ಪ್ರಕಾಂಡ ಪಂಡಿತ 'ರಾಹುಲ್ ಸಾಂಕೃತ್ಯಾಯನ'

ಭಾನುವಾರ, 6 ಸೆಪ್ಟಂಬರ್ 2009 (16:15 IST)
ನಾಗೇಂದ್ರ ತ್ರಾಸಿ

ದೇಶ ಹಾಗೂ ವಿದೇಶ ಕಂಡ ಪ್ರಕಾಂಡ ಪಂಡಿತ, ಖ್ಯಾತ ಲೇಖಕ ರಾಹುಲ್ ಸಾಂಕೃತ್ಯಾಯನರ ಬಗ್ಗೆ ಬಹುತೇಕರಿಗೆ ತಿಳಿದಿಲ್ಲ. 1893ರಲ್ಲಿ ಉತ್ತರ ಪ್ರದೇಶದ ಅಜಮ್‌ಗಡ್ ಜಿಲ್ಲೆಯ ಪಂದಾಹ ಗ್ರಾಮದಲ್ಲಿ ಜನಿಸಿದ್ದ ರಾಹುಲ್ ಅವರ ಮಹಾಪಂಡಿತರಾಗಿ ಏರಿದ ಅವರ ಬದುಕಿನ ಕಥೆಯೇ ರೋಚಕವಾದದ್ದು.

ಭಾರತದಲ್ಲಿ ಅತಿ ಹೆಚ್ಚು ಸಂಚಾರ ಮಾಡಿದ ಮಹಾನ್ ಪಂಡಿತ ರಾಹುಲ್, ಮನೆ ಬಿಟ್ಟು ಸುಮಾರು 45ವರ್ಷಗಳ ಕಾಲ ಅಧ್ಯಯನ, ಜ್ಞಾನಾರ್ಜನೆಗಾಗಿ ದೇಶ-ವಿದೇಶಗಳಲ್ಲಿ ಸುತ್ತಾಟ ನಡೆಸಿದ ಲೇಖಕ ಇವರು.

ಸಾಂಕೃತ್ಯಾಯನ 36ಭಾಷೆಗಳನ್ನು ಬಲ್ಲ ಕೋವಿದ, 150ಕ್ಕೂ ಹೆಚ್ಚಿನ ಗ್ರಂಥಗಳನ್ನು ರಚಿಸಿದ್ದಾರೆ. ಅವರು ಸಂಪಾದಿಸಿದ ಎಷ್ಟೋ ಕೃತಿಗಳು ಬರಹ, ಡೈರಿಗಳು ಇನ್ನೂ ಮುದ್ರಣ ಕಂಡಿಲ್ಲ. ಅವರು ಗ್ರಂಥಗಳಿಗೆ ಬಳಸಿದ ಭಾಷೆ ಹಿಂದಿ, ಸಂಸ್ಕೃತ, ಬೋಜ್, ಪಾಲಿ, ಭೋಜಪುರಿ. ರಾಹುಲ್ ಅವರು ತತ್ವಶಾಸ್ತ್ರ, ಕತೆ. ಕಾದಂಬರಿ, ವಿಮರ್ಶೆ, ಜೀವನ ಚರಿತ್ರೆ, ಪ್ರವಾಸ ಕಥನ, ಅರ್ಥಶಾಸ್ತ್ರ, ಭಾಷಾ ಶಾಸ್ತ್ರ, ವ್ಯಾಕರಣ, ವಿಜ್ಞಾನ ಕೋಶ ಸೇರಿದಂತೆ ಹಲವು ವಲಯಗಳಲ್ಲಿ ತಮ್ಮ ಪಾಂಡಿತ್ಯವನ್ನು ವಿಸ್ತರಿಸಿಕೊಂಡಿದ್ದರು.

ಈ ಅಲೆಮಾರಿ ಪಂಡಿತ ಜೀವನದುದ್ದಕ್ಕೂ ದೇಶ-ವಿದೇಶಗಳಲ್ಲಿ ಅನುಭವಕ್ಕಾಗಿ ಅಲೆದಾಡಿದ ಮಹಾನ್ ಪರ್ಯಟನಕಾರ. ರಾಹುಲರ ಬಾಲ್ಯದ ಹೆಸರು ಕೇದಾರನಾಥ ಪಾಂಡೆ, ತಂದೆ ಗೋವರ್ಧನ್ ಪಾಂಡೆ-ತಾಯಿ ಕುಲವಂತಿ. 1893 ಏಪ್ರಿಲ್ 9ರಂದು ಉತ್ತರ ಪ್ರದೇಶದ ಅಜಂಗಢ್ ಜಿಲ್ಲೆಯಲ್ಲಿ ಜನನ. ವೈಷ್ಣವ ಧರ್ಮ, ಮಠಾಧಿಪತಿಯಾದ ನಂತರ ಬೌದ್ಧ ಧರ್ಮದೆಡೆಗೆ ಆಕರ್ಷಿತರಾದ ರಾಹುಲ್ ಅವರು ಬೋಧಗಯಾ, ಸಾರನಾಥ, ಕುಶಿನಾರಗಳಲ್ಲಿ ಅಧ್ಯಯನಕ್ಕಾಗಿ ಭೇಟಿ ನೀಡಿದ್ದರು. ಮತ್ತಷ್ಟು ಸಂಸ್ಕೃತ ಅಧ್ಯಯನಕ್ಕಾಗಿ ತಿರುಪತಿಗೂ ಆಗಮಿಸಿದ್ದರು. ತಿರುಪತಿಯಲ್ಲಿ ತಮಿಳು ಭಾಷೆಯ ಬಗ್ಗೆಯೂ ಆಸಕ್ತಿ ವಹಿಸಿ ಅಧ್ಯಯನ ಮಾಡಿದ್ದರು. ಕರ್ನಾಟಕದ ಮಡಿಕೇರಿಯಲ್ಲಿಯೂ 4ತಿಂಗಳ ಕಾಲ ತಂಗಿ ಕನ್ನಡ ಭಾಷೆಯ ಪರಿಚಯ ಪಡೆದಿದ್ದರು.ಸೋವಿಯತ್ ರಷ್ಯಾಕ್ಕೆ ಎರಡು ಬಾರಿ ಭೇಟಿ ನೀಡಿದ್ದರು. ಅಲ್ಲಿ ಹಲವಾರು ತಿಂಗಳು ಸಂಸ್ಕೃತ ಅಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದರು.

ಸಾಂಕೃತ್ಯಾಯನ ನಾನಾ ಪಂಥಗಳಿಗೆ ವಿಶ್ವಾಸವಿಟ್ಟು, ವೈಷ್ಣವ ಸಾಧುವಾಗಿ, ಮಠಾಧಿಪತಿಯಾಗಿ, ಸನ್ಯಾಸಿಯಾಗಿ, ಬೌದ್ಧ ಭಿಕ್ಷುವಾಗಿ ಅದೆಲ್ಲದರ ಆದಿ ಅಂತ್ಯವನ್ನೆಲ್ಲ ತಿಳಿದು ಕೊನೆಗೆ ಅವೆಲ್ಲದ್ದರಿಂದ 'ರೋಸಿ ಹೋಗಿ' 'ಭಾಗೋ ನಹಿ ದುನಿಯಾಕೋ ಬದಲೋ' (ಓಡಬೇಡಿ...ಜಗತ್ತನ್ನು ಬದಲಿಸಿ) ಎಂಬುದನ್ನು ಮಾರ್ಕ್ಸ್‌ವಾದದ ವೈಜ್ಞಾನಿಕ ಅನಿವಾರ್ಯತೆಯನ್ನು ಮನಗಂಡು ಮತ್ತೆ ಜೀವನದುದ್ದಕ್ಕೂ ಸೃಜನಾತ್ಮಕ, ಕ್ರಿಯಾತ್ಮಕ ಮಾರ್ಕ್ಸ್‌ವಾದಿಯಾಗಿ, ರೈತ, ಕಾರ್ಮಿಕ ಹೋರಾಟಗಾರನಾಗಿಯೂ ತೊಡಗಿಸಿಕೊಂಡಿದ್ದರು.

ಜೀನೇ ಕೆ ಲಿಯೇ, ಸಿಂಹ ಸೇನಾಪತಿ, ಭಾಗೋ ನಹಿ ದುನಿಯಾ ಕೋ ಬದಲೋ, ಮಧುರ ಸ್ವಪ್ನ, ರಾಜಸ್ತಾನಿ ರಾಣಿವಾಸ ಪ್ರಮುಖ ಕಾದಂಬರಿ, ಸರ್ದಾರ್ ಪ್ರಥ್ವಿ ಸಿಂಗ್, ನಯೆ ಭಾರತ್ ಕೆ ನಯೆ ನೇತಾ, ಬಚಪನ್ ಕಿ ಸ್ಮೃತಿ, ಅತೀತ್ ಸೆ ವರ್ತಮಾನ್, ಸ್ಟಾಲಿನ್, ಲೆನಿನ್, ಕಾರ್ಲ್ ಮಾರ್ಕ್ಸ್, ಮಾವೋ ತ್ಸು ತುಂಗ್ ಅವರ ಜೀವನಚರಿತ್ರೆ ಸೇರಿದಂತೆ 150ಕ್ಕೂ ಅಧಿಕ ಗ್ರಂಥಗಳನ್ನು ಬರೆದಿದ್ದರು. ಇದರಲ್ಲಿ ವೋಲ್ಗಾ-ಗಂಗಾ ಪ್ರಮುಖವಾದದ್ದು.

ಸಾಂಕೃತ್ಯಾಯನ ಯುವಕನಾಗಿದ್ದಾಗಲೇ ರಾಮ್ ದುಲಾರಿ ದೇವಿಯೊಂದಿಗೆ ವಿವಾಹ ಮಾಡಲಾಗಿತ್ತು. ಆದರೆ ಆಕೆ ಬಾಲಕಿಯಾಗಿದ್ದರಿಂದ ಆಕೆಯೊಂದಿಗೆ ದೀರ್ಘಕಾಲ ಸಂಸಾರ ಮಾಡಿರಲಿಲ್ಲ. ಬಹುಕಾಲದ ನಂತರ ಇಂಡಿಯನ್ ನೇಪಾಳಿ ಡಾ.ಕಮಲಾ ಅವರನ್ನು ಮದುವೆಯಾಗಿದ್ದರು. ಈ ದಂಪತಿಗಳಿಗೆ ಜಯ ಎಂಬ ಮಗಳು, ಜೇತಾ ಎಂಬ ಗಂಡು ಮಗ. ಶ್ರೀಲಂಕಾ ಯೂನಿರ್ವಸಿಟಿಯಲ್ಲಿ ಅಧ್ಯಾಪನ ವೃತ್ತಿ ಮಾಡಲು ಒಪ್ಪಿಕೊಂಡು ಅಲ್ಲಿ ಕಾರ್ಯನಿರ್ವಹುತ್ತಿದ್ದರು. ಅಲ್ಲಿಯೇ ತೀವ್ರ ಅಸ್ವಸ್ಥಕ್ಕೊಳಗಾದ ರಾಹುಲರು ನೆನಪಿನ ಶಕ್ತಿಯನ್ನೇ ಕಳೆದುಕೊಂಡಿದ್ದರು. ಮಧುಮೇಹ, ರಕ್ತದೊತ್ತಡದಿಂದಾಗಿ 1963ರಲ್ಲಿ ದಾರ್ಜಿಲಿಂಗ್‌ನಲ್ಲಿ ಇಹಲೋಕ ತ್ಯಜಿಸಿದ್ದರು.

ವೆಬ್ದುನಿಯಾವನ್ನು ಓದಿ