ಮಕ್ಕಳಲ್ಲಿ ಈ ಲಕ್ಷಣಗಳು ಕಾಣಿಸಿಕೊಂಡರೆ ನಿರ್ಲಕ್ಷಿಸಬೇಡಿ!

ಗುರುವಾರ, 18 ನವೆಂಬರ್ 2021 (07:48 IST)
ಭಾರತದ ಯುವಪೀಳಿಗೆಯಲ್ಲಿ ಇತ್ತೀಚೆಗೆ ಡಯಾಬಿಟಿಸ್ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. 45ರಿಂದ 50 ವರ್ಷ ದಾಟಿದವರಲ್ಲಿ ಜಾಸ್ತಿಯಾಗಿ ಕಾಣಿಸಿಕೊಳ್ಳುತ್ತಿದ್ದ ಸಕ್ಕರೆ ಕಾಯಿಲೆ ಈಗ ಮಕ್ಕಳಲ್ಲಿ ಕೂಡ ಕಾಣಿಸಿಕೊಳ್ಳತೊಡಗಿದೆ.
ಎಳೆ ವಯಸ್ಸಿನಲ್ಲೇ ಮಕ್ಕಳಲ್ಲಿ ಡಯಾಬಿಟಿಸ್ ಅಥವಾ ಮಧುಮೇಹ ಕಾಣಿಸಿಕೊಳ್ಳಲು ಕಾರಣವೇನು? ಎಂಬ ಬಗ್ಗೆ ಇಲ್ಲಿದೆ ಮಾಹಿತಿ. ಪುಣೆಯ 700ಕ್ಕೂ ಹೆಚ್ಚು ಕುಟುಂಬಗಳನ್ನು ಅಧ್ಯಯನಕ್ಕೆ ಒಳಪಡಿಸಿದ ಸಂಶೋಧನಾ ತಂಡವೊಂದು ಆ ಕುಟುಂಬಗಳ ಅನೇಕ ವ್ಯಕ್ತಿಗಳಲ್ಲಿ ಬಾಲ್ಯದಲ್ಲಿಯೇ ಹೆಚ್ಚಿನ ಗ್ಲೂಕೋಸ್ನ ಮಟ್ಟವನ್ನು ಪತ್ತೆಹಚ್ಚಿದೆ.
ಪುಣೆಯ ಕೆಇಎಂ ಆಸ್ಪತ್ರೆಯ ಮಧುಮೇಹ ಘಟಕದಲ್ಲಿ ಸಂಶೋಧಕರು ಕಳೆದ 35 ವರ್ಷಗಳಿಂದ ಭಾರತೀಯರಲ್ಲಿ ಮಧುಮೇಹ ಏಕೆ ಸಾಮಾನ್ಯವಾಗಿದೆ ಎಂಬುದರ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾರೆ.
ಸಂಶೋಧಕರು 6, 12 ಮತ್ತು 18ನೇ ವಯಸ್ಸಿನಲ್ಲಿ ಗ್ಲೂಕೋಸ್ ಮತ್ತು ಇನ್ಸುಲಿನ್ ಸಾಂದ್ರತೆಗಳು ಮತ್ತು ಇತರ ಪ್ರಮುಖ ಡೇಟಾವನ್ನು ಅಳೆಯುತ್ತಾರೆ. 18 ವರ್ಷಗಳಲ್ಲಿ, 37 ಪ್ರತಿಶತ ಪುರುಷರು ಮತ್ತು 18 ಪ್ರತಿಶತ ಮಹಿಳೆಯರಲ್ಲಿ ಗ್ಲೂಕೋಸ್ ಮಟ್ಟ (ಪ್ರಿಡಿಯಾಬಿಟಿಸ್) ಹೆಚ್ಚಾಗಿದೆ. ಗರ್ಭಾಶಯದಲ್ಲಿ ಉತ್ತಮ ಬೆಳವಣಿಗೆಯನ್ನು ಹೊಂದಿರುವ ಮಕ್ಕಳು ಕೂಡ ಬಾಲ್ಯದಿಂದಲೂ ಮಧುಮೇಹದ ಅಪಾಯಕಾರಿ ಅಂಶಗಳನ್ನು ಹೊಂದಿರುತ್ತಾರೆ ಎಂದು ಸಂಶೋಧನೆ ತಿಳಿಸಿದೆ. 6 ಮತ್ತು 12 ನೇ ವಯಸ್ಸಿನಲ್ಲಿ ಅಳೆಯುವಾಗಲೂ ಹೆಚ್ಚಿನ ಗ್ಲೂಕೋಸ್ನ ಪ್ರವೃತ್ತಿಯು ಗೋಚರಿಸಿದೆ. ಇದು ಕಳಪೆಯಾಗಿ ಕಾರ್ಯ ನಿರ್ವಹಿಸುವ ಮೇದೋಜೀರಕ ಗ್ರಂಥಿಯ ಪರಿಣಾಮವಾಗಿದೆ ಎಂದು ಸಂಶೋಧಕರು ತೀರ್ಮಾನಿಸಿದ್ದಾರೆ.
ಇಂದಿನ ಕಾಲದ ಮಕ್ಕಳು ಕೂಡ ಫಾಸ್ಟ್ ಫುಡ್‪ಗೆ ಮೊರೆ ಹೋಗಿ ದೈಹಿಕ ಚಟುವಟಿಕೆಗಳು ಇಲ್ಲದೆ ಇರುವ ಕಾರಣದಿಂದ ಮಕ್ಕಳಲ್ಲಿ ಬೊಜ್ಜು ಹೆಚ್ಚಾಗುತ್ತಿದೆ. ಇದು ಮಧುಮೇಹಕ್ಕೆ ಪ್ರಮುಖ ಕಾರಣವೆನ್ನಬಹುದು. ನಿಶ್ಯಕ್ತಿ, ತೂಕ ಇಳಿಯುವುದು, ದಾಹ ಹೆಚ್ಚಾಗುವುದು, ಪದೇ ಪದೇ ಮೂತ್ರ ವಿಸರ್ಜನೆ, ಹೊಟ್ಟೆ ನೋವು, ದೃಷ್ಟಿ ಮಂದವಾಗುವುದು, ಗಾಯಗಳು ನಿಧಾನವಾಗಿ ಒಣಗುವುದು, ಅಸಾಮಾನ್ಯ ತೂಕ ಹೆಚ್ಚಳ, ಸಿಡುಕುತನ, ನಡವಳಿಕೆಗಳಲ್ಲಿ ಬದಲಾವಣೆಯಾಗುವುದು ಮಕ್ಕಳಲ್ಲಿ ಡಯಾಬಿಟಿಸ್ ಇದೆ ಎಂಬುದರ ಸೂಚನೆ. ಈ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರ ಬಳಿ ಕರೆದುಕೊಂಡು ಹೋಗಿ.
ಭಾರತದಲ್ಲಿ ಕೂಡ ಟೈಪ್ 2 ಮಧುಮೇಹಕ್ಕೆ ತುತ್ತಾಗುತ್ತಿರುವ ಮಕ್ಕಳ ಸಂಖ್ಯೆಯು ಹೆಚ್ಚಾಗುತ್ತಿದೆ. ಇದರಿಂದಲೇ ಭಾರತವನ್ನು ವಿಶ್ವದಲ್ಲಿ ಮಧುಮೇಹದ ರಾಜಧಾನಿ ಎಂದು ಕರೆಯಲಾಗುತ್ತಿದೆ. ಮಕ್ಕಳಲ್ಲಿ ಕಾಣಿಸಿಕೊಳ್ಳುವ ಮಧುಮೇಹದಿಂದಾಗಿ ದೊಡ್ಡ ಮತ್ತು ಸಣ್ಣ ರಕ್ತನಾಳ, ಮೆದುಳು, ಹೃದಯ, ಕಿಡ್ನಿ, ಕಣ್ಣು, ಪಾದ ಮತ್ತು ನರಗಳಿಗೆ ಹಾನಿ ಆಗುತ್ತದೆ. ಭಾರತದಲ್ಲಿ ಸುಮಾರು 1.4 4 ಕೋಟಿ ಮಕ್ಕಳಲ್ಲಿ ಬೊಜ್ಜು ತುಂಬಿದೆ ಎಂದು ಅಧ್ಯಯನವೊಂದು ತಿಳಿಸಿದೆ. ಭಾರತವು ಬೊಜ್ಜು ಹೊಂದಿರುವ ಮಕ್ಕಳಲ್ಲಿ ಎರಡನೇ ಸ್ಥಾನದಲ್ಲಿದೆ. ಬೊಜ್ಜು ಇನ್ಸುಲಿನ್ ಪ್ರತಿರೋಧತೆಯನ್ನು ಉಂಟುಮಾಡುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ