ಅನಿಲ್ ಕುಂಬ್ಳೆಗಾಗಿ ಆಯ್ಕೆಗಾರರ ಜತೆ ಜಗಳವಾಡಿದ್ದರಂತೆ ಸೌರವ್ ಗಂಗೂಲಿ!
ಶುಕ್ರವಾರ, 1 ಡಿಸೆಂಬರ್ 2017 (11:13 IST)
ಮುಂಬೈ: ಸೌರವ್ ಗಂಗೂಲಿ ಎಂದರೆ ಎಂತಹಾ ಹಠಮಾರಿ ಎನ್ನುವುದು ಕ್ರಿಕೆಟ್ ಪ್ರಿಯರಿಗೆ ಗೊತ್ತಿರುವುದೇ. ಇದೇ ಗಂಗೂಲಿ ಹಿಂದೊಮ್ಮೆ ಅನಿಲ್ ಕುಂಬ್ಳೆಯನ್ನು ತಂಡಕ್ಕೆ ಆರಿಸಲೇಬೇಕೆಂದು ಬಿಸಿಸಿಐ ಆಯ್ಕೆಗಾರರ ಜತೆ ಕಿತ್ತಾಡಿದ್ದರಂತೆ!
ಹಾಗಂತ ಕಾರ್ಯಕ್ರಮವೊಂದರಲ್ಲಿ ಸ್ವತಃ ಗಂಗೂಲಿ ಬಿಚ್ಚಿಟ್ಟಿದ್ದಾರೆ. ’2003 ರ ಆಸ್ಟ್ರೇಲಿಯಾ ಪ್ರವಾಸಕ್ಕೆ ತಂಡದ ಆಯ್ಕೆ ನಡೆಯುತ್ತಿತ್ತು. ಸಭೆಯಲ್ಲಿ ಆಯ್ಕೆಗಾರರು ಅನಿಲ್ ಕುಂಬ್ಳೆಯನ್ನು ಕೈ ಬಿಡುವ ನಿರ್ಧಾರಕ್ಕೆ ಬಂದಿದ್ದರು.
ಆದರೆ ನನಗೆ 20 ವರ್ಷದಿಂದ ತಂಡಕ್ಕಾಗಿ ಅದ್ಭುತ ಕೊಡುಗೆ ನೀಡಿದ್ದ ಕುಂಬ್ಳೆಯನ್ನು ಕೈ ಬಿಡುವುದು ಸುತರಾಂ ಇಷ್ಟವಿರಲಿಲ್ಲ. ನಾನು ಕುಂಬ್ಳೆ ಬೇಕೆಂದು ಎಷ್ಟೇ ಕೇಳಿಕೊಂಡರೂ ಆಯ್ಕೆಗಾರರು ಒಪ್ಪಲಿಲಲ್ಲ. ಕುಂಬ್ಳೆ ಬದಲಿಗೆ ಬೇರೊಬ್ಬ ಎಡಗೈ ಸ್ಪಿನ್ನರ್ ನನ್ನು ಆರಿಸಲು ಮುಂದಾಗಿದ್ದರು.
ಕೊನೆಗೆ ಕೋಚ್ ಜಾನ್ ರೈಟ್ ಕೂಡಾ ಆಯ್ಕೆಗಾರರು ಹೇಳಿದಂತೆ ಕೇಳುವುದು ಒಳ್ಳೆಯದು ಎಂದು ಸಲಹೆ ನೀಡಿದರು. ಆದರೆ ನಾನು ಪಟ್ಟು ಬಿಡಲಿಲ್ಲ. ಒಂದು ವೇಳೆ ಕುಂಬ್ಳೆ ಆಯ್ಕೆಯಾಗದಿದ್ದರೆ ಅವರು ಮತ್ತೆಂದೂ ಭಾರತದ ಪರ ಆಡಲಾರರು. ಅವರನ್ನು ಕೈ ಬಿಟ್ಟರೆ ನಾನೂ ಆಡಲ್ಲ. ಅವರ ಹೆಸರು ಸೇರಿಸುವವರೆಗೆ ನಾನು ಆಯ್ಕೆಯಾದ ಆಟಗಾರರ ಪಟ್ಟಿಗೆ ಸಹಿ ಹಾಕಲಾರೆ ಎಂದು ಪಟ್ಟು ಹಿಡಿದಿದ್ದೆ.
ಕೊನೆಗೆ ಆಯ್ಕೆಗಾರರು ಒಂದು ವೇಳೆ ಅನಿಲ್ ಕುಂಬ್ಳೆ, ಟೀಂ ಇಂಡಿಯಾ ಯಾರೇ ಉತ್ತಮ ಪ್ರದರ್ಶನ ತೋರದಿದ್ದರೂ ಪರವಾಗಿಲ್ಲ. ಕಳಪೆ ಪ್ರದರ್ಶನ ನೀಡಿದರೆ ಮೊದಲು ನೀವು ತಲೆದಂಡ ತೆರಬೇಕಾಗುತ್ತದೆ ಎಂದು ಷರತ್ತು ವಿಧಿಸಿದರು. ಅದಕ್ಕೆ ನಾನು ಒಪ್ಪಿದ ಮೇಲೆ ಕುಂಬ್ಳೆಯನ್ನು ಆಯ್ಕೆ ಮಾಡಲಾಯಿತು’ ಎಂದು ಗಂಗೂಲಿ ವಿವರಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ