ಖರೀದಿಗೆ ಹೋದಾಗ ಅಥವಾ ಮಾಲ್ ಗೆ ಶಾಪಿಂಗ್ ಗೆ ಹೋದಾಗ ಖಾಲಿ ಹೊಟ್ಟೆ ಇಟ್ಟುಕೊಂಡು ಎಂದೂ ಹೋಗಬೇಡಿ. ಇದು ನೋಡಿದ್ದನ್ನೆಲ್ಲವನ್ನೂ ತೆಗೆದುಕೊಳ್ಳುವ ಹಾಗೂ ಅಲ್ಲೇ ಸೇವಿಸುವ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ. ಇದರ ಬದಲಿಗೆ ಹೊಟ್ಟೆ ತುಂಬಿರುವಾಗ ಹೋದರೆ ಹೆಚ್ಚೇನು ತಿಂಡಿಗಳು ಬೇಕೆನಿಸುವುದಿಲ್ಲ. ಜೊತೆಗೆ ಅಗತ್ಯ ಸಾಮಗ್ರಿಗಳ ಪಟ್ಟಿ ಕೂಡ ಜೊತೆಗಿರಲಿ ಇದು ನಿಮ್ಮ ಖರೀದಿಯ ಮೇಲೆ ಮಿತಿಯನ್ನು ಸಾಧಿಸುತ್ತದೆ.
ತೂಕ ಕಡಿಮೆ ಮಾಡಬೇಕು ಎಂದು ಅನ್ನಿಸಿದ ದಿನದಿಂದ ನಾಲ್ಕು ದಿನಗಳ ವರೆಗೆ ಇರುವ ಉತ್ಸಾಹ ಮತ್ತೆ ಇರುವುದಿಲ್ಲ. ಇದಕ್ಕೆ ಕಾರಣ ಅದೇ ವ್ಯಾಯಾಮಗಳನ್ನು ಮಾಡಿ ಬೇಸರ ಬಂದಿರುತ್ತದೆ. ಇದಕ್ಕಾಗಿ ಕೆಲವು ಸರಳ ಮಾರ್ಗಗಳನ್ನು ಬಳಸಿ ಉದಾಹರಣೆಗೆ ನಿಮಗೆ ವಾಕಿಂಗ್ ಇಷ್ಟ ಎಂದಾದರೆ ಪ್ರತಿದಿನ ಒಂದೇ ದಾರಿಯಲ್ಲಿ ನಡೆಯಬೇಡಿ. ವಾಕಿಂಗ್ ಗೆ ಹೋಗುವ ಸ್ಥಳಗಳನ್ನು ಬದಲಾಯಿಸಿ. ವ್ಯಾಯಾಮ ಮಾಡುವಾಗಿನ ಸ್ಥಳಗಳನ್ನೂ ಹೀಗೇ ಬದಲಾಯಿಸಿ ಅಥವಾ ಹೊಸ ಮ್ಯಾಟ್ ಅಥವಾ ಬಟ್ಟೆಗಳನ್ನು ತಂದು ಉತ್ಸಾಹ ಹೆಚ್ಚಿಸಿಕೊಳ್ಳಲು ಪ್ರಯತ್ನಿಸಿ.
ಅಸಮರ್ಪಕ ನಿದ್ದೆ ಹೆಚ್ಚು ಆಹಾರ ಸೇವಿಸುವಂತೆ ಮಾಡುತ್ತದೆ ಎಂದು ಸಂಶೋಧನೆಗಳು ಸಾಬೀತು ಮಾಡಿವೆ. ಹೆಚ್ಚಿನ ಆಹಾರ ಸೇವನೆಯಿಂದ ಏನಾಗುತ್ತದೆ ಎನ್ನುವುದು ನಿಮಗೆ ಗೊತ್ತೇ ಇದೆ. ಹಾಗಾಗಿ ನಿದ್ದೆಯನ್ನು ಸರಿಯಾಗಿ ಮಾಡಿ. ನಿದ್ದೆಯ ಅವಧಿಯನ್ನು ನಿಗದಿ ಪಡಿಸಿ ಅದೇ ಅವಧಿಯಲ್ಲಿ ಮಲಗುವಂತೆ ನೋಡಿಕೊಳ್ಳಿ. ಇದು ನಿಮ್ಮ ಉತ್ಸಾಹದ ಮೇಲೂ ಪ್ರಭಾವ ಬೀರುತ್ತದೆ. ಹೆಚ್ಚು ಉತ್ಸಾಹಿತರಾಗಿದ್ದಲ್ಲಿ ಹೆಚ್ಚು ಕೆಲಸ ಇದೂ ತೂಕ ಕಡಿಮೆ ಮಾಡುವ ಮಾರ್ಗವಾಗಿದೆ.