ಪರಿಸರಕ್ಕೆ ಹಾನಿಯಾಗದಂತೆ ಗಣೇಶ ವಿಸರ್ಜನೆಗೆ ಸಲಹೆ

PTI
ಚೌತಿ ಪೂಜೆಯ ಬಳಿಕ ಗಣೇಶನ ಮ‌ೂರ್ತಿಯನ್ನು ಕೆರೆ, ಸಮುದ್ರಗಳಲ್ಲಿ ವಿಸರ್ಜಿಸಿ ತಮ್ಮ ಜನ್ಮ ಸಾರ್ಥಕವಾಯಿತೆಂದು ಜನತೆ ಭಾವಿಸಬಹುದು. ಆದರೆ ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ತಯಾರಾಗುವ ಗಣೇಶನ ವಿಗ್ರಹಗಳನ್ನು ಕೆರೆ, ನದಿ ಮತ್ತು ಸಮುದ್ರಗಳಲ್ಲಿ ವಿಸರ್ಜನೆಯಿಂದ ನೈಸರ್ಗಿಕ ಪರಿಸರದ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತಿರುವುದು ಕಂಡುಬಂದಿದೆ. ಹಿಂದೆ ಸಾಂಪ್ರದಾಯಿಕವಾಗಿ ಗಣೇಶನ ವಿಗ್ರಹಗಳನ್ನು ಮಣ್ಣಿನಲ್ಲಿ ತಯಾರಿಸುತ್ತಿದ್ದರು. ಮಣ್ಣಿನ ಮ‌ೂರ್ತಿಯನ್ನು ಪೂಜಿಸಿದ ಬಳಿಕ ಸಮೀಪದ ನೀರಿನ ಸೆಲೆಯಲ್ಲಿ ವಿಸರ್ಜಿಸುವ ಮ‌ೂಲಕ ಮಣ್ಣಿನಲ್ಲಿ ಲೀನವಾಗುತ್ತಿತ್ತು. ಇದು ನಿಸರ್ಗದಿಂದ ಸೃಷ್ಟಿ ಮತ್ತು ನಿಸರ್ಗದಲ್ಲಿ ವಿಸರ್ಜನೆ ಚಕ್ರವನ್ನು ಪ್ರತಿನಿಧಿಸುತ್ತಿತ್ತು.

ಆದರೆ ಗಣೇಶ ಮ‌ೂರ್ತಿಗಳ ವಾಣಿಜ್ಯ ಆಧಾರದ ಉತ್ಪಾದನೆ ಹೆಚ್ಚಿದಂತೆಲ್ಲ ಮಣ್ಣಿನ ಮ‌ೂರ್ತಿಗಳ ಬದಲಿಗೆ ಪ್ಲಾಸ್ಟರ್ ಆಫ್ ಪ್ಯಾರಿಸ್ ಮ‌ೂರ್ತಿಗಳು ಪ್ರತ್ಯಕ್ಷವಾದವು. ಆದರೆ ಈ ಮ‌ೂರ್ತಿಗಳು ವಿಸರ್ಜನೆಯಾಗಲು ಹೆಚ್ಚು ಸಮಯ ತೆಗೆದುಕೊಂಡು ನೀರಿನ ಸೆಲೆಗೆ ವಿಷಕಾರಿ ವಸ್ತುಗಳನ್ನು ಬಿಡುಗಡೆ ಮಾಡುತ್ತಿವೆ. ಇವುಗಳ ಮೆರುಗಿಗೆ ಬಳಸಲಾದ ರಾಸಾಯನಿಕ ಬಣ್ಣಗಳು ಪಾದರಸ ಮತ್ತು ಕ್ಯಾಡ್ಮಿಯಂ ಮುಂತಾದ ಭಾರದ ವಸ್ತುಗಳನ್ನು ಒಳಗೊಂಡಿದೆ.

ಗಣೇಶಉತ್ಸವದ ಅಂತಿಮದಿನ ಸಾವಿರಾರು ಪ್ಲಾಸ್ಟರ್ ಮ‌ೂರ್ತಿಗಳನ್ನು ಭಕ್ತರು ನೀರಿನಲ್ಲಿ ವಿಸರ್ಜಿಸುತ್ತಾರೆ. ಇದು ನೀರಿನ ಆಮ್ಲತೆ ಮತ್ತು ಭಾರವಸ್ತುಗಳ ಪ್ರಮಾಣ ಹೆಚ್ಚಿಸುತ್ತದೆ. ಗಣೇಶನ ಮ‌ೂರ್ತಿ ವಿಸರ್ಜನೆಯಲ್ಲಿ ಪರಿಸರಕ್ಕೆ ಯಾವುದೇ ಹಾನಿ ತಟ್ಟದಂತಾಗಲು ವಿವಿಧ ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳು ಕೆಳಗಿನ ನಾನಾ ಸಲಹೆಗಳನ್ನು ಮಂಡಿಸಿವೆ.

1. ಸಾಂಪ್ರದಾಯಿಕವಾಗಿ ಬಳಸುತ್ತಿದ್ದ ಮಣ್ಣಿನ ಮ‌ೂರ್ತಿಗಳ ಬಳಕೆ ಮತ್ತು ಬಕೆಟ್ ನೀರಿನಲ್ಲಿ ವಿಸರ್ಜನೆ.

2.ಕಲ್ಲು ಮತ್ತು ಹಿತ್ತಾಳೆಯಿಂದ ಮಾಡಿದ ಕಾಯಂ ಮ‌ೂರ್ತಿಯ ಬಳಕೆ. ಪ್ರತಿವರ್ಷ ಅದನ್ನೇ ಬಳಸಿ ಸಾಂಕೇತಿಕವಾಗಿ ವಿಸರ್ಜನೆ ಮಾಡುವುದು.

3.ನದಿ, ಕೆರೆ ಮತ್ತು ಸಮುದ್ರದಲ್ಲಿ ಪ್ಲಾಸ್ಟರ್ ಮ‌ೂರ್ತಿಗಳ ವಿಸರ್ಜನೆಗೆ ನಿಷೇಧ.

4. ನೈಸರ್ಗಿಕ ನೀರಿನ ಸೆಲೆಗಳಲ್ಲಿ ವಿಸರ್ಜಿಸುವ ಬದಲಿಗೆ ನೀರಿನ ಟ್ಯಾಂಕ್‌ಗಳಲ್ಲಿ ವಿಸರ್ಜಿಸುವಂತೆ ಜನರನ್ನು ಪ್ರೋತ್ಸಾಹಿಸುವುದು.

ವೆಬ್ದುನಿಯಾವನ್ನು ಓದಿ