ಮಧುಮೇಹ ತಿಳಿಯಲು ವೈದ್ಯರಿಗೆ ಸಹಕಾರಿಯಾದ ಗ್ಲೈಕಾಸಿಲೇಟರ್

ಶನಿವಾರ, 22 ನವೆಂಬರ್ 2014 (12:18 IST)
ಮಧುಮೇಹ ಅಥವಾ ಸಕ್ಕರೆ ಖಾಯಿಲೆ ಇರುವವರು ಸುಳ್ಳು ಹೇಳಬೇಡಿ ಎಂದರೆ ಅವರು ಯಾರಲ್ಲೂ ಸುಳ್ಳು ಹೇಳಬಾರದು ಎನ್ನುವ ಉಪದೇಶವಲ್ಲ. ಇದು ವೈದ್ಯರೆದುರು ಯಾವುದನ್ನೂ ಮುಚ್ಚಿಡಬಾರದು, ಸಿಕ್ಕಿಹಾಕಿಕೊಳ್ಳುತ್ತೀರಿ ಎನ್ನುವ ಎಚ್ಚರಿಕೆ.
 
ಮಧುಮೇಹಿಗಳು ತಮ್ಮ ದೇಹವನ್ನು ಆರೋಗ್ಯವಾಗಿಡಲು ಕಟ್ಟುನಿಟ್ಟಿನ ಆಹಾರ ಪದ್ಧತಿ, ವ್ಯಾಯಾಮ, ಸೂಕ್ತ ಔಷಧಿ ಮತ್ತು ನಿಯಮಿತವಾಗಿ ದೇಹದಲ್ಲಿರುವ ಸಕ್ಕರೆ ಪ್ರಮಾಣವನ್ನು ತಿಳಿಯುವ ಅಗತ್ಯವಿದೆ. ಕನಿಷ್ಠ ತಿಂಗಳಿಗೊಮ್ಮೆಯಾದರೂ ಪರೀಕ್ಷೆ ಮಾಡಿ ಎಂದು ವೈದ್ಯರು ಶಿಫಾರಸ್ಸು ಮಾಡುತ್ತಾರೆ. ಆದರೆ ಇದನ್ನು ಪಾಲಿಸುವವರ ಸಂಖ್ಯೆ ಮಾತ್ರ ಕಡಿಮೆ.
 
ಒಂದು ವೇಳೆ ವೈದ್ಯರು ಪರೀಕ್ಷೆ ಮಾಡಿಸಿಕೊಂಡೇ ಬರಬೇಕು ಎಂದು ಪಟ್ಟುಹಿಡಿದರೆ, ಗೊಣಗುತ್ತಾ ಪರೀಕ್ಷೆ ಮಾಡಿ ವರದಿ ಹಿಡಿದುಕೊಂಡು ಹೋಗುತ್ತಾರೆ, ವೈದ್ಯರು ಯಾಕೆ ಸಕ್ಕರೆ ಅಂಶ ಅಧಿಕವಾಗಿದೆ ಎಂದು ಕೇಳಿದರೆ ಯಾವುದಾದರೂ ಪೊಳ್ಳು ಕಾರಣವನ್ನು ಹೇಳುತ್ತಾರೆ. ಮತ್ತೆ ಕೆಲವು ಬುದ್ಧಿವಂತ ರೋಗಿಗಳು ಪರೀಕ್ಷೆ ಮೊದಲ ದಿನ ಶುದ್ಧ ಪಥ್ಯ ಅನುಸರಿಸಿ ರಕ್ತ ಪರೀಕ್ಷೆಯಲ್ಲಿ ಸಕ್ಕರೆ ಅಂಶಗಳು ಕಡಿಮೆಯಾಗಿ ತೋರಲು ಪ್ರಯತ್ನ ಮಾಡುತ್ತಾರೆ.
 
ಇಂತಹ ಸುಳ್ಳು ಮತ್ತು ಅಪಾಯಕಾರಿ ಬುದ್ಧಿವಂತಿಕೆಗಳಿಗೆ ಈಗ ಪೂರ್ಣವಿರಾಮ ಹಾಕುವ ಕಾಲ ಸನ್ನಿಹಿತವಾಗಿದೆ. ಇದಕ್ಕಾಗಿ ಒಂದು ಪರೀಕ್ಷೆ ಇದೀಗ ಪ್ರಚಲಿತಗೊಳ್ಳುತ್ತಿದೆ. ಈ ಪರೀಕ್ಷೆಗೆ  'ಗ್ಲೈಕಾಸಿಲೇಟರ್' ಎಂದು ಕರೆಯುತ್ತಾರೆ. ಇದು ವೈದ್ಯರ ಇಕ್ಕಟ್ಟನ್ನು ಪರಿಹರಿಸುವ ಸುಲಭ ಪರೀಕ್ಷೆಯಾಗಿ ಪರಿಣಮಿಸುತ್ತಿದೆ.
 
ನಮ್ಮ ರಕ್ತದಲ್ಲಿನ ಸಕ್ಕರೆ ಕಣಗಳು ಹಿಮೋಗ್ಲೋಬಿನನ್ನು ಮೆತ್ತಿಕೊಂಡಿರುತ್ತವೆ. ನಾಲ್ಕು ತಿಂಗಳು ಬದುಕಬಲ್ಲ ರಕ್ತಕಣಗಳ ಸುತ್ತ ಸಕ್ಕರೆ ಕಣಗಳು ಅಂಟಿಕೊಂಡೇ ಇರುತ್ತದೆ. ಮತ್ತೆ ಹುಟ್ಟಿಕೊಳ್ಳುವ ರಕ್ತ ಕಣದಲ್ಲೂ ಕೂಡಾ ಕೂಡಲೇ ಸಕ್ಕರೆ ಅಂಟಿಕೊಳ್ಳುತ್ತದೆ.
 
ಈ ಗ್ಲೈಕಾಸಿಲೇಟರ್ ಪರೀಕ್ಷೆಯ ಮೂಲಕ ಕಳೆದ ಮೂರು ತಿಂಗಳಿಂದ ಬದುಕಿರುವ ರಕ್ತದ ಕಣಗಳಲ್ಲಿನ ಸಕ್ಕರೆ ಅಂಶವನ್ನು ಪತ್ತೆ ಮಾಡಬಹುದು. ಈ ಕಾರಣಕ್ಕಾಗಿ ಮಧು ಮೇಹಿಗಳ ಆಹಾರ ದಿನಚರಿ ಪರೀಕ್ಷೆಗೆ ಇದು ಸಹಕಾರಿ. ಇಲ್ಲಿ ಕಳೆದ ಕೆಲವು ತಿಂಗಳಿಂದ ಮಧುಮೇಹಿ ಯಾವ ರೀತಿಯಲ್ಲಿ ಸಕ್ಕರೆ ಅಂಶವನ್ನು ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆ ಎನ್ನುವುದು ತಿಳಿಯಬಹುದು. 
 
ಈ ಪರೀಕ್ಷೆ ದುಬಾರಿ ಎನ್ನುವ ಅಸಮಾಧಾನವೂ ಇದೆ. ಆದರೆ ವ್ಯಾವಹಾರಿಕವಾಗಿ ನೋಡಿದಾಗ ತಿಂಗಳಿಗೆ ಮೂರು ಬಾರಿ ಪರೀಕ್ಷೆ ಮಾಡುವುದಕ್ಕಿಂತ ಮೂರು ತಿಂಗಳಿಗೆ ಒಮ್ಮೆ ಪರೀಕ್ಷಿಸುವುದು ಲಾಭದಾಯಕ.
 
ಇದು ಸಕ್ಕರೆ ಖಾಯಿಲೆ ಪತ್ತೆಗೆ ಮಾಡಲಾಗುವ ಪರೀಕ್ಷೆಯಲ್ಲ ಎಂದು ತಿಳಿಯುವುದು ಅಗತ್ಯ, ಮಧುಮೇಹಿಗಳು ಮುಂದೆ  ಪರೀಕ್ಷೆಗಾಗಿ ವೈದ್ಯರಲ್ಲಿಗೆ ಹೋದಾಗ 'ಗ್ಲೈಕಾಸಿಲೇಟೆಡ್ ಹಿಮೋಗ್ಲೋಬಿನ್' ಮಾಡಿ ಎಂದು ಹೇಳಬಹುದು.

ವೆಬ್ದುನಿಯಾವನ್ನು ಓದಿ