ನಿವೃತ್ತ ಜೀವನದಲ್ಲಿ ಧೋನಿ ಏನು ಮಾಡಬಹುದು?

ಸೋಮವಾರ, 17 ಆಗಸ್ಟ್ 2020 (10:34 IST)
ರಾಂಚಿ: ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಹೇಳಿದ್ದಾರೆ. ಇನ್ನೀಗ ಅವರನ್ನು ಐಪಿಎಲ್ ನಲ್ಲಿ ಮಾತ್ರ ಕಾಣಬಹುದಾಗಿದೆ. ಅದೂ ಈ ವರ್ಷ ಅಥವಾ ಮುಂದಿನ ವರ್ಷ ಮಾತ್ರ ಎನ್ನಲಾಗುತ್ತಿದೆ. ಅದಾದ ಬಳಿಕ ಐಪಿಎಲ್ ನಿಂದಲೂ ಧೋನಿ ನಿವೃತ್ತರಾಗಬಹುದು ಎಂಬ ಮಾತು ಕೇಳಿಬರುತ್ತಿದೆ.


ಈ ನಡುವೆ ಧೋನಿ ನಿವೃತ್ತ ಜೀವನದಲ್ಲಿ ಏನು ಮಾಡಬಹುದು ಎಂಬುದರ ಬಗ್ಗೆ ಸ್ಪಷ್ಟ ಯೋಜನೆ ಹಾಕಿಕೊಂಡಿದ್ದಾರೆ. ಈಗಾಗಲೇ ಒಂದು ವರ್ಷದಿಂದ ಕ್ರಿಕೆಟ್ ನಿಂದ ದೂರವಿರುವಾಗ ಧೋನಿ ತಮ್ಮ ಮೆಚ್ಚಿನ ಫಾರ್ಮ್ ಹೌಸ್ ನಲ್ಲಿಯೇ ಬಹುಕಾಲ ಕಳೆದಿದ್ದರು.

ಈ ವೇಳೆ ಅವರಿಗೆ ಕೃಷಿಯ ಬಗ್ಗೆ ಅಪಾರ ಒಲವು ಮೂಡಿದೆ. ಸ್ವತಃ ಟ್ರ್ಯಾಕ್ಟರ್ ಖರೀದಿಸಿದ್ದು, ತಮ್ಮ ಜಮೀನಿನಲ್ಲಿ ಸಾವಯವ ಕೃಷಿ ಮಾಡುವುದಲ್ಲದೆ, ತಮ್ಮದೇ ಬ್ರ್ಯಾಂಡ್ ನ ಸಾವಯವ ಉತ್ಪನ್ನ ಹೊರತರುವ ಯೋಜನೆಯನ್ನೂ ಹೊಂದಿದ್ದಾರೆ ಎನ್ನಲಾಗಿದೆ. ಅಲ್ಲದೆ, ಉದ್ಯಮದಲ್ಲೂ ಧೋನಿಗೆ ಅಪಾರ ಒಲವಿದೆ. ಹೀಗಾಗಿ ನಿವೃತ್ತ ಜೀವನದಲ್ಲಿ ಧೋನಿ ಸಂಪೂರ್ಣವಾಗಿ ಬೇರೆಯದೇ ಲೋಕದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬಹುದು ಎಂದು ಊಹಿಸಲಾಗಿದೆ.

ಅವರ ಸ್ನೇಹಿತರ ಪ್ರಕಾರ ಧೋನಿ ಸೇನೆಯಲ್ಲಿ ಸೇವೆ ಸಲ್ಲಿಸಬಹುದು. ವಿಶ್ವಕಪ್ ನಿಂದ ಹೊರಬಿದ್ದ ತಕ್ಷಣ ಸುಮಾರು ಒಂದು ತಿಂಗಳ ಕಾಲ ಸೇನಾ ತರಬೇತಿ ಪಡೆದಿದ್ದ ಧೋನಿ 15 ದಿನಗಳ ಕಾಲ ಗಸ್ತುಪಡೆಯಲ್ಲೂ ಕಾರ್ಯನಿರ್ವಹಿಸಿದ್ದರು. ಈಗ ಮತ್ತೆ ಸೇನೆ ಸೇರುವ ಸಾಧ‍್ಯತೆಯೂ ಇಲ್ಲದಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ