನೀಡಿದ್ದರು ಕೂಡಾ. ಹಾಗಿದ್ದರೂ, ಗಂಗೂಲಿಗೆ ಶಾಸ್ತ್ರಿ ಕೋಚ್ ಆಗುವುದು ಇಷ್ಟವಿಲ್ಲ. ಅದೇ ಕಾರಣಕ್ಕೆ ಇನ್ನೂ ಕೆಲವು ದಿನ ಕೋಚ್ ಘೋಷಣೆ ಮುಂದೂಡಲಾಗಿದೆ ಎನ್ನಲಾಗಿದೆ.

ನಿನ್ನೆ ಸೌರವ್, ಸಚಿನ್ ಮತ್ತು ಲಕ್ಷ್ಮಣ್ ಎದುರು ಸಂದರ್ಶನ ನೀಡಿದ್ದ ಸೆಹ್ವಾಗ್ ಮೂವರು ಕ್ರಿಕೆಟ್ ದಿಗ್ಗಜರನ್ನು ತಮ್ಮ ಯೋಜನೆಗಳಿಂದ ಇಂಪ್ರೆಸ್ ಮಾಡಿದ್ದಾರೆ ಎನ್ನಲಾಗಿದೆ. ಅಲ್ಲದೆ ವಿರಾಟ್ ಕೋಚ್ ಕಾರ್ಯವೈಖರಿಯನ್ನು ಅರಿತುಕೊಳ್ಳಬೇಕು ಎಂಬ ಗಂಗೂಲಿ ಹೇಳಿಕೆ ರವಿ ಶಾಸ್ತ್ರಿ ಕೋಚ್ ಆಗಲ್ಲ ಎಂಬುದಕ್ಕೆ ಸುಳಿವು ನೀಡಿದಂತಿದೆ.

ಇದೇ ಕಾರಣಕ್ಕೆ ಕೊಹ್ಲಿ ಫೇವರಿಟ್ ರವಿ ಶಾಸ್ತ್ರಿಯನ್ನು ಕೈ ಬಿಟ್ಟು ಸೆಹ್ವಾಗ್  ರನ್ನು ಆರಿಸುವುದಕ್ಕೇ ಕೊಹ್ಲಿ ಜತೆ ಮಾತುಕತೆ ನಡೆಸಲು ಕ್ರಿಕೆಟ್ ಸಲಹಾ ಸಮಿತಿ ಮುಂದಾಗಿರಬಹುದು ಎಂದು ವಿಶ್ಲೇಷಿಸಲಾಗಿದೆ. ಏನೇ ಆಗಿದ್ದರೂ, ಕೊಹ್ಲಿ ಭಾರತಕ್ಕೆ ಮರಳಿದ ಮೇಲೆ ಅವರ ಅಂತಿಮ ತೀರ್ಮಾನದಂತೆ ಕೋಚ್ ಆಯ್ಕೆ ನಡೆಯಲಿದೆ.

ಇದನ್ನೂ ಓದಿ.. ಶಿವರಾಜ್ ಕುಮಾರ್ ಹೊಗಳುತ್ತಾ ಎಡವಟ್ಟು ಮಾಡಿಕೊಂಡ ತೆಲುಗು ನಟ ಬಾಲಕೃಷ್ಣ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ