ದಪ್ಪದ ಮಹಿಳೆಯರೇನೂ ಕೊರಗುವ ಅಗತ್ಯವಿಲ್ಲ

ಇದು ದಪ್ಪ ಇರುವ ತೂಕದ ಮಹಿಳೆಯರಿಗೆ ಸಂಬಂಧಿಸಿದ ವಿಷಯ. ಎಲ್ಲರೂ ಅಂದುಕೊಂಡಿದ್ದಂತೆ ದಪ್ಪದವರಿಗೆ ಸೆಕ್ಸ್‌ನಲ್ಲಿ ಆಸಕ್ತಿ ಕಡಿಮೆಯೆನ್ನುವುದು ಸುಳ್ಳು ಎಂದು ಇದೀಗ ಸಂಶೋಧನೆಯೊಂದು ರುಜುವಾತುಪಡಿಸಿದೆ. ಅದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿರುವ ಸಂಶೋಧನೆ ದಪ್ಪ ಇರುವವರಿಗೆ ಲೈಂಗಿಕಾಸಕ್ತಿ ಉಳಿದವರಿಗಿಂತ ಹೆಚ್ಚು ಇರುತ್ತದೆ ಎಂದೂ ಹೇಳಿದೆ.

ಇದಕ್ಕಿಂತ ಹಿಂದಿನ ಅಧ್ಯಯನಗಳು ಸ್ಥೂಲಕಾಯರಿಗೆ ಲೈಂಗಿಕಾಸಕ್ತಿ ಕಡಿಮೆ ಎಂದು ತಿಳಿಸಿತ್ತು. ಆದರೆ ಇದನ್ನೀಗ ಅಮೆರಿಕಾದ ಅಧ್ಯಯನಕಾರರು ಸುಳ್ಳು ಮಾಡಿದ್ದಾರೆ. ದೇಹದ ಆಕಾರಕ್ಕೂ ಲೈಂಗಿಕಾಸಕ್ತಿಯ ಕುಂಠಿತಕ್ಕೂ ಯೂವುದೇ ಸಂಬಂಧವಿಲ್ಲ. ಬದಲಾಗಿ ದಪ್ಪಗಿನ ಮಹಿಳೆಗೆ ಸಾಮಾನ್ಯ ಮಹಿಳೆಗಿಂತ ಸೆಕ್ಸ್ ಆಸಕ್ತಿ ಹೆಚ್ಚಿರುತ್ತದೆ ಮತ್ತು ಲೈಂಗಿಕ ಆಸೆಯನ್ನು ದಪ್ಪಗಿನ ದೇಹ ಕುಗ್ಗಿಸುವುದಿಲ್ಲ ಎಂದು ಹೇಳಿದೆ.

2002ರ ಕುಟುಂಬಗಳ ರಾಷ್ಟ್ರೀಯ ಸಮೀಕ್ಷೆ ಸಂದರ್ಭದಲ್ಲಿ ಸುಮಾರು ಏಳು ಸಾವಿರ ಮಹಿಳೆಯರನ್ನು ಪ್ರಶ್ನಿಸಿರುವ ಅಧ್ಯಯನಕಾರರು ಹಲವು ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ. ದೇಹದ ಗಾತ್ರ ಮತ್ತು ಲೈಂಗಿಕ ವಾಂಛೆಗಿರುವ ಸಂಬಂಧ, ಪ್ರಥಮ ಮಿಲನ, ಸಂಗಾತಿಗಳ ಸಂಖ್ಯೆ ಮತ್ತು ಸೆಕ್ಸ್ ಪುನರಾವರ್ತನೆ ಬಗ್ಗೆ ಮಾಹಿತಿಗಳನ್ನು ಕಲೆ ಹಾಕಲಾಗಿದೆ.

"ಸಾಮಾನ್ಯ ತೂಕದ ಮಹಿಳೆಗೂ ಮತ್ತು ದಡೂತಿ ಅಥವಾ ದಪ್ಪವಿರುವ ಮಹಿಳೆಗೂ ಲೈಂಗಿಕವಾಗಿ ಯಾವುದೇ ವ್ಯತ್ಯಾಸಗಳು ಕಂಡು ಬಂದಿಲ್ಲ" ಎಂದು ಅಧ್ಯಯನ ತಂಡದ ಮುಖ್ಯಸ್ಥ, ಹವಾಯಿ ಯೂನಿವರ್ಸಿಟಿಯ ಬ್ಲಿಸ್ ಕನೇಶಿರೊ ತಿಳಿಸಿದ್ದಾರೆ.

ಶೇಕಡಾ 92ರಷ್ಟು ದಪ್ಪಗಿನ ಮಹಿಳೆಯರು ಒಬ್ಬ ಪುರುಷನ ಜತೆ ಜೀವನಪೂರ್ತಿ ಸಂಬಂಧ ಹೊಂದುವುದಾಗಿ ಹೇಳಿದ್ದು, ಶೇಕಡಾ 87ರಷ್ಟು ಸಾಮಾನ್ಯ ತೂಕದ ಮಹಿಳೆಯರು ಇದಕ್ಕೆ ವಿರುದ್ಧವಾದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಅಧ್ಯಯನ ವರದಿ ಹೇಳುತ್ತದೆ.

"ಈ ಫಲಿತಾಂಶಗಳು ಅನಿರೀಕ್ಷಿತ ಹಾಗೂ ಹೀಗೆ ಯಾಕೆ ಎಂದು ನಮಗೂ ಸ್ಪಷ್ಟವಾಗಿ ಹೇಳಲಾಗದು. ಈ ಅಧ್ಯಯನದ ಪ್ರಕಾರ ಪ್ರತಿ ಮಹಿಳೆಯ‌ೂ ಬೇಡದ ಗರ್ಭದ ಬಗ್ಗೆ ಹೆಚ್ಚಿನ ಎಚ್ಚರಿಕೆವಹಿಸುತ್ತಾಳೆ ಎಂದೂ ತಿಳಿದುಬಂದಿದೆ" ಎಂದು ಕನೇಶಿರೊ ಹೇಳಿದ್ದಾರೆ.

ಈ ಅಧ್ಯಯನದ ವರದಿಯು ಸೆಪ್ಟೆಂಬರ್ ತಿಂಗಳ 'ಒಬ್ಸ್‌ಟೆಟ್ರಿಕ್ಸ್ & ಗೈನೆಕಾಲಜಿ' ಪತ್ರಿಕೆಯಲ್ಲಿ ಪ್ರಕಟವಾಗಿದೆ.

ವೆಬ್ದುನಿಯಾವನ್ನು ಓದಿ