ರುಚಿಯಾಗಿ ದಾಲ್ ಫ್ರೈ ಮಾಡಿ ಸವಿಯಿರಿ..!

ನಾಗಶ್ರೀ ಭಟ್

ಗುರುವಾರ, 25 ಜನವರಿ 2018 (16:15 IST)
ದಾಲ್ ಫ್ರೈ ಭಾರತದ ಪ್ರಸಿದ್ಧ ಪಾಕವಿಧಾನಗಳಲ್ಲಿ ಒಂದಾಗಿದೆ. ಊಟದಲ್ಲಿ ಅನ್ನದ ಜೊತೆ ಪ್ರಮುಖ ಪದಾರ್ಥವಾಗಿ ಹೆಚ್ಚಿನ ಜನರು ಇದನ್ನು ಮಾಡುತ್ತಾರೆ. ದಾಲ್ ಫ್ರೈ ಅನ್ನು ತೊಗರಿಬೇಳೆ ಮತ್ತು ಹೆಸರು ಬೇಳೆ ಎರಡರಿಂದಲೂ ಮಾಡಬಹುದಾಗಿದ್ದು ಹೆಚ್ಚಿನ ಜನರು ತೊಗರಿ ಬೇಳೆಯನ್ನು ಬಳಸುತ್ತಾರೆ ಮತ್ತು ತುಂಬಾ ಸರಳವಾಗಿ ನೀವು ಇದನ್ನು ಮಾಡಿಕೊಳ್ಳಬಹುದು. ಹೋಟೆಲ್‌ಗಳಲ್ಲಿ ಮಾಡುವಂತೆ ದಾಲ್ ಫ್ರೈ ಮಾಡುವುದು ಹೇಗೆ ಎಂದು ತಿಳಿದುಕೊಳ್ಳಲು ಈ ಲೇಖನವನ್ನು ಓದಿ.
ಬೇಕಾಗುವ ಸಾಮಗ್ರಿಗಳು:
 
ತೊಗರಿ ಬೇಳೆ - 1/2 ಕಪ್
ಈರುಳ್ಳಿ - 2
ಟೊಮೆಟೋ - 2
ಶುಂಠಿ - 1 ಇಂಚು
ಬೆಳ್ಳುಳ್ಳಿ - 4-5 ಎಸಳು
ಕೊತ್ತಂಬರಿ ಸೊಪ್ಪು - ಸ್ವಲ್ಪ
ತುಪ್ಪ ಅಥವಾ ಎಣ್ಣೆ - 6-7 ಚಮಚ
ಅರಿಶಿಣ - 2 ಚಮಚ
ದನಿಯಾ ಪುಡಿ - 1/2 ಚಮಚ
ಜೀರಿಗೆ ಪುಡಿ - 1/2 ಚಮಚ
ಗರಂ ಮಸಾಲಾ - 1/2 ಚಮಚ
ಅಚ್ಚಖಾರದ ಪುಡಿ - 1 ಚಮಚ
ಸಾಸಿವೆ - 1 ಚಮಚ
ಜೀರಿಗೆ - 1 ಚಮಚ
ಇಂಗು - 1/4 ಚಮಚ
ಕರಿಬೇವು - ಸ್ವಲ್ಪ
ಒಣಮೆಣಸು - 2
ಉಪ್ಪು - ರುಚಿಗೆ
 
ಮಾಡುವ ವಿಧಾನ:
 
ತೊಗರಿಬೇಳೆಯನ್ನು ಚೆನ್ನಾಗಿ ತೊಳೆದು 2 ಕಪ್ ನೀರು, 1 ಚಮಚ ಅರಿಶಿಣ ಮತ್ತು 1 ಚಮಚ ಎಣ್ಣೆಯನ್ನು ಸೇರಿಸಿ ಕುಕ್ಕರ್‌ನಲ್ಲಿ 3 ವಿಸಿಲ್ ಹಾಕಿಸಿ. ನಂತರ ಬೇಳೆಯನ್ನು ಬೌಲ್‌ಗೆ ವರ್ಗಾಯಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಶುಂಠಿ, ಬೆಳ್ಳುಳ್ಳಿ, ಈರುಳ್ಳಿ, ಟೊಮೆಟೋ ಮತ್ತು ಕೊತ್ತಂಬರಿ ಸೊಪ್ಪನ್ನು ಚಿಕ್ಕದಾಗಿ ಹೆಚ್ಚಿಟ್ಟುಕೊಳ್ಳಿ.
 
ಒಂದು ಪ್ಯಾನ್ ತೆಗೆದುಕೊಂಡು ಅದರಲ್ಲಿ 4-5 ಚಮಚ ಎಣ್ಣೆಯನ್ನು ಹಾಕಿ ಅದು ಬಿಸಿಯಾದಾಗ ಬೆಳ್ಳುಳ್ಳಿ, ಶುಂಠಿ ಮತ್ತು ಈರುಳ್ಳಿಯನ್ನು ಹಾಕಿ 1 ನಿಮಿಷ ಹುರಿಯಿರಿ. ನಂತರ ಅದಕ್ಕೆ ಟೊಮೆಟೋ ಮತ್ತು 1/2 ಚಮಚ ಉಪ್ಪನ್ನು ಸೇರಿಸಿ ಮಿಕ್ಸ್ ಮಾಡಿ ಟೊಮೆಟೋ ಬೆಂದು ಮೆದುವಾಗುವ ವರೆಗೂ ಸಣ್ಣ ಉರಿಯಲ್ಲಿ ಹುರಿಯುತ್ತಿರಿ. ಇದಕ್ಕೆ 1 ಚಮಚ ಅರಿಶಿಣ, ದನಿಯಾ ಪುಡಿ, ಜೀರಿಗೆ ಪುಡಿ, ಗರಂ ಮಸಾಲಾ ಪುಡಿ ಮತ್ತು ಅಚ್ಚಖಾರದ ಪುಡಿಯನ್ನು ಸೇರಿಸಿ 1 ನಿಮಿಷ ಹುರಿಯಿರಿ. ಈಗ ಇದಕ್ಕೆ ಮೊದಲೇ ಬೇಯಿಸಿಟ್ಟ ಬೇಳೆ ಮತ್ತು ಕೊತ್ತಂಬರಿಸೊಪ್ಪು ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಮಿಕ್ಸ್ ಮಾಡಿ 5-6 ನಿಮಿಷ ಚೆನ್ನಾಗಿ ಕುದಿಸಿ.
 
ಒಗ್ಗರಣೆ ಹುಟ್ಟಿನಲ್ಲಿ 2-3 ಚಮಚ ಎಣ್ಣೆಯನ್ನು ತೆಗೆದುಕೊಂಡು ಅದು ಬಿಸಿಯಾದಾಗ ಸಾಸಿವೆ, ಜೀರಿಗೆ, ಕರಿಬೇವು, ಇಂಗು, ಮೆಣಸು ಮತ್ತು 1/2 ಚಮಚ ಅಚ್ಚಖಾರದ ಪುಡಿಯನ್ನು ಸೇರಿಸಿ ಒಗ್ಗರಣೆಯನ್ನು ಮಾಡಿ ದಾಲ್‌ಗೆ ಹಾಕಿದರೆ ದಾಲ್ ಫ್ರೈ ರೆಡಿ. ರುಚಿಯಾದ ದಾಲ್ ಫ್ರೈ ಅನ್ನು ನೀವೂ ಒಮ್ಮೆ ಮಾಡಿ ಸವಿಯಿರಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ