ಶಿವರಾಮ ಕಾರಂತ - ಅಳಿಯದ ನೆನಪು

ನಾಗೇಂದ್ರ ತ್ರಾಸಿ
ಕಡಲ ತಡಿಯ ಭಾರ್ಗವ, ಜ್ಞಾನಪೀಠ ಪ್ರಶಸ್ತಿ ವಿಜೇತ ಕಾದಂಬರಿಕಾರ ಕೋಟ ಶಿವರಾಮ ಕಾರಂತರು ಇಹಲೋಕ ತ್ಯಜಿಸಿ ಇಂದಿಗೆ (ಡಿ.9) ಒಂದು ದಶಕ ಕಳೆದಿದೆ. ಯಾವುದೇ ಮುಲಾಜಿಗೆ, ವಸೂಲಿಬಾಜಿಗಳಿಂದ ದೂರವಿದ್ದ ಕಾರಂತರು ನೇರ ನಿಷ್ಠುರವಾದಿತನಕ್ಕೆ ಹೆಸರುವಾಸಿಯಾಗಿದ್ದರು. ನಿರೀಶ್ವರವಾದಿಯಾಗಿದ್ದ ಕೋ. ಶಿ. ಕಾರಂತರು ಸಾಹಿತ್ಯ ಕ್ಷೇತ್ರದಲ್ಲಿ ಮೇರುಸದೃಶ ವ್ಯಕ್ತಿತ್ವ ಹೊಂದಿದವರಾಗಿದ್ದರು. ತಮ್ಮ 93 ನೇ ವಯಸ್ಸಿನಲ್ಲಿ ಅವರು (1997, ಡಿಸೆಂಬರ್ 9) ಇಹಲೋಕ ತ್ಯಜಿಸಿದ್ದರು.

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕು ಸಮೀಪದ ಕೋಟದಲ್ಲಿ 1902 ಅಕ್ಟೋಬರ್ 10 ರಂದು ಜನಿಸಿದ್ದ ಶಿವರಾಮ ಕಾರಂತರು, ಪ್ರೌಢಶಿಕ್ಷಣವನ್ನಷ್ಟೇ ಪಡೆದಿದ್ದರು. ಆದರೆ ಗಾಂಧಿ ತತ್ವಕ್ಕೆ ಮಾರುಹೋಗಿ ಹೋರಾಟಕ್ಕೆ ಧುಮುಕಿ, ನಂತರ ಶ್ರೇಷ್ಠ ಕಾದಂಬರಿಕಾರ, ಕಲಾವಿದ, ಅಲೆಮಾರಿ, ಪತ್ರಕರ್ತ, ಪರಿಸರವಾದಿ, ಸಿನಿಮಾ ನಿರ್ಮಾಪಕರಾಗಿ, ನೃತ್ಯಪಟುವಾಗಿ, ಛಾಯಾಗ್ರಾಹಕರಾಗಿ ಹೀಗೆ ಸಾಹಿತ್ಯ-ಸಂಸ್ಕೃತಿಯ ಹತ್ತು ಹಲವು ಪ್ರಕಾರಗಳಲ್ಲಿ ಕೈಯಾಡಿಸಿ, ನಡೆದಾಡುವ ವಿಶ್ವಕೋಶ ಎಂದೇ ಖ್ಯಾತಿಗಳಿಸಿದ್ದರು.

ಕೇವಲ 5 ದಿನಗಳಲ್ಲಿ ಬರೆದಿರುವ ಚೋಮನ ದುಡಿ, 30 ದಿನಗಳಲ್ಲಿ ಬರೆದು ಮುಗಿಸಿರುವ ಮರಳಿ ಮಣ್ಣಿಗೆ, ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಮೂಕಜ್ಜಿ ಕನಸುಗಳು, ಸ್ವಾತಂತ್ರ್ಯ ಹೋರಾಟಗಾರ ಕಾರ್ನಾಡ್ ಸದಾಶಿವ್ ರಾವ್ ಬದುಕಿನ ಚಿತ್ರಣದ ಔದಾರ್ಯದ ಉರುಳಲ್ಲಿ, ಹುಚ್ಚು ಮನಸ್ಸಿನ ಹತ್ತುಮುಖಗಳು, ಸನ್ಯಾಸಿಯ ಬದುಕು ಹೀಗೆ 44 ಕಾದಂಬರಿ, 16 ನಾಟಕ, 3 ಕಥಾ ಸಂಕಲನ, ನಾಲ್ಕು ಸಂಪುಟಗಳ ವಿಜ್ಞಾನ ಪ್ರಪಂಚ, ಸಿರಿಗನ್ನಡ ಅರ್ಥಕೋಶ, 6 ಪ್ರಬಂಧ, 5 ಆತ್ಮಕಥೆ, 240 ಮಕ್ಕಳ ಪುಸ್ತಕ, ಪ್ರವಾಸ ಕಥನ, ಕಿರಿಯರ ವಿಶ್ವಕೋಶ, ಗೀತರೂಪಕ ಸೇರಿದಂತೆ ಹಲವಾರು ಸಾಹಿತ್ಯಗಳಲ್ಲಿ ಕೈಯಾಡಿಸಿರುವ ಅವರು ಸಾರಸ್ವತ ಲೋಕದ ಅಗ್ರಗಣ್ಯ ಬರಹಗಾರರಾಗಿದ್ದರು.

ಜನಸಾಮಾನ್ಯರಿಗಾಗಿ ಸಾಹಿತ್ಯ ರಚಿಸಿದ್ದ ಕಾರಂತರ ಕಾದಂಬರಿಗಳಲ್ಲಿ ಚೋಮ, ಮೂಕಜ್ಜಿ, ನಾಗವೇಣಿಯಂತಹ ಪಾತ್ರಗಳು ನೈಜ ಬದುಕಿನ ಚಿತ್ರಣವನ್ನು ತೆರದಿಡುತ್ತಿದ್ದವು. ಕೋಪಕ್ಕೆ ಹೆಸರಾಗಿದ್ದ ಕಾರಂತರು ಅಷ್ಟೇ ಮಾನವತಾವಾದಿಯಾಗಿದ್ದರು. ಅವರು ಅದೆಷ್ಟೋ ಜನರಿಗೆ ಪ್ರತಿ ತಿಂಗಳು ಅಂಚೆ ಮೂಲಕ ಹಣ ಕಳುಹಿಸುತ್ತಿದ್ದರು ಎಂಬ ಸತ್ಯ ಅವರ ಮರಣದ ನಂತರ ಆಪ್ತರು ಬಹಿರಂಗಪಡಿಸಿದ್ದರು.

ಪರಿಸರದ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಕಾರಂತರು, ಪ್ರಸಕ್ತ ಶೈಕ್ಷಣಿಕ ಕ್ಷೇತ್ರದಲ್ಲಿನ ನೀತಿಗಳನ್ನು ಕಟುವಾಗಿ ಟೀಕಿಸಿದ್ದರು. ಅಲ್ಲದೇ ಶಿಕ್ಷಣಕ್ಷೇತ್ರಕ್ಕೆ ಹೊಸ ಆಯಾಮವನ್ನು ಕಲ್ಪಿಸಿಕೊಡಬೇಕು ಎನ್ನುವ ನಿಟ್ಟಿನಲ್ಲಿ ಸುಲಭ ಪಠ್ಯಕ್ರಮ, ವೈಜ್ಞಾನಿಕ ದೃಷ್ಟಿಕೋನದ ಕುರಿತು ಹೀಗೆ ಹಲವಾರು ವಿಭಿನ್ನ ಕನಸುಗಳನ್ನು ಹೊಂದಿದ್ದರು. ಆ ನಿಟ್ಟಿನಲ್ಲಿಯೇ ಪುತ್ತೂರಿನಲ್ಲಿನ ಕಾರಂತರ ಬಾಲವನ ತುಂಬಾ ಪ್ರಸಿದ್ಧಿ ಪಡೆದಿತ್ತು.

ಅದೇ ರೀತಿಯಲ್ಲಿ ಕರಾವಳಿಯ ಗಂಡು ಮೆಟ್ಟಿನ ಕಲೆ ಯಕ್ಷಗಾನಕ್ಕೊಂದು ಹೊಸ ರೂಪು ನೀಡಿದ ಶಿವರಾಮ ಕಾರಂತರು ಯಕ್ಷಗಾನವನ್ನು ವಿದೇಶಗಳಿಗೂ ಕೊಂಡೊಯ್ದಿದ್ದರು. ನೂರು ಕೋಶ ಓದುವುದಕ್ಕಿಂತ, ಒಮ್ಮೆ ದೇಶ ಸುತ್ತಿ ನೋಡು ಎಂಬ ಗಾದೆ ಮಾತಿನಂತೆ ಕಾರಂತರು ಸಿಂಹಳ, ನೇಪಾಳ, ಭೀರುತ್ , ಇರಾನ್, ಅಫ್ಘಾನಿಸ್ತಾನ್, ಹಾಂಕಾಂಗ್, ಜಪಾನ್‌‌ ದೇಶಗಳಿಗೆಲ್ಲ ಭೇಟಿ ನೀಡಿದ್ದರು.

ಆಡು ಮುಟ್ಟದ ಸೊಪ್ಪಿಲ್ಲ, ಕಾರಂತರು ಕೈಯಾಡಿಸದ ಕ್ಷೇತ್ರವಿಲ್ಲ ಎಂಬ ಮಾತು ಅವರಿಗೆ ಅನ್ವರ್ಥವಾಗಿತ್ತು. ಕಾರಂತರು ಮಾಡಿದ ಸಾಹಿತ್ಯ ಕೃಷಿಗೆ ಹಲವಾರು ವಿಶ್ವವಿದ್ಯಾಲಯಗಳು ಪಿ.ಎಚ್.ಡಿ ನೀಡಿವೆ, ಎರಡು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್, ಪದ್ಮಭೂಷಣ (ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಇಂದಿರಾಗಾಂಧಿಯವರ ಕ್ರಮವನ್ನು ಖಂಡಿಸಿ ಪ್ರಶಸ್ತಿಯನ್ನು ಹಿಂತಿರುಗಿಸಿದ್ದರು), ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಸ್ವೀಡಿಶ್ ಅಕಾಡೆಮಿ ಪಾರಿತೋಷಕ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಕಾರಂತರ ಮುಡಿಗೇರಿದ್ದವು.

ಕಾರಂತರ ಎಲ್ಲ ಕಾರ್ಯದ ಹಿಂದೆ ಇದ್ದವರು ಅವರ ಪತ್ನಿ ಲೀಲಾ ಕಾರಂತ್ , ಮನೆಯ ಕೆಲಸವನ್ನು ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಾ ಕಾರಂತರ ಪ್ರತಿಯೊಂದು ಕಾರ್ಯಕ್ಕೆ ಪ್ರೇರಣಾ ಶಕ್ತಿಯಾಗಿದ್ದವರು ಲೀಲಾ ಕಾರಂತ್ . ತಮ್ಮ ಇಳಿವಯಸ್ಸಿನಲ್ಲಿಯೂ ಅದೇ ಸಿಟ್ಟು, ಸಮಯಪಾಲನೆ ಪಾಲಿಸಿಕೊಂಡು ಬಂದಿದ್ದ ಶಿಸ್ತಿನ ಸಿಪಾಯಿ ಕಾರಂತರು ಸಾಹಿತ್ಯ ಕ್ಷೇತ್ರವನ್ನು ಅಗಲಿ ಇಂದಿಗೆ ಹತ್ತು ವರ್ಷಗಳು ಸಂದರೂ, ಅವರು ಕನ್ನಡ ಸಾಹಿತ್ಯ ಲೋಕದಲ್ಲಿ ಮೂಡಿಸಿದ್ದ ಛಾಪು ಅಜರ ಅಮರ.

ವೆಬ್ದುನಿಯಾವನ್ನು ಓದಿ