ಹೃದಯಾಘಾತಕ್ಕೂ ಮುನ್ನ ದೇಹ ನೀಡುವ ಈ ನಾಲ್ಕು ಎಚ್ಚರಿಕೆ ಕಡೆಗಣಿಸದಿರಿ

ಗುರುವಾರ, 16 ಸೆಪ್ಟಂಬರ್ 2021 (15:07 IST)
ಹೃದಯಾಘಾತ ಎಂಬ ಅಪಾಯಕಾರಿ ಪ್ರಕ್ರಿಯೆಯು ಇಂದು ವಿಶ್ವಾದ್ಯಂತ ಹಲವರನ್ನು ಬಲಿ ತೆಗೆದುಕೊಳ್ಳುತ್ತಿದೆ. ರಕ್ತವನ್ನು ದೇಹದ ಪೂರ್ತಿ ಪಂಪ್ ಮಾಡುವ ಹೃದಯದ ರಕ್ತನಾಳಗಳು ಬ್ಲಾಕ್ ಆಗಿ, ಹೃದಯದ ಬಡಿತಕ್ಕೆ ಉಂಟಾಗುವ ಸಣ್ಣ ಕಷ್ಟದಿಂದ ಪ್ರಾಣಪಕ್ಷಿಯೇ ಹಾರಿಹೋಗುತ್ತಿದೆ.

ಈಗೀಗ ಹೃದಯಾಘಾತ ಆಗಿದ್ದು ಗೊತ್ತಾಗುವುದೇ ವಾರ ಅಥವಾ ತಿಂಗಳುಗಳಾದ ಮೇಲೆ! ಹೌದು, ಸೈಲೆಂಟ್ ಮಯೊಕಾರ್ಡಿಯಲ್ ಇನ್ಫಾಕ್ಷರ್ನಸ್ (ಎಸ್ಎಂಐ ) ಹೆಚ್ಚಿನ ಜನರಲ್ಲಿ ಆಗುತ್ತಿದೆ. ಯುವಕರನ್ನು ಕೂಡ ಸದ್ದಿಲ್ಲದೆ ಸಾವು ಕಾಡುತ್ತಿದೆ. ಹಾಗಾಗಿ, ಎಚ್ಚರ ತಪ್ಪಬೇಡಿರಿ..
ಇದಕ್ಕೆ ಪ್ರಮುಖ ಕಾರಣ ಒತ್ತಡ, ಅನಾರೋಗ್ಯಕ್ಕೆ ಆಹ್ವಾನ ನೀಡುವ ಜೀವನ ಶೈಲಿ, ವಿಪರೀತವಾಗಿ ಎಣ್ಣೆಯಲ್ಲಿ ಕರಿದ ಪದಾರ್ಥಗಳ ಸೇವನೆ, ದೈಹಿಕ ವ್ಯಾಯಾಮ ಕೊರತೆಗಳು. ಹಾಗಿದ್ದೂ, ತಜ್ಞವೈದ್ಯರ ಪ್ರಕಾರ ದೇಹವು ಹೃದಯಾಘಾತ ಸಂಭವಿಸುವ ಒಂದು ವಾರದ ಮುನ್ನ ನಾಲ್ಕು ಎಚ್ಚರಿಕೆ ಗಂಟೆಗಳನ್ನು ಕೊಡುತ್ತದಂತೆ. ಅವುಗಳನ್ನು ನಾವು ಬಹಳ ಗಮನವಿಟ್ಟು ಅರಿತುಕೊಳ್ಳಬೇಕಿದೆ.
1. ಸುಸ್ತು
ಏನೂ ಕೆಲಸ ಮಾಡದೆಯೂ ಸುಮ್ಮನೇ ಸುಸ್ತು ಎನಿಸುವುದು. ಚೆನ್ನಾಗಿ ನಿದ್ರೆ ಮಾಡಿದ್ದರೂ, ಹೆಚ್ಚಿಗೆ ದಣಿಯುವ ಒತ್ತಡದ ಕೆಲಸಗಳನ್ನು ಮಾಡಿಲ್ಲವಾದರೂ ಸುಸ್ತು ಪದೇ ಪದೆ ಬಾಧಿಸುವುದು ಒಂದು ಎಚ್ಚರಿಕೆಯ ಗಂಟೆ.
2. ನಿದ್ರೆ ಸರಾಗವಾಗಿ ಆಗದೇ ಎಚ್ಚರಗೊಳ್ಳುವುದು
ಬಹಳ ಆರಾಮಾಗಿ ರಾತ್ರಿ ವೇಳೆ 4-5 ಗಂಟೆಗಳ ನಿದ್ರೆ ಬರುತ್ತಿದ್ದವರಿಗೆ, ಏಕಾಏಕಿ ಮಧ್ಯದಲ್ಲಿ ಹಲವು ಬಾರಿ ಎಚ್ಚರವಾಗುವುದು. ಕ್ರಮೇಣ ನಿದ್ರಾಹೀನತೆ ಉಂಟಾಗುವುದು.
ಇದು ನಿಮ್ಮ ಉಸಿರಾಟದ ನಾಳಗಳಿಗೆ ಅಡ್ಡಿಯಾಗುತ್ತಿರುವ ಸೂಚನೆ ಇರಬಹುದು. ಸ್ಥೂಲಕಾಯ, ವಿಪರೀತ ಬೊಜ್ಜಿನಿಂದಲೂ ಇದು ಆಗುತ್ತಿರಬಹುದು. ನಿದ್ರೆ ಇಲ್ಲದವರ ಮನಸ್ಸು ಮತ್ತು ದೇಹದ ಮೇಲೆ ಸ್ವಾಭಾವಿಕವಾಗಿ ಒತ್ತಡ ಹೆಚ್ಚಲಿದೆ. ಇದು ಎರಡನೇ ಎಚ್ಚರಿಕೆ ಗಂಟೆ.
3. ಅತಿಯಾದ ಮಾನಸಿಕ ಒತ್ತಡ, ಉದ್ವೇಗ
ಕೆಲವು ವಿಚಾರಗಳನ್ನು ಅತಿ ಎನಿಸುವಷ್ಟು ಮನಸ್ಸಿಗೆ ತೆಗೆದುಕೊಳ್ಳುವುದು, ಖಿನ್ನತೆಯಲ್ಲಿ ಮುಳುಗಿಕೊಂಡು ಮನಸ್ಸಿನ ಮೇಲೆ ಬಂಡೆಕಲ್ಲು ಇರುವಂತೆ ಒತ್ತಡ ನಿರ್ಮಾಣ ಮಾಡಿಕೊಳ್ಳುವುದು ಹೃದಯಕ್ಕೆ ಒಳ್ಳೆಯದಲ್ಲ.
ಹಾಗಾಗುತ್ತಿದ್ದಲ್ಲಿ ಆಪ್ತರ ಬಳಿ ಹೇಳಿಕೊಂಡು ಮನಸ್ಸು ನಿರಾಳ ಮಾಡಿಕೊಳ್ಳಬೇಕು. ಪ್ರತಿಕ್ರಿಯೆ ಭಾವನೆಗಳು ಕೂಡ ತೀರ ಉದ್ವೇಗದಿಂದ ಕೂಡಿರದೆಯೇ, ಮಿತವಾಗಿದ್ದರೆ ದೇಹವು ಸುಧಾರಿಸಿಕೊಳ್ಳಲು ಸಹಾಯಕವಾಗುತ್ತದೆ.
4. ತೋಳಿನಲ್ಲಿ ಶಕ್ತಿ ಇಲ್ಲದಂತಾಗುವುದು
ತೋಳುಗಳು ಎದೆ ಭಾಗಕ್ಕೆ ನರಗಳು, ಮಾಂಸಖಂಡಗಳ ಮೂಲಕ ಸಂಪರ್ಕಿಸಲಾಗಿರುವ ಕಾರಣ, ಏಕಾಏಕಿ ತೋಳುಗಳ ಶಕ್ತಿ ಕುಂಠಿತವಾದಂತೆ ಅನಿಸಿದಲ್ಲಿ ಸ್ವಲ್ಪ ಜಾಗರೂಕರಾಗಿ ವಿಶ್ರಮಿಸಿರಿ. ಹೃದಯದ ಬಡಿತ ಸಾಧಾರಣ ಆಗುವ ತನಕ ಕುಳಿತುಕೊಳ್ಳಿರಿ ಅಥವಾ ಮಲಗಿ ವಿಶ್ರಾಂತಿ ಪಡೆಯಿರಿ. ಇದು ಮುಂದಿನ ಅನಾಹುತವನ್ನು ತಡೆಯಲು ಸಹಕಾರಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ