'ಬೆಳ್ಳುಳ್ಳಿ' ಹಲವು ಖಾಯಿಗಳಿಗೆ ರಾಮಬಾಣ...

ಶನಿವಾರ, 10 ಮಾರ್ಚ್ 2012 (11:30 IST)
PR
ಅಧಿಕ ರಕ್ತದೊತ್ತಡ, ಹೃದ್ರೋಗ, ಕ್ಷಯ ಮತ್ತು ಕ್ಯಾನ್ಸರ್ ನಂತಹ ಗಂಭೀರ ಕಾಯಿಲೆಗಳಿಗಾಗಿ ತಯಾರಿಸುವ ಔಷಧಗಳಿಗೆ ಬೆಳ್ಳುಳ್ಳಿ ಬೇಕೇ ಬೇಕು. ಆಯುರ್ವೇದ ವೈದ್ಯಕೀಯ ಪದ್ಧತಿಯಲ್ಲಿ ಬಹು ಬೇಡಿಕೆಯುಳ್ಳದ್ದಾಗಿದೆ.

'ಅಲ್ಲಿಯಂ ಸಟೈವಮ್ ಎಲ್ ' ಎನ್ನುವಂತಹ ಶಾಸ್ತ್ರೀಯ ಹೆಸರನ್ನು ಬೆಳ್ಳುಳ್ಳಿ ಪಡೆದಿದೆ. ಜಗತ್ತಿನಲ್ಲಿ ಚೀನಾದವರು ಅತಿ ಹೆಚ್ಚು ಬೆಳ್ಳುಳ್ಳಿಯನ್ನು ಬೆಳೆಯುತ್ತಾರೆ. ನಮ್ಮ ದೇಶದ ಉತ್ಪಾದನೆ ಮತ್ತು ಬೆಳೆಯುವ ಪ್ರದೇಶವನ್ನು ಗಮನಿಸಿದಾಗ ಮಧ್ಯ ಪ್ರದೇಶ ಪ್ರಥಮ ಸ್ಥಾನದಲ್ಲಿದೆ. ಶೇ. 35 ರಷ್ಟು ವಿಸ್ತೀರ್ಣದಲ್ಲಿ ಬೆಳ್ಳುಳ್ಳಿ ಬೆಳೆಯುತ್ತಾರೆ. ಗುಜರಾತ್, ಉತ್ತರ ಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಕೇರಳ, ಮತ್ತು ಕರ್ನಾಟಕ ಸಹ ಬೆಳ್ಳುಳ್ಳಿಯನ್ನು ಬೆಳೆಯುವ ರಾಜ್ಯಗಳಾಗಿವೆ.

ಬೆಳ್ಳುಳ್ಳಿಯಲ್ಲಿ ಪ್ರೋಟೀನ್, ವಿಟಮಿನ್ ಎ.ಬಿ ಸಿ ಸೇರಿದಂತೆ ಹಲವು ಪೌಷ್ಟಿಕಾಂಶಗಳಿವೆ. ಮನೆ ಮದ್ದಿನಲ್ಲಿ ಬೆಳ್ಳುಳ್ಳಿಯ ಪಾತ್ರ ಹಿರಿದು. ಹಾಲಿನಲ್ಲಿ ಬೆಳ್ಳುಳ್ಳಿ ಹಾಕಿ ಕುದಿಸಿ ಬಾಣಂತಿಯರಿಗೆ ಕೊಟ್ಟರೆ ಮೊಲೆ ಹಾಲು ಹೆಚ್ಚಾಗುವುದು. ಬೆಳ್ಳುಳ್ಳಿ ಹಾಕಿ ಕುದಿಸಿದ ಎಣ್ಣೆ ಹಚ್ಚುವುದರಿಂದ ಸಾಧಾರಣವಾಗಿ ಬರುವ ಕಾಲು ನೋವು ಕಡಿಮೆಯಾಗುತ್ತದೆ. ರೋಗನಿರೋಧಕವಾಗಿ ಬೆಳ್ಳುಳ್ಳಿ ಉಪಯುಕ್ತ. ಕೊಲೆಸ್ಟ್ರಾಲ್ ಜಾಸ್ತಿಯಾಗಿದ್ದಾಗ ಬೆಳ್ಳುಳ್ಳಿಯುಕ್ತ ಮಾತ್ರೆಗಳ ಸೇವನೆ ಹಿತಕರ.

ಅಸಿಡಿಟಿ ಗ್ಯಾಸ್ಟ್ರಿಕ್ ತೊಂದರೆಗಳಿಗೆ ಒಳ್ಳೆಯದು. ವಾತ ಸಂಬಂಧಿ ಕೀಲುನೋವು, ವಯಸ್ಸಾದಾಗ ಬರುವ ಸಂಧಿವಾತಗಳಿಗೂ ಬೆಳ್ಳುಳ್ಳಿ ಸೇವನೆ ಹಿತಕರ. ಚಳಿಗಾಲದಲ್ಲಿ ಕಾಲು ಸೇದುವುದು ಸಾಮಾನ್ಯವಾದ ವಿಚಾರವಾಗಿದೆ. ಎರಡು ಹಿಲುಕು ಬೆಳ್ಳುಳ್ಳಿ ಒಂದು ಬಾರಿ ಜಜ್ಜಿ ಹೆಬ್ಬೆರೆಳಿನ ತಳಭಾಗದಲ್ಲಿಟ್ಟು ಒಂದು ಬಟ್ಟೆ ಕಟ್ಟಿದರೆ ಕಾಲು ಸೇದುವುದು ಕಡಿಮೆಯಾಗುತ್ತದೆ.

ಭಾರತವಲ್ಲದೆ ಜಗತ್ತಿನ ರಾಷ್ಟ್ರಗಳಲ್ಲೂ ಬೆಳ್ಳುಳ್ಳಿಯ ಬಳಕೆಯಿದೆ. ಆದರೆ ಇದರಲ್ಲಿರುವ ವಾಸನೆಯಿಂದಾಗಿ ಕೆಲವರು ಬಳಸಲು ಹಿಂದೆಮುಂದೆ ಮಾಡುತ್ತಾರೆ. ಬೆಳ್ಳುಳ್ಳಿಯ ವಾಸನೆಯನ್ನು ಪ್ರತ್ಯೇಕಿಸಿ ಕ್ಯಾಪ್ಸ್ಯ್ಸೂಲ್ ಆಗಿ ಪರಿವರ್ತಿಸಿ ಆರೋಗ್ಯವರ್ಧಕ ಆಹಾರವಾಗಿ ಉಪಯೋಗಿಸುವಂತೆ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ