ಆರೋಗ್ಯಕರ ಜೀವನಕ್ಕೆ ಸರಳ ಸೂತ್ರಗಳು

ಶುಕ್ರವಾರ, 18 ಸೆಪ್ಟಂಬರ್ 2009 (20:14 IST)
NRB
ಈಗಿನ ವೇಗದ ಜೀವನ ಕ್ರಮದಲ್ಲಿ ಕೆಲವರಿಗೆ ಹೊತ್ತೊತ್ತಿನ ಊಟ ತಿಂಡಿಗೆ ಸಮಯ ಇರುವುದಿಲ್ಲ. ಸಮಯ ಬಿಡಿ ತಾನು ಎಷ್ಟೊತ್ತಿಗೆ ತಿಂದಿದ್ದೆ ಎಂಬುದೇ ಮರೆತು ಹೋಗಿರುತ್ತದೆ. ತಮ್ಮ ದೇಹ ಅಂದರೆ ಟೇಕನ್ ಫಾರ್ ಗ್ರಾಂಟೆಡ್. ಚಲ್ತಾ ಹೇ ಎಂಬ ಮನೋಭಾವ. ದೇಹದಲ್ಲಿ ಕಸುವು ಇದ್ದಾಗ ತಿಳಿಯದು. ಆದರೆ ಇದರ ಪರಿಣಾಮವನ್ನು ಮತ್ತೆ ನೀವೇ ಎದುರಿಸಬೇಕಾಗುತ್ತದೆ. ಹಾಗಾಗಿ ಊಟ ತಿಂಡಿಯ ಕಡೆ ಅಲಕ್ಷ್ಯ ಖಂಡಿತಕ್ಕೂ ಸಲ್ಲದು. ಆರೋಗ್ಯಕರ ಜೀವನಕ್ಕೆ ಕೆಲವು ಸರಳ ಸೂತ್ರಗಳನ್ನು ಗಮನಿಸಿ

ಬೆಳಗಿನ ತಿಂಡಿ ಅತ್ಯವಶ್ಯ
ನಿಮ್ಮ ಮುಂಜಾವನ್ನು ತಿಂಡಿಯೊಂದಿಗೆ ಆರಂಭಿಸಿ. ಅದು ಅಂದು ಒಂದು ತುಂಡು ಹಣ್ಣಿರಬಹುದು ಅಥವಾ ಒಂದು ತುಂಡು ಬ್ರೆಡ್ಡಾಗಿರಬಹುದು. ನೀವು ತುಂಬ ಅವಸರದ ಮಂದಿಯಾಗಿದ್ದರೆ, ಹೀಗೆ ಮಾಡಬಹುದು. ಥರ್ಮಾಸ್‌ನಲ್ಲಿ ಬಿಸಿನೀರಿನಲ್ಲಿ ರಾತ್ರಿ ವೋಟ್‌ಮೀಲ್ ಹಾಕಿಡಿ. ಅದು ರಾತ್ರಿ ಇಡೀ ನೆನೆಯಲಿ. ಬೆಳಗ್ಗೆ ನಿಮ್ಮ ವೋಟ್‌ಮೀಲ್ ಸಿದ್ಧವಾಗಿರುತ್ತದೆ. ಒಂದು ಬೇಯಿಸಿದ ಮೊಟ್ಟೆಯನ್ನೂ ಸೇವಿಸಬಹುದು. ಇದು ನೀವು ಹಸಿದಿರುವುದನ್ನು ತಡೆಯುತ್ತದೆ. ಪ್ರತಿನಿತ್ಯ ಬೆಳಗ್ಗಿನ ತಿಂಡಿ ಸೇವಿಸುವುದರಿಂದ ನಿಮ್ಮ ದೇಹದ ಮೆಟಬಾಲಿಕ್ ದರವನ್ನು ಹೆಚ್ಚಿಸುತ್ತದೆ.

ದಿನಕೈದು ಊಟ
ದಿನಕ್ಕೆ ಐದು ಊಟನಾ ಅನ್ನುತ್ತಾ ಉದ್ಗಾರ ತೆಗೆಯದಿರಿ. ದೇಹದ ಆರೋಗ್ಯವನ್ನು ಕಾಪಾಡಬೇಕಿದ್ದರೆ ಕನಿಷ್ಠ ಐದು ಊಟವನ್ನು ರೂಢಿಸಿಕೊಳ್ಳಿ. ಬ್ರೇಕ್‌ಫಾಸ್ಟ್, ಲಂಚ್, ಡಿನ್ನರ್ ಪ್ರಮುಖ ಊಟಗಳಾಗಿದ್ದರೆ ಮತ್ತೆರಡು ಚಿಕ್ಕಪ್ರಮಾಣದ್ದು. ಪೌಷ್ಠಿಕಾಂಶವುಳ್ಳ ಆಹಾರವನ್ನು ನೀವು ಮೆಲ್ಲಬಹುದು. ಆಗಾಗ ಏನಾದರೂ ತಿನ್ನುವುದು ನಿಮ್ಮ ಹಸಿವನ್ನು ತಡೆಯುತ್ತದೆ ಮಾತ್ರವಲ್ಲದೆ, ಶಕ್ತಿಯನ್ನು ಸಮನಾಗಿಸುತ್ತದೆ ಮತ್ತು ಜೀರ್ಣಕ್ರೀಯೆಯನ್ನು ದಕ್ಷವಾಗಿಸುತ್ತದೆ. ಸೇಬು, ಕಲ್ಲಂಗಡಿ, ಕಿತ್ತಳೆ, ಮುಸುಂಬಿ, ಪಪ್ಪಾಯ ಮತ್ತು ಪೀಚ್‌ಗಳಂತಹ ಅಧಿಕ ಫೈಬರ್ ಇರುವ ಹಣ್ಣನ್ನು ಸೇವಿಸಿ.

ಆರೋಗ್ಯಕರ ಆಹಾರವನ್ನೇ ಸೇವಿಸಿ
ಊಟತಿಂಡಿಗಾಗಿ ಹೋಟೇಲನ್ನು ಅವಲಂಭಿಸಬೇಕಾದಾಗ ಸ್ವಲ್ಪ ಜಾಗರೂಕರಾಗಿರಿ. ಅನವಶ್ಯಕ ಫ್ಯಾಟ್ ಇರುವಂತಹ ಆಹಾರವನ್ನು ದೂರವಿರಿಸಿ. ಕ್ರೀಮೀ ಸೂಪ್‌ಗಳು, ವೈಟ್ ಬ್ರೆಡ್, ಪೇಸ್ಟ್ರೀಗಳು ಮುಂತಾದವುಗಳನ್ನು ದೂರವಿಡಿ. ಪ್ಲೇನ್ ಸೂಪ್, ಸೌತೆಕಾಯಿ, ಕ್ಯಾರೆಟ್, ನಿಂಬೆ ಹಣ್ಣು, ಈರುಳ್ಳಿ ಮುಂತಾದ ಸಲಾಡ್ ಬಳಸಿ. ನೆನಪಿಡಿ, ಒಂದು ಗ್ರಾಂ ಫ್ಯಾಟ್, ಪ್ರೊಟೀನ್ ಅಥವಾ ಕಾರ್ಬೊಹೈಡ್ರೇಟ್‌ಗಿಂತ ದುಪ್ಪಟ್ಟು ಕ್ಯಾಲೋರಿ ಹೊಂದಿರುತ್ತದೆ. ಹುರಿದ ಆಹಾರಕ್ಕಿಂತ ಬೇಯಿಸಿದ, ಗ್ರಿಲ್ ಮಾಡಿದ, ಬೇಕ್ ಮಾಡಿದ ಆಹಾರ ಉತ್ತಮ.

ಡಿಹೈಡ್ರೇಶನ್ ಆಗದಂತೆ ನೋಡಿಕೊಳ್ಳಿ
ಪ್ರವಾಸದವೇಳೆ ದೇಹದಲ್ಲಿ ದ್ರವಾಂಶ ಕೊರತೆಯಾಗದಂತೆ ನೋಡಿಕೊಳ್ಳಿ. ವಿಮಾನ ಪ್ರಯಾಣದ ವೇಳೆ ಹೆಚ್ಚು ಡಿಹೈಡ್ರೇಶನ್ ಉಂಟಾಗುತ್ತದೆ. ಇದರಿಂದಾಗಿ ಗಂಟಲ ಸಮಸ್ಯೆ ಹಾಗೂ ಉಸಿರಾಟದ ತೊಂದರೆ ಉಂಟಾಗುತ್ತದೆ. ಇದನ್ನು ತಡೆಯಲು ಪ್ರಯಾಣಕ್ಕೆ ಮುನ್ನ ಅಥವಾ ನಂತರ ಕೆಫೀನ್, ಕೋಲಾ ಅಥವಾ ಮದ್ಯ ಸೇವಿಸಬಾರದು. ಇದೇ ವೇಳೆ ಉಪ್ಪು ಲೇಪಿತ ಕುರುಕು ತಿಂಡಿಗಳನ್ನೂ ತಿನ್ನಬಾರದು. ಉಪ್ಪುಸವರಿದ ಗೋಡಂಬಿ, ನೆಲಕಡಲೆ ಮುಂತಾದುವುದನ್ನು ತಿನ್ನದಿರುವುದರಿಂದ ಡಿ ಹೈಡ್ರೇಶನ್ ತಡೆಯಬಹುದು. ಯಥೇಚ್ಚವಾಗಿ ದ್ರವಾಹಾರ ಸೇವಿಸಿ. ಎಳ್ನೀರು, ಹಣ್ಣಿನ ರಸ, ನಿಂಬೆ ಶರಬತ್ತು, ಮುಂತಾದುವುಗಳನ್ನು ಸೇವಿಸುವುದು ಉತ್ತಮ. ಪ್ರತಿದಿನ ಕನಿಷ್ಠ ಮೂರು ಲೀಟರ್ ನೀರು ಸೇವಿಸಿ.

ಉತ್ತಮ ಗುಣಮಟ್ಟದ ಆಹಾರ ಸೇವಿಸಿ
ನೀವು ಸೇವಿಸುವ ಆಹಾರದ ಗುಣಮಟ್ಟ ಕೆಲಸದಲ್ಲಿ ನಿಮ್ಮ ದಕ್ಷತೆಯ್ನು ತೋರುತ್ತದೆ. ಸಂಸ್ಕರಿಸಿದ ಆಹಾರಗಳನ್ನು ದೂರವಿಡಿ. ಉದಾಹರಣೆಗೆ ಸಂಸ್ಕರಿಸಿದ ಗೋಧಿ ಹಿಟ್ಟಿಗಿಂತ ಗೋಧಿಯನ್ನು ಬಳಸಿ, ಸಕ್ಕರೆಗಿಂತ ಬೆಲ್ಲ ಮತ್ತು ಜೇನುತುಪ್ಪ ಉತ್ತಮ. ಪಾಲಿಶ್ ಮಾಡಿದ ಅಕ್ಕಿಗಿಂತ ಪಾಲಿಶ್ ಮಾಡದಿರುವ ಕೆಂಪಕ್ಕಿ ಆರೋಗ್ಯಕ್ಕೆ ಉತ್ತಮ. ಈ ಚಿಕ್ಕಪುಟ್ಟ ಸೂತ್ರಗಳನ್ನು ದೈನಂದಿನ ಆಹಾರಕ್ರಮದಲ್ಲಿ ಆಳವಡಿಸಿಕೊಳ್ಳಿ. ಇವೆಲ್ಲವುಗಳು ನಿಮ್ಮನ್ನು ಆರೋಗ್ಯವಂತರನ್ನಾಗಿ ಇರಿಸುತ್ತವೆ.

ವೆಬ್ದುನಿಯಾವನ್ನು ಓದಿ