ಉತ್ತಮ ಆರೋಗ್ಯಕ್ಕೆ ಬೇಕು ಬಾದಾಮಿ

ಗುರುವಾರ, 27 ಸೆಪ್ಟಂಬರ್ 2018 (15:54 IST)
ನಮ್ಮ ದೇಹಕ್ಕೆ ಶಕ್ತಿಯನ್ನು ಒದಗಿಸುವಲ್ಲಿ ಒಣ ಹಣ್ಣುಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಅಂತಹ ಡ್ರೈ ಫ್ರೂಟ್‌ಗಳಲ್ಲಿ ಮೊದಲು ನೆನಪಾಗುವುದು ಬಾದಾಮಿ. ಬಾದಾಮಿಯು ಹಸಿಯಾಗಿ ಸಿಗುವುದು ಬಹಳ ಕಷ್ಟ. ಆದರೆ ಬಾದಾಮಿಯಲ್ಲಿ ದೇಹಕ್ಕೆ ಶಕ್ತಿ ಒದಗಿಸುವ ಹಲವಾರು ರೀತಿಯ ವಿಟಾಮಿನ್ ಪೋಷಕಾಂಶಗಳು ಇದೆ. ಅತ್ಯಧಿಕ ಪೋಷಕಾಂಶಗಳು ಮತ್ತು ಹೇರಳವಾಗಿ ವಿಟಾಮಿನ್ ಮತ್ತು ಕಡಿಮೆ ಕೊಲೆಸ್ಟ್ರಾಲ್ ಇರುವ ಪದಾರ್ಥವೆಂದರೆ ಬಾದಾಮಿ. ಅದನ್ನು ನಾವು ನೆನೆಸಿದ ನಂತರವೇ ಬಳಸುವುದು ಜಾಸ್ತಿ. ಬಾದಾಮಿಯಲ್ಲಿ ಶೇ. 16.5 ರಷ್ಟು ಪ್ರೋಟೀನ್ ಮತ್ತು ಶೇ.41 ರಷ್ಟು ಎಣ್ಣೆಯ ಅಂಶವಿರುವುದರಿಂದ ಯಾವ ರೀತಿಯಲ್ಲಾದರೂ ಬಳಕೆ ಮಾಡಬಹುದು.
* ನೆನೆಸಿದ ಬಾದಾಮಿಯನ್ನು ಸೇವಿಸುವುದರಿಂದ ತೂಕವನ್ನು ನಿಯಂತ್ರಣದಲ್ಲಿಡಬಹುದು.
 
* ನೆನೆಸಿದ ಬಾದಾಮಿಯ ಸೇವನೆಯಿಂದ ಚರ್ಮ ಮತ್ತು ಕಣ್ಣಿನ ಆರೋಗ್ಯ ಹೆಚ್ಚುತ್ತದೆ
 
* ಪ್ರತಿದಿನ ಬಾದಾಮಿ ಸೇವಿಸುವುದರಿಂದ ಜೀರ್ಣಕ್ರಿಯೆಗೆ ನೆರವಾಗುವ ಗಟ್ ಎಂಬ ಬ್ಯಾಕ್ಟೀರಿಯಾಗಳ ಪ್ರಮಾಣ ಹೆಚ್ಚುತ್ತದೆ.
 
* ಬಾದಾಮಿ ಬೀಜಗಳನ್ನು ನೀರಿನಲ್ಲಿ ನೆನೆಸಿಡುವುದರಿಂದ ಆರೋಗ್ಯಕರ ಕೊಲೆಸ್ಟ್ರಾಲ್‌ ಮಟ್ಟದಲ್ಲಿ ಹೆಚ್ಚಳವಾಗುತ್ತದೆ ಹೃದಯದ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಬಾದಾಮಿ ಕಾಳುಗಳಲ್ಲಿರುವ ವಿಟಾಮಿನ್ ಇ ಅಂಶವು ಹೃದ್ರೋಗಗಳ ಸಂಭವನೀಯತೆಗಳನ್ನು ತಡೆಯುತ್ತದೆ. ಅಷ್ಟೇ ಅಲ್ಲದೇ ಈ ಬೀಜಗಳಲ್ಲಿರುವ ಫೋಲಿಕ್ ಆಮ್ಲವು ರಕ್ತನಾಳಗಳಲ್ಲಿ ಅಡಚಣೆಗಳು ಉಂಟಾಗದಂತೆ ತಡೆಯಬಲ್ಲದು.
 
* ಬಾದಾಮಿಯಲ್ಲಿ ಆಂಟೀಆಕ್ಸಿಡೆಂಟ್ಸ್ ಅಂಶಗಳು ಹೆಚ್ಚಾಗಿರುವುದರಿಂದ ಚರ್ಮ ಮತ್ತು ಕೂದಲಿನ ಸಮಸ್ಯೆಯನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
 
* ಬೆಳೆಯುತ್ತಿರುವ ಮಕ್ಕಳಿಗೆ ಸಂತುಲಿತ ಪ್ರಮಾಣದಲ್ಲಿ ಬಾದಾಮಿ ನೀಡುವುದರಿಂದ ಅವರ ಮೆದುಳಿನ ಬೆಳವಣಿಗೆ ಜೊತೆಗೆ ಅವರ ಬುದ್ಧಿಮತ್ತೆಯೂ ವೃದ್ಧಿಯಾಗುತ್ತದೆ.
 
* ನೆನಸಿದ ಬಾದಾಮಿ ಸೇವಿಸುವುದರಿಂದ ಗರ್ಭಿಣಿಯರಿಗೆ ಮತ್ತು ಹುಟ್ಟುವ ಮಕ್ಕಳ ಆರೋಗ್ಯ ಉತ್ತಮವಾಗಿರುತ್ತದೆ.
 
* ಬಾದಾಮಿಯಲ್ಲಿ ಅನೇಕಾನೇಕ ಜೀವಸತ್ವಗಳು, ಖನಿಜಗಳು ಮತ್ತು ಫಾಸ್ಪರಸ್ ಹೇರಳವಾಗಿವೆ. ಇವೆಲ್ಲವೂ ಮೂಳೆ ಮತ್ತು ಹಲ್ಲುಗಳನ್ನು ಸದೃಢಗೊಳಿಸಿ ದೀರ್ಘಬಾಳಿಕೆಗೆ ನೆರವಾಗುತ್ತದೆ.
 
* ಬಾದಾಮಿಯಲ್ಲಿ ಉನ್ನತ ಮಟ್ಟದ ಪ್ರೋಟೀನ್ ಇದ್ದು ಇದು ನೇರ ಸ್ನಾಯುವಿನ ಸಮೂಹದ ಬೆಳವಣಿಗೆಗೆ ನೆರವಾಗುತ್ತದೆ. 
 
* ಬಾದಾಮಿ ಕಾಳುಗಳಲ್ಲಿರುವ ಫ್ಲೊವೊನಾಯ್ಡ್‌ಗಳು ಮತ್ತು ವಿಟಾಮಿನ್ ಇ ಯು ಕ್ಯಾನ್ಸರ್ ರೋಗ ಬರದಂತೆ ತಡೆಯುತ್ತವೆ. 
 
* ಬಾದಾಮಿಯು ರಕ್ತದಲ್ಲಿನ ಸಕ್ಕರೆಯ ಅಂಶ, ಇನ್ಸುಲಿನ್ ಅಂಶ ಹಾಗೂ ಸೋಡಿಯಂ ಮಟ್ಟಗಳನ್ನು ತಗ್ಗಿಸುತ್ತವೆ ಮತ್ತು ಮಧುಮೇಹ ಹಾಗೂ ಅಧಿಕ ರಕ್ತದೊತ್ತಡದ ಸಂಭಾವ್ಯವನ್ನು ನಿಯಂತ್ರಿಸಬಲ್ಲ ಮೆಗ್ನಿಷಿಯಂನ ಮಟ್ಟವನ್ನು ಹೆಚ್ಚಿಸುತ್ತದೆ.
 
* ನೆನೆಸಿದ ಬಾದಾಮಿಯ ಸೇವನೆಯು ನಿಶ್ಯಕ್ತಿಯನ್ನು ಹೋಗಲಾಡಿಸುತ್ತದೆ. 
 
* ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೆನಸಿದ ಬಾದಾಮಿಯನ್ನು ಸೇವಿಸುವುದರಿಂದ ಬೇಗ ಹಸಿವು ಆಗುವುದಿಲ್ಲ.
 
* ನೆನೆಸಿದ ಬಾದಾಮಿಯಲ್ಲಿ ಫಾಲಿಕ್ ಆಮ್ಲವು ಇರುವುದರಿಂದ ಇದು ಹುಟ್ಟುವ ಮಕ್ಕಳಲ್ಲಿ ಅಂಗ ವೈಫಲ್ಯವನ್ನು ತಡೆಯುತ್ತದೆ.
 
* ನೆನೆಸಿದ ಬಾದಾಮಿಯ ಸೇವನೆಯಿಂದ ಮಧುಮೇಹವು ನಿಯಂತ್ರಣದಲ್ಲಿರುತ್ತದೆ.
 
* ಸ್ಮರಣಶಕ್ತಿಯ ಮಟ್ಟಗಳು ಗಣನೀಯವಾಗಿ ವೃದ್ಧಿಗೊಳ್ಳಲು ಪ್ರತಿದಿನ ನಾಲ್ಕರಿಂದ ಆರು ಬಾದಾಮಿ ಕಾಳುಗಳನ್ನು ಸೇವಿಸುವುದು ಸೂಕ್ತವಾಗಿರುತ್ತದೆ.
* ಅಲ್‌ಝಮೈರ್‌ನಂತಹ ರೋಗಗಳನ್ನು ತಡೆಯುವಲ್ಲಿ ಬಾದಾಮಿಯು ಪ್ರಮುಖ ಪಾತ್ರ ವಹಿಸುತ್ತದೆ.
 
*  ಬಾದಾಮಿಯು ಆಸ್ಟಿಯೋಪೊರೋಸಿಸ್‌ನಂತಹ ವಯೋಮಾನ ಸಂಬಂಧಿತ ಟೊಳ್ಳು ಮೂಳೆ ರೋಗ ಅಥವಾ ಮೃದು ಎಲುಬು ಸಮಸ್ಯೆಯನ್ನೂ ಸಹ ತಡೆಗಟ್ಟಲು ಸಹಕಾರಿಯಾಗಿದೆ.
 
* ಬಾದಾಮಿಯ ಸಿಪ್ಪೆಯಲ್ಲಿ ಉನ್ನತ ಮಟ್ಟದ ಆಹಾರದ ನಾರಿನಾಂಶವಿದೆ. ಇದರಿಂದ ಆಹಾರವು ಸರಿಯಾಗಿ ಜೀರ್ಣವಾಗುವುದಲ್ಲದೇ ಕರುಳಿನ ಕ್ರಿಯೆಯು ಸರಾಗವಾಗುವುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ