ಗಣೇಶ ಮತ್ತು ಕಾವೇರಿ ನದಿಯ ಉಗಮ

ದಕ್ಷಿಣದ ಪ್ರಾಂತ್ಯವು ನೀರಿಲ್ಲದೆ ಬಂಜರಾಗಿತ್ತು. ಹಾಗಾಗಿ ಇಲ್ಲಿನ ಜಲಕ್ಷಾಮವನ್ನು ಹೋಗಲಾಡಿಸಲು ಮುನಿ ಅಗಸ್ತ್ಯರು, ಬ್ರಹ್ಮನ ಆಶಿರ್ವಾದದೊಂದಿಗೆ, ಶಿವನಿಂದ ಪವಿತ್ರವಾದ ಜಲವನ್ನು ಪಡೆದು ಅವರ ಕಮಂಡಲದಲ್ಲಿ ತುಂಬಿದ್ದರು.

ಭೋರ್ಗರೆಯುತ್ತಾ ಉಕ್ಕಿ ಹರಿಯುವ ನದಿಯ ಸೃಷ್ಟಿಗಾಗಿ ಸೂಕ್ತ ಜಾಗವನ್ನು ಹುಡುಕುವ ಆಶಯದಿಂದ, ಅಗಸ್ತ್ಯ ಮುನಿಗಳು ದಕ್ಷಿಣ ಭಾಗಕ್ಕೆ ಪ್ರವಾಸ ಕೈಡೊಂಡು ಕೊಡಗಿನ ಬೆಟ್ಟ ಪ್ರದೇಶವನ್ನು ತಲುಪಿದರು.
WD


ದಾರಿಯಲ್ಲಿ ತೆರಳುತ್ತಿರುವ ವೇಳೆ ಅವರು ಬಾಲಕನೊಬ್ಬನನ್ನು ಭೇಟಿಯಾದರು. ವಾಸ್ತವವಾಗಿ, ಆ ಬಾಲಕ ವೇಷಮರೆಸಿದ ಗಣೇಶನಾಗಿದ್ದನು. ದೇಹಬಾಧೆ ಪೀಡಿತರಾಗಿದ್ದ ಅಗಸ್ತ್ಯ ಮುನಿಗಳು ಶೌಚಕ್ಕಾಗಿ ಸೂಕ್ತ ಜಾಗವನ್ನು ಹುಡುಕುತ್ತಿದ್ದು, ತನ್ನ ಕೈಲಿರುವ ನೀರಿನ ಕಮಂಡಲವನ್ನು ಜಾಗರೂಕತೆಯಿಂದ ಹಿಡಿದುಕೊಳ್ಳಲು ಆ ಬಾಲಕನನ್ನು ವಿನಂತಿಸಿದರು.

ನದಿಯ ಉಗಮಕ್ಕಾಗಿ ಮುನಿಗಳು ಸೂಕ್ತಜಾಗದ ಅನ್ವೇಷಣೆಯಲ್ಲಿ ಇರುವುದನ್ನು ತಿಳಿದಿದ್ದ ಗಣೇಶ ಇದೇ ಜಾಗ ಸೂಕ್ತವಾಗಿದೆ ಎಂದೆನಿಸಿಕಮಂಡಲವನ್ನು ನೆಲದ ಮೇಲೆ ಇಟ್ಟುಬಿಟ್ಟ.

ಅಲ್ಲಿಯೇ ಹಾರಾಡುತ್ತಿದ್ದ ಕಾಗೆಯೊಂದು ಕಮಂಡಲವನ್ನು ತಾಕುವಂತೆ ಕುಳಿತುಕೊಂಡಿತು. ಅಷ್ಟರಲ್ಲಿ ಹಿಂತಿರುಗಿದ ಅಗಸ್ತ್ಯ ಮುನಿಗಳು ಕಾಗೆಯನ್ನು ನೋಡಿ ಧಾವಂತದಿಂದ ಅದನ್ನು ಓಡಿಸಲು ಪ್ರಯತ್ನಿಸಿದಾಗ ಕಮಂಡಲ ನೀರು ಚೆಲ್ಲಿತು. ಸಣ್ಣ ಪ್ರಮಾಣದ ಜಲವು ಜಲಧಾರೆಯಾಗಿ ನದಿಯಾಗಿ ಹರಿಯಿತು.

ತಲಕಾವೇರಿಯ ಸ್ಥಳವನ್ನು ಈಗಲೂ ಪವಿತ್ರವೆಂದು ಪರಿಗಣಿಸಲಾಗುತ್ತಿದ್ದು, ಇಲ್ಲಿ ಪೂಜೆ ಪುನಸ್ಕಾರಗಳು ನಡೆಯುತ್ತಿವೆ.