ಏನಿದು ಸಾರವರ್ಧಿತ ಅಕ್ಕಿ, ಇದರಿಂದ ಪೌಷ್ಟಿಕಾಂಶ ಹೆಚ್ಚಾಗುತ್ತಾ ?

ಬುಧವಾರ, 21 ಜುಲೈ 2021 (12:50 IST)
ಕೊಪ್ಪಳ: ರಾಜ್ಯದಲ್ಲಿ ಕೊರೊನಾ ಮೂರನೆಯ ಅಲೆ ಭೀತಿ, ಮೂರನೆಯ ಅಲೆಯು ಬಹುತೇಕ ಮಕ್ಕಳನ್ನು ಕಾಡುತ್ತಿದೆ ಎನ್ನವ ತಜ್ಞರ ವರದಿ, ಅದರಲ್ಲಿಯೂ ಅಪೌಷ್ಠಿಕ ಮಕ್ಕಳಲ್ಲಿ ಬಹುಬೇಗ ಸೋಂಕು ಕಾಣಿಸಿಕೊಳ್ಳುತ್ತಿದೆ ಎನ್ನಲಾಗುತ್ತಿದೆ, ಈ ಮಧ್ಯೆ ಅಪೌಷ್ಠಿಕ ಮಕ್ಕಳಲ್ಲಿ ಪೌಷ್ಠಿಕತೆಗಾಗಿ ಸಾರವರ್ಧಿತ ಅಕ್ಕಿಯನ್ನು ಶಾಲಾ ಮಕ್ಕಳಿಗೆ ನೀಡಲಾಗುತ್ತಿದೆ, ಈ ಅಕ್ಕಿಯ ಅನ್ನವನ್ನು ಊಟ ಮಾಡಿದ ಅಪೌಷ್ಠಿಕ ಮಕ್ಕಳಲ್ಲಿ ಪೌಷ್ಠಿಕ ಪ್ರಮಾಣ ಹೆಚ್ಚಾದರೆ ಈ ಅಕ್ಕಿಯನ್ನು ದೇಶದಾದ್ಯಂತ ನೀಡುವ ಉದ್ದೇಶವಿದೆ, ಈ ಕಾರಣಕ್ಕೆ ಕೊಪ್ಪಳ ತಾಲೂಕಿನ ಬಹದ್ದೂರು ಬಂಡಿಯಲ್ಲಿ ವಿಶೇಷವಾದ ಸಾರವರ್ಧಿತ ಅಕ್ಕಿಯನ್ನು ವಿತರಿಸಿದ್ದು, ಇದು ದೇಶದಲ್ಲಿಯೇ ಮೊದಲು ಎನ್ನಲಾಗಿದೆ.


ಅಪೌಷ್ಠಿಕತೆಯು ಮಕ್ಕಳನ್ನು ಕಾಡುತ್ತಿದೆ, ಅಪೌಷ್ಠಿಕತೆಯಿಂದ ಮಕ್ಕಳ ದೈಹಿಕ ಹಾಗು ಮಾನಸಿಕ ಬೆಳವಣಿಗೆ ಆಗುವುದಿಲ್ಲ, ಈ ಮಕ್ಕಳು ಸಾಕಷ್ಟು ಪ್ರಮಾಣದಲ್ಲಿ ರೋಗಕ್ಕೆ ತುತ್ತಾಗುತ್ತಾರೆ, ಇಂಥ ಮಕ್ಕಳಿಗೆ ಪೌಷ್ಠಿಕ ಆಹಾರ ನೀಡಬೇಕಾಗಿದೆ, ಈ ಕಾರಣಕ್ಕಾಗಿ ಕೇಂದ್ರ ಸರಕಾರ ಬಯೋಟೆಕ್ನಿಲಾಜಿ ವಿಭಾಗದಿಂದ ವಿಶೇಷವಾದ ಅಕ್ಕಿಯನ್ನು ತಯಾರಿಸಿ ನೀಡಲಾಗುತ್ತಿದೆ.


ಸೋನಾ ಮಸೂರಿ ಅಕ್ಕಿಯೊಂದಿಗೆ ಶೇ 30 ರಷ್ಟು ಸಾರವರ್ಧಿತ ಅಕ್ಕಿಯನ್ನು ಸೇರಿಸಿ ಮಕ್ಕಳ ಇಡೀ ಕುಟುಂಬಕ್ಕೆ ನೀಡಲಾಗುತ್ತಿದೆ. ಮಕ್ಕಳಲ್ಲಿ ಕಬ್ಬಿಣಾಂಶ ಕಡಿಮೆ ಇರುವ  ಮಕ್ಕಳ ಕುಟುಂಬಕ್ಕೆ ಎರಡು ವರ್ಷದ ಅವಧಿಯವರೆಗೂ ಅಕ್ಕಿಯನ್ನು ನೀಡಲಾಗುತ್ತಿದೆ, ಈ ಅಕ್ಕಿಯಲ್ಲಿ, ಐರನ್, ಬಿ12, ಪೋಲಿಕ್ ಆಸಿಡ್ ಇದೆ,  ಬೆಂಗಳೂರಿನ ಸೆಂಟ್ ಜಾನ್  ರಿಸರ್ಚ ಸೆಂಟರ್. ಕೆಎಚ್ ಪಿಟಿ,( ಕರ್ನಾಟಕ ಆರೋಗ್ಯ ವರ್ಧಿತ ಪ್ರತಿಷ್ಠಾನ) ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಈಗ  ಪ್ರಾಯೋಗಿಕ ಪರೀಕ್ಷೆ ನಡೆಸಲಾಗುತ್ತಿದೆ.ಸುಮಾರು 2 ವರ್ಷಗಳ ಕಾಲ ಅಧ್ಯಯನ ನಡೆಸಿದ ಸೆಂಟ್ ಜಾನ್ ರಿಸರ್ಚ ಸೆಂಟರ್ ಹಾಗು ಕೇಂದ್ರ ಬಯೋಟೆಕ್ನಾಲಾಜಿ ವಿಭಾಗವು ಅಪೌಷ್ಠಿಕ ಮಕ್ಕಳಲ್ಲಿ ಆರೋಗ್ಯ ವರ್ಧನೆಗಾಗಿ ಈ ಪ್ರಯೋಗ ಆರಂಭಿಸಿದೆ.
ಈ ಮೊದಲು ಅಪೌಷ್ಠಿಕ ಮಕ್ಕಳಿಗೆ ಮಾತ್ರ ಪೌಷ್ಠಿಕ ಆಹಾರ ನೀಡಲಾಗುತ್ತಿತ್ತು, ಆದರೆ ಈಗ ಅಪೌಷ್ಠಿಕ ಇರುವ ಇಡೀ ಕುಟುಂಬಕ್ಕೆ ಸಾರವರ್ಧಿತ ಅಕ್ಕಿ ನೀಡಲಾಗುತ್ತಿದೆ.ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 30269 ಅಪೌಷ್ಠಿಕ ಹಾಗು 748 ತೀವ್ರ ಅಪೌಷ್ಠಿಕ ಮಕ್ಕಳಿದ್ದಾರೆ ಎಂದು ಸಮಿಕ್ಷೆಯಲ್ಲಿ ತಿಳಿದುಬಂದಿದೆ, ಈ ಮಧ್ಯೆ ಸಾರವರ್ಧಿತ ಅಕ್ಕಿಯಿಂದ ಅಪೌಷ್ಠಿಕತೆ ಕಡಿಮೆ ಮಾಡಲು ಪ್ರಾಯೋಗಿಕ ಪರೀಕ್ಷೆಗಾಗಿ ಕೊಪ್ಪಳ ತಾಲೂಕಿನ ಬಹದ್ದೂರು ಬಂಡಿ ಕ್ಲಸ್ಟರ್ ಆಯ್ಕೆ ಮಾಡಲಾಗಿದೆ, ಇಲ್ಲಿ ಒಟ್ಟು 2384 6 ರಿಂದ 14 ವಯಸ್ಸಿನೊಳಗಿನವರಿದ್ದು ಅವರಲ್ಲಿ 184 ಮಕ್ಕಳಲ್ಲಿ ಅಪೌಷ್ಠಿಕತೆ ಇದೆ ಎನ್ನಲಾಗಿದೆ. ಇಂಥ ಮಕ್ಕಳಿಗೆ ಈಗ ಸಾರವರ್ಧಿತ ಅಕ್ಕಿಯನ್ನು ನೀಡಲಾಗಿದೆ.ಈ ಮಧ್ಯೆ ಶಾಲೆಯಲ್ಲಿ ನೀಡಿರುವ ಈ ಅಕ್ಕಿಯನ್ನು ಅಡುಗೆ ಮಾಡಿ ಊಟ ಮಾಡಿದ ಅಪೌಷ್ಠಿಕ ಮಕ್ಕಳ ಕುಟುಂಬದವರು ಈ ಅಕ್ಕಿ ರುಚಿಯಾಗಿದೆ, ಸಾಮಾನ್ಯವಾಗಿ ಬಡತನದಲ್ಲಿರುವವರು ರೇಷನ್ ಅಕ್ಕಿ ಊಟ ಮಾಡುತ್ತಿದ್ದಾರೆ, ಆದರೆ ಇದು ಉತ್ತಮವಾದ ಸೋನಾ ಮಸೂರಿ ಅಕ್ಕಿಯಾಗಿದ್ದು ರುಚಿಯಾಗಿದೆ, ನಮ್ಮ ಮಕ್ಕಳಲ್ಲಿ ಆರೋಗ್ಯ ಸಮಸ್ಯೆ ಬಗೆಹರಿಯಲಿ ಎಂದು ಆಶಿಸಿದ್ದಾರೆ.
ಸಾರವರ್ಧಿತ ಅಕ್ಕಿ ನೀಡಿದ ಕುಟುಂಬಗಳು ಇದೇ ಅಕ್ಕಿ ಬಳಸುತ್ತಾರೊ ಅವರು ಯಾವಯಾವ ಪೌಷ್ಠಿಕ ಆಹಾರ ಸೇವನೆ ಮಾಡುತ್ತಾರೆ ಎಂದು ನಿಗಾವಹಿಸಲು ಕೆಎಚ್ ಪಿಟಿ ಕಾರ್ಯಕರ್ತರು ನಿತ್ಯ ಮನೆ ಮನೆಗೆ ಭೇಟಿ ನೀಡಿ ಪರಶೀಲನೆ ಮಾಡಲಿದ್ದಾರೆ. ಸಾರವರ್ಧಿತ ಅಕ್ಕಿಯಿಂದ ಮಕ್ಕಳಲ್ಲಿ ಅಪೌಷ್ಠಿಕತೆ ಕಡಿಮೆಯಾದರೆ ಈ ಸಾರವರ್ಧಿತ ಅಕ್ಕಿಯನ್ನು ದೇಶದ ಎಲ್ಲಾ ಅಪೌಷ್ಠಿಕ ಮಕ್ಕಳ ಕುಟುಂಬಗಳಿಗೆ ನೀಡುವ ಸಾಧ್ಯತೆ ಇದೆ. ಲಾಕ್ ಡೌನ್ ನಂತಹ ಸಂದರ್ಭದಲ್ಲಿ ಬಡವರಿಗೆ ಸಾರವರ್ಧಿತ ಅಕ್ಕಿ ನೀಡುತ್ತಿರುವುದು ಒಂದು ಕಡೆಯಾದರೆ ಸಾರವರ್ಧಿತ ಅಕ್ಕಿ ಸೇವನೆ ಮಾಡಿದ ಅಪೌಷ್ಠಿಕ ಮಕ್ಕಳು ಉತ್ತಮ ರೋಗ ನಿರೋಧಕ ಶಕ್ತಿ ಬಂದರೆ ಕೊರೊನಾ ಮೂರನೆಯ ಅಲೆ ತಡೆಗೆ ಸಹಕಾರಿಯಾಗಲಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ