ಭಾರತೀಯ ಸಂಸ್ಕೃತಿಯಲ್ಲಿ ಪ್ರತಿದಿನವೂ ಹಬ್ಬವೊಂದನ್ನು ಆಚರಿಸುವ ಕಾಲವೊಂದಿತ್ತು. ವರ್ಷದ 365 ದಿನವೂ ಯಾವುದೋ ಒಂದು ಹಬ್ಬವಿರುತ್ತಿತ್ತು. ಇದರ ಉದ್ದೇಶ ಇಡೀ ಜೀವನವನ್ನೇ ಸಂಭ್ರಮಾಚರಣೆಯನ್ನಾಗಿಸುವುದಾಗಿತ್ತು. ಆದರೆ ಈಗ ನಿಮಗೆ ರಸ್ತೆಯಲ್ಲಿ ನಡೆಯುವುದನ್ನೋ, ಕಚೇರಿಯಲ್ಲಿ ಕೆಲಸ ಮಾಡುವುದನ್ನೋ ಒಂದು ಆಚರಣೆಯನ್ನಾಗಿ ಮಾಡಲು ಬರುವುದಿಲ್ಲ - ಅದಕ್ಕಾಗಿ ಈ ಹಬ್ಬಗಳು, ಆಚರಣೆಗೆ ಒಂದು ನೆವ.
ದೀಪಾವಳಿ ಹಬ್ಬದ ಹಿಂದಿರುವುದೂ ಈ ಆಚರಣೆಯ ಭಾವನೆಯೇ! ಅದಕ್ಕಾಗಿಯೇ ಪಟಾಕಿ, ಬಾಣ ಬಿರುಸುಗಳ ಹಾರಾಟ-ವಿನೋದ; ಹೊರಗೆ ಹಾರಿಸುವ ಹೂವಿನಕುಂಡ, ಪಟಾಕಿಗಳಂತೆ ನಿಮ್ಮೊಳಗೂ ಸಹ ಸ್ವಲ್ಪ ಚೈತನ್ಯ ಹತ್ತಿಕೊಳ್ಳಲೆಂಬ ಆಶಯ. ಕೇವಲ ಒಂದು ದಿನದ ಸಂಭ್ರಮ ವಿನೋದವಿದ್ದರೆ ಸಾಲದು, ಪ್ರತಿದಿನವೂ ನಮ್ಮೊಳಗೆ ಇಂತಹ ವಿನೋದ, ಉತ್ಸಾಹ ಪುಟಿಯುತ್ತಿರಬೇಕು. ಸುಮ್ಮನೆ ಕುಳಿತಿದ್ದಾಗಲೂ ನಮ್ಮೊಳಗಿನ ಚೈತನ್ಯ, ಮನಸ್ಸು, ಹೃದಯ ಮತ್ತು ದೇಹ, ಎಲ್ಲವೂ ಹೊತ್ತಿಸಿದ ಬಾಣಬಿರುಸಿನಂತೆ ಸ್ಫೋಟಿಸುತ್ತಿರಬೇಕು. ಆ ತರಹದ ಹುರುಪಿಲ್ಲದ ಒದ್ದೆ ಪಟಾಕಿಯಂತವರಿಗೆ ಹೊರಗಿನ ಪಟಾಕಿಯು ನಿತ್ಯವೂ ಬೇಕಾಗುತ್ತದೆ!
ದೀಪಗಳ ಹಬ್ಬವೇ ದೀಪಾವಳಿ. ಇಂದು ಪ್ರತಿಯೊಂದು ಹಳ್ಳಿ, ಊರು, ನಗರವೂ, ಲಕ್ಷ ಲಕ್ಷ ದೀಪಗಳಿಂದ ಬೆಳಗುತ್ತಿರುತ್ತದೆ. ಆಚರಣೆಯೆಂದರೆ ಹೊರಗೆ ದೀಪ ಹಚ್ಚಿಟ್ಟರೆ ಸಾಲದು. ನಮ್ಮೊಳಗೂ ಬೆಳಕು ಬೆಳಗಬೇಕು. ಬೆಳಕಿರುವಲ್ಲಿ ಸ್ಪಷ್ಟತೆ, ಈ ಅಂತರ್ಯದ ಸ್ಪಷ್ಟತೆ ಇಲ್ಲದೆ ಹೋದರೆ, ನಿಮ್ಮ ಬೇರಾವ ಗುಣವೂ ಉಪಯೋಗಕ್ಕೆ ಬಾರದು. ಬದಲಿಗೆ ಅದೇ ತೊಡಕಾಗಬಹುದು. ಏಕೆಂದರೆ ಸ್ಪಷ್ಟತೆಯಿಲ್ಲದ ಆತ್ಮವಿಶ್ವಾಸ ಒಂದು ದೊಡ್ಡ ವಿಪತ್ತು. ಈಗೀಗ ಪ್ರಪಂಚದಲ್ಲಿ ಸ್ಪಷ್ಟತೆಯಿಲ್ಲದ ಕಾರ್ಯಗಳೇ ಹೆಚ್ಚಾಗಿ ನಡೆಯುತ್ತಿರುವುದು.
ಒಂದು ದಿನ, ಹೊಸದಾಗಿ ಪೊಲೀಸು ಪಡೆಗೆ ಸೇರಿದ್ದ ಒಬ್ಬ ಯುವಕ, ಕೆಲಸದ ಮೊದಲ ದಿನ ಸಹೋದ್ಯೋಗಿಯೊಡನೆ, ಪೊಲೀಸ್ ವ್ಯಾನಿನಲ್ಲಿ ಮೊದಲ ಬಾರಿಗೆ ನಗರದ ಬೀದಿಗಳಲ್ಲಿ ಗಸ್ತು ಹೊಡೆಯುತ್ತಿದ್ದ. ರೇಡಿಯೊ ಮೂಲಕ 'ಇಂತಹ ರಸ್ತೆಯಲ್ಲಿ ಅನುಮಾನಾಸ್ಪದವಾಗಿ ಅಡ್ಡಾಡುತ್ತಿರುವ ಜನರ ಗುಂಪೊಂದನ್ನು ಚದುರಿಸಬೇಕು.' ಎಂಬ ಸಂದೇಶ ಕೇಳಿಬಂತು. ಆ ರಸ್ತೆಗೆ ಬಂದಾಗ, ಇಬ್ಬರೂ ಮೂಲೆಯೊಂದರಲ್ಲಿ ಗುಂಪೊಂದನ್ನು ಕಂಡರು. ಹತ್ತಿರ ಹೋದ ಹೊಸ ಪೊಲೀಸು ಪೇದೆ ಕಿಟಕಿಯ ಗಾಜು ಇಳಿಸಿ, ಬಹಳ ಉತ್ಸಾಹದಿಂದ 'ಏಯ್-ಎಲ್ಲರೂ ಇಲ್ಲಿಂದ ಹೊರಡಿ. ಇಲ್ಲಿ ನಿಲ್ಲಬೇಡಿ.' ಎಂದು ಅಬ್ಬರಿಸಿದ. ಜನ ಗಲಿಬಿಲಿಗೊಂಡು ಮಿಕಿಮಿಕಿ ನೋಡುತ್ತ ನಿಂತರು. ಹೊಸ ಪೇದೆ ಮತ್ತೆ, 'ನಾ ಹೇಳಿದ್ದು ಕೇಳಿಸಲಿಲ್ಲವೇ? ಈ ಜಾಗ ಬಿಟ್ಟು ಹೊರಡಿ. ಈಗಲೇ!' ಎಂದು ಗರ್ಜಿಸಿದ. ಒಡನೆ ಜನ ಖಾಲಿಯಾದರು. ತನ್ನ ಜೋರು ಮಾತಿನಿಂದಾದ ಪರಿಣಾಮಕ್ಕೆ ತಾನೆ ಮೆಚ್ಚಿಕೊಳ್ಳುತ್ತಾ, ತನ್ನ ಸಹೋದ್ಯೊಗಿಯ ಕಡೆ ತಿರುಗಿ, 'ನನ್ನ ಮೊದಲ ಕೆಲಸ ಹೇಗಿತ್ತು?' ಎಂದು ಬೀಗುತ್ತ ಕೇಳಿದ. ಸಹೋದ್ಯೌಗಿ 'ಪರವಾಗಿಲ್ಲವೇ! ಆ ಜಾಗ ಬಸ್ ನಿಲ್ದಾಣವಾಗಿದ್ದರೂ, ಜನ ಹೋದರಲ್ಲ.' ಎಂದ. ಅಗತ್ಯವಾದ ಸ್ಪಷ್ಟತೆಯಿಲ್ಲದೆ, ಏನೇ ಕೆಲಸ ಮಾಡಿದರೂ ಅದು ಅವಗಢವೇ!
ಬೆಳಕು ದೃಷ್ಟಿಗೆ ಸ್ಪಷ್ಟತೆ ನೀಡುತ್ತದೆ, ಭೌತಿಕವಾಗಷ್ಟೇ ಅಲ್ಲ, ನೀವು ಎಷ್ಟು ಸ್ಪಷ್ಟತೆಯಿಂದ ನಿಮ್ಮ ಜೀವನವನ್ನು, ನಿಮ್ಮ ಸುತ್ತಲಿರುವುದನ್ನು ನೋಡಿ ಗ್ರಹಿಸುವಿರೋ, ಅಷ್ಟರ ಮಟ್ಟಿಗೆ ನಿಮ್ಮ ಜೀವನವನ್ನು ವಿವೇಕಯುತವಾಗಿ ನಡೆಸುವಿರಿ. ದೀಪಾವಳಿಯು, ಕೆಲವು ಕರಾಳ ಶಕ್ತಿಗಳನ್ನು ನಾಶ ಮಾಡಿ, ಬೆಳಕು ಮೂಡಿದ ದಿನವಾಗಿತ್ತು. ಇದೇ ದುಸ್ಥಿತಿಯೇ ಮಾನವನ ಜೀವನದಲ್ಲಿಯೂ ಸಹ. ಮಂಕುಕವಿದ ಸ್ಥಿತಿಯಲ್ಲಿ ದಟ್ಟೈಸಿ ಬರುವ ಕಾರ್ಮೋಡಗಳು, ಸೂರ್ಯನನ್ನು ಮರೆ ಮಾಡುವಂತೆಯೇ, ನಮ್ಮ ಮನಸ್ಸು-ಬುದ್ದಿಗೆ ಮಂಕು ಕವಿಯುವುದು. ಮನುಷ್ಯ ಹೊರಗಿನಿಂದೆಲೇ ಬೆಳಕು ತರಬೇಕಾಗಿಲ್ಲ. ಕವಿದ ಮೋಡಗಳನ್ನು ತೊಲಗಿಸಿದರೆ, ಸೂರ್ಯಪ್ರಕಾಶ ತಾನಾಗಿಯೇ ಹರಡಿಕೊಳ್ಳುತ್ತದೆ. ಹಾಗೆಯೇ, ತನ್ನೊಳಗೆ ಕವಿದ ಕಾರ್ಮೋಡಗಳನ್ನು ತಳ್ಳಿಹಾಕಿದ ಕ್ಷಣವೇ ಬೆಳಕು ಬೆಳಗುವುದು. ಇದನ್ನು ನೆನಪಿಸಲೆಂದೇ ಆಚರಿಸುವ ಹಬ್ಬ ದೀಪಾವಳಿ.
ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ ಸದ್ಗುರು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ ಅಂತರ್ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.