ಕಡಲೆಯಿಂದ ತಯಾರಿಸಲಾಗುವ ಕಡಲೆ ಹಿಟ್ಟು ಸೌಂದರ್ಯಕ್ಕೆ ಹಲವಾರು ರೀತಿಯಲ್ಲಿ ಉಪಯುಕ್ತವಾಗಿದೆ. ಕಡಲೆ ಹಿಟ್ಟಿನಿಂದ ಮುಖದ ಆರೈಕೆ ಮಾಡುವುದು ಹಿಂದಿನ ಕಾಲದಿಂದಲೂ ಬಳಕೆಯಲ್ಲಿರುವ ವಿಷಯವಾಗಿದೆ. ಇದು ವಯಸ್ಸಾಗದಂತೆ ಕಾಣಲು ಸಹಾಯ ಮಾಡುತ್ತದೆ, ಟ್ಯಾನಿಂಗ್ ತೆಗೆಯುತ್ತದೆ ಮತ್ತು ಚರ್ಮಕ್ಕೆ ಹೊಳಪನ್ನು ನೀಡುತ್ತದೆ.
ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಬೆಲೆಯ ಕೆಮಿಕಲ್ ಯುಕ್ತ ಫೇಸ್‌ಪ್ಯಾಕ್ ಬಳಸಿ, ತ್ವಚೆಯನ್ನು ಹಾನಿ ಮಾಡಿಕೊಳ್ಳುವ ಬದಲು, ಮನೆಯಲ್ಲಿಯೇ ನೈಸರ್ಗಿಕವಾಗಿ ಕಡಲೆ ಹಿಟ್ಟಿನ ಫೇಸ್‌ಪ್ಯಾಕ್ ಮಾಡುವುದು ಹೇಗೆ ಎಂದು ನೋಡೋಣ -
* ಮೊಡವೆಗಳನ್ನು ಕಡಿಮೆ ಮಾಡಲು
1 ಚಮಚ ಕಡಲೆ ಹಿಟ್ಟಿಗೆ 1/4 ಚಮಚ ಅರಿಶಿಣ ಮತ್ತು ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಈ ಪ್ಯಾಕ್ ಅನ್ನು ಮುಖಕ್ಕೆ ಹಚ್ಚಿ 10-15 ನಿಮಿಷಗಳ ನಂತರ ಮುಖವನ್ನು ತೊಳೆಯಿರಿ. ಅರಿಶಿಣ ಮುಖದ ಮೇಲಿನ ಬೇಡವಾದ ರೋಮಗಳನ್ನು ಸಹ ಕಡಿಮೆ ಮಾಡುತ್ತದೆ.
* ಎಣ್ಣೆ ತ್ವಚೆಯನ್ನು ಕಡಿಮೆ ಮಾಡಲು
1 ಚಮಚ ಕಡಲೆ ಹಿಟ್ಟಿಗೆ 1/4-1/2 ಚಮಚ ರೋಸ್ ವಾಟರ್ ಅನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಈ ಪ್ಯಾಕ್ ಅನ್ನು ಮುಖಕ್ಕೆ ಹಚ್ಚಿ 10-15 ನಿಮಿಷಗಳ ನಂತರ ಮುಖವನ್ನು ತೊಳೆಯಿರಿ. ರೋಸ್ ವಾಟರ್ ನೈಸರ್ಗಿಕ ಕ್ಲೆನ್ಸರ್ ಇದ್ದಂತೆ, ಚರ್ಮವನ್ನು ಸ್ವಚ್ಛಗೊಳಿಸೋದು ಮಾತ್ರವಲ್ಲ, ಕಾಂತಿಯುಕ್ತವಾಗಿ ಮಾಡುತ್ತದೆ.