ಕನ್ನಡದ ತೇಜಸ್ಸು ತೇಜಸ್ವಿ

ಇಳಯರಾಜ

ಬುಧವಾರ, 27 ಜೂನ್ 2007 (17:14 IST)
ತೇಜಸ್ವಿ ಕನ್ನಡದ ತೇಜಸ್ಸು. ಇಂತಹ ಅನನ್ಯ ಬರಹಗಾರನನ್ನು ಕಳೆದುಕೊಂಡ ಕನ್ನಡದ ಸಾರಸತ್ವ ಲೋಕ ಬಡವಾಗಿದೆ. ಯಾವ ಕೋನದಿಂದ ನೋಡಿದರೂ ಪೂರ್ಣಚಂದ್ರ ತೇಜಸ್ವಿ ಕನ್ನಡದ ಘನತೆ ಹೆಚ್ಚಿಸಿದ ಬರಹಗಾರರು.

ತಮ್ಮ ಸುತ್ತಲಿನ ಜೀವ ಜಗತ್ತಿನ ಬಗ್ಗೆ ಅಪಾರ ಕುತೂಹಲ ಬೆಳೆಸಿಕೊಂಡಿದ್ದ ತೇಜಸ್ವಿ, ಪರಿಸರ ಮತ್ತು ಮನುಷ್ಯನನ್ನು ಸೂಕ್ಷ್ಮವಾಗಿ ಗಮನಿಸುತ್ತಲೇ ತಮ್ಮ ಚಿಂತನೆಗೆ ಮೂರ್ತರೂಪ ಕಲ್ಪಿಸಿದರು.ಈ ಕಾರಣಕ್ಕಾಗಿಯೇ ಕನ್ನಡದ ಓದುಗನಿಗೆ ತೇಜಸ್ವಿ ಇಷ್ಟವಾಗುತ್ತಾರೆ. ಅವರೊಳಗಿನ ಜೀವನ ಪ್ರೀತಿ ಅವರನ್ನು ಮೇರು ವ್ಯಕ್ತಿತ್ವಕ್ಕೆ ಏರಿಸಿದೆ.

2007 ಏಪ್ರಿಲ್ 5 ರಂದು ಮಧ್ಯಾಹ್ನ ಬಿರಿಯಾನಿ ಊಟ ಮಾಡಿ, ಎದ್ದು ಕೈತೊಳೆಯಲು ಹೋದಾಗ ಕುಸಿದು ಬಿದ್ದು ಇಹಲೋಕ ತ್ಯೆಜಿಸಿದ ತೇಜಸ್ವಿಯನ್ನು ಕನ್ನಡದ ಓದುಗ ಎಂದಿಗೂ ಮರೆಯುವುದಿಲ್ಲ. ತೇಜಸ್ವಿ ಕೇವಲ ಬರಹಗಾರ ಮಾತ್ರ ಆಗಿರಲಿಲ್ಲ, ಜೀವಜಾಲದ ವಿಸ್ಮಯ ಬೆಳೆಗಾರ ಕೂಡ ಆಗಿದ್ದರು.

ಮನುಷ್ಯ ಓದಿನ ಮೂಲಕ ಪಡೆದುಕೊಂಡ ಜ್ಞಾನದಷ್ಟೇ,ಅನುಭವದ ಮೂಲಕ ಪಡೆದುಕೊಂಡ ಅರಿವೂ ಮುಖ್ಯವಾದುದು ಎನ್ನುವುದು ಅವರ ನಂಬಿಹಕೆಯಾಗಿತ್ತು.ಆದ್ದರಿಂದಲೇ ಕ್ಷಣಕ್ಷಣಕ್ಕೂ ಬದಲಾಗುತ್ತಿರುವ ಜಾಗತಿಕ ವಿದ್ಯಮಾನಗಳಿಗೆ ತೀವ್ರವಾಗಿ ಹಾಗೂ ಅರ್ಧಪೂರ್ಣವಾಗಿ ಸ್ಪಂದಿಸಲು ಅವರಿಗೆ ಸಾಧ್ಯವಾಗಿತ್ತು.

ತೇಜಸ್ವಿಯವರ ಬರಹಗಳನ್ನು ನಾವು ಕೇವಲ ಕೃತಿ ಎಂದು ವರ್ಗೀಕರಿಸಲು ಬರುವುದಿಲ್ಲ. ಪ್ರತಿಯೊಂದು ಅಧ್ಬುತ ಕಲಾಕೃತಿಯ ಧ್ವನಿಶಕ್ತಿಗಳು. ಕಾರ್ವಾಲೋ ಮತ್ತು ಮಂದಣ್ಣ ಅವರ ಕಲಾ ಸೃಷ್ಟಿಗಳು. ಲೇಖಕ ಎನ್ನುವುದಕ್ಕಿಂತ ತೇಜಸ್ವಿ ಹೆಚ್ಚು ಆಪ್ತರಾಗುವುದು ಅವರ ಜೀವನ ಪ್ರೀತಿಯಿಂದ.

ಅವರು ಅವಿರತ ಶ್ರಮಜೀವಿ. "ನಾಲ್ಕು ಜನ್ಮದಲ್ಲಿ ನನ್ನಿಂದ ಮಾಡಿ ಮುಗಿಸುವುದಕ್ಕೆ ಆಗದ ಕೆಲಸಗಳು ಮತ್ತು ಯೋಜನೆಗಳು ನನ್ನ ತಲೆಯಲ್ಲಿ ಗೆಜ್ಜೆ ಕಟ್ಟಿ ಧಿಮಿ ಧಿಮಿ ಕುಣಿಯುತ್ತಾ ಇವೆ. ನಿನಗೆ ಇಷ್ಟು ವರ್ಷ ಮಾತ್ರ ಆಯುಷ್ಯ ಎಂದು ಯಾರೂ ನನಗೆ ಹೇಳಿ ಕಳುಹಿಸಿಲ್ಲ. ಎಷ್ಟು ಆಗತ್ತೊ ಅಷ್ಟನ್ನು ಮಾಡುತ್ತಾ ಹೊಗೋದು ನನ್ನ ಕೆಲಸ" ಎನ್ನುತ್ತಿದ್ದ ಈ ದೈತ್ಯ ದುಡಿಮೆಗಾರ ಇನ್ನೂ ಬದುಕಿದ್ದರೆ ಕನ್ನಡದ ಸಾಹಿತ್ಯ ಲೋಕ ಇನ್ನಷ್ಟು ತೇಜಪೂರ್ಣವಾಗಿ ಬೆಳಗುತ್ತಿತ್ತು ಎನ್ನುವುದರಲ್ಲಿ ಎರಡು ಮಾತಿಲ್ಲ.

ತೇಜಸ್ವಿ ಕನಸಿನ ಭಾಷೆಯನ್ನು ನಿರೂಪಿಸುವಂತೆ ಕತೆ ಬರೆದರು. ಅವರು ತೆಗೆದಿರುವ ಛಾಯಾಚಿತ್ರಗಳು ಸುಂದರ ದೃಶ್ಯಕಾವ್ಯಗಳು. ಇಂತಹ ನಿಸರ್ಗನಿಷ್ಠ ದಾರ್ಶನಿಕ ತನ್ನ ಸುತ್ತಣ ಲೋಕವನ್ನು ಅಷ್ಟು ಅಧ್ಬುತವಾಗಿ ಪ್ರೀತಿಸಿದರು. 8-10-1935 ರಂದು ಜನಿಸಿದ ತೇಜಸ್ವಿ 5-4-2007 ರಂದು ಇಹಲೋಕ ತ್ಯಜಿಸಿದರು. ಮೂಡಿಗೆರೆಯ ಮೂಲೆಯೊಂದರಲ್ಲಿದ್ದುಕೊಂಡು ಇಡಿ ಜಗತ್ತಿಗೆ ಬೆಳಕು ನೀಡಿದ ತೇಜಸ್ಸು ಅವರದು. ತೇಜಸ್ವಿ ಕನ್ನಡದ ತೇಜಸ್ಸು.

ವೆಬ್ದುನಿಯಾವನ್ನು ಓದಿ