ಸೋತು ನಿಂತಿರುವ ವಿರಾಟ್ ಕೊಹ್ಲಿ ಮೇಲೆ ಆಳಿಗೊಂದರಂತೆ ಕಲ್ಲು
ಬುಧವಾರ, 24 ಜನವರಿ 2018 (08:28 IST)
ನವದೆಹಲಿ: ದ.ಆಫ್ರಿಕಾ ಟೆಸ್ಟ್ ಸರಣಿ ಸೋತಿದ್ದೇ ತಡ, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ಇದುವರೆಗೆ ತಲೆ ಮೇಲೆ ಕೂರಿಸಿಕೊಂಡು ಮೆರೆಸುತ್ತಿದ್ದವರೆಲ್ಲಾ ಟೀಕಿಸಲು ಪ್ರಾರಂಭಿಸಿದ್ದಾರೆ.
ಮೊನ್ನೆಯಷ್ಟೇ ಇಂಗ್ಲೆಂಡ್ ಮಾಜಿ ಆಟಗಾರ ಮೈಕ್ ಹೋಲ್ಡಿಂಗ್ ಕೊಹ್ಲಿ ಇಂಗ್ಲೆಂಡ್ ನಲ್ಲಿ ರನ್ ಗಳಿಸಿದರಷ್ಟೇ ಶ್ರೇಷ್ಠ ಎನ್ನಲು ಸಾಧ್ಯ. ಈಗ ಆತ ಬೆಸ್ಟ್ ಅಷ್ಟೇ ಶ್ರೇಷ್ಠ ಅಲ್ಲ ಎಂದಿದ್ದರು.
ಇದೀಗ ದ.ಆಫ್ರಿಕಾ ಮಾಜಿ ನಾಯಕ ಗ್ರೇಮ್ ಸ್ಮಿತ್ ಸರದಿ. ಗ್ರೇಮ್ ಸ್ಮಿತ್, ಕೊಹ್ಲಿಯ ನಾಯಕತ್ವದ ಬಗ್ಗೆಯೇ ಪ್ರಶ್ನಿಸಿದ್ದಾರೆ. ಕೊಹ್ಲಿ ಇನ್ನೂ ನಾಯಕನಾಗಿ ಬೆಳೆದಿಲ್ಲ. ಆತ ಸುದೀರ್ಘ ಕಾಲದವರೆಗೆ ತಂಡದ ನಾಯಕನಾಗುತ್ತಾನೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.
ಅಷ್ಟೇ ಏಕೆ ಭಾರತದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಕೂಡಾ ಕೊಹ್ಲಿ ಒಬ್ಬ ಉತ್ತಮ ನಾಯಕನೇನೋ ಹೌದು. ಆದರೆ ತನ್ನ ಸಹ ಆಟಗಾರರನ್ನು ಒಟ್ಟಾಗಿ ಕರೆದೊಯ್ಯುವ ಸ್ವಭಾವ ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ. ಒಂದೇ ಸರಣಿ ಸೋಲಿಗೆ ಕೊಹ್ಲಿಯಲ್ಲಿರುವ ಹುಳುಕುಗಳು ಇಷ್ಟು ದಿನ ಹೊಗಳಿ ಅಟ್ಟಕ್ಕೇರಿಸಿದ್ದವರಿಗೆ ಕಾಣಿಸಲು ಶುರುವಾಗಿದೆ. ಈ ಟೀಕೆಗಳಿಗೆ ಕೊಹ್ಲಿ ಹೇಗೆ ಉತ್ತರಿಸುತ್ತಾರೆ ಕಾದು ನೋಡಬೇಕು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ