ದೊಡ್ಡಪತ್ರೆಯ ಆರೋಗ್ಯಕರ ಪ್ರಯೋಜನಗಳ ಬಗ್ಗೆ ನಿಮಗೆ ತಿಳಿದಿದೆಯೇ?
ಗುರುವಾರ, 27 ಸೆಪ್ಟಂಬರ್ 2018 (15:35 IST)
ನಮ್ಮ ಹಿರಿಯರು ಹೇಳಿದ "ಹಿತ್ತಲ ಗಿಡ ಮದ್ದಲ್ಲ" ಎನ್ನುವ ಮಾತು ಎಷ್ಟು ನಿಜ ಎಂದೆನಿಸುತ್ತದೆ ಅಲ್ಲವೇ? ಕೆಲವೊಮ್ಮೆ ನಮ್ಮ ಹಿತ್ತಲಿನಲ್ಲಿಯೇ ಇರುವ ಗಿಡಗಳಲ್ಲಿಯೇ ನಮ್ಮ ಆರೋಗ್ಯಕ್ಕೆ ಬೇಕಾಗುವ ಎಷ್ಟೋ ಪೋಷಕಾಂಶಗಳು ಇರುತ್ತವೆ. ಆದರೆ ನಮ್ಮ ಗಮನಕ್ಕೆ ಬಂದಿರುವುದೇ ಇಲ್ಲ. ಸಾಮಾನ್ಯವಾಗಿ ದೊಡ್ಡಪತ್ರೆಯನ್ನು ನಾವೆಲ್ಲರೂ ನೋಡಿರುತ್ತೇವೆ. ಇದಕ್ಕೆ ಹಳ್ಳಿ ಭಾಷೆಯಲ್ಲಿ ಸಾಂಬಾರ್ ಬಳ್ಳಿ ಅಂತಲೂ ಕರೆಯುತ್ತಾರೆ.
- ದೊಡ್ಡಪತ್ರೆ ಎಲೆ, ತುಳಸಿ ಮತ್ತು ವೀಳ್ಯದೆಲೆಯನ್ನು ಅರೆದು ರಸ ತೆಗೆದು ಅದಕ್ಕೆ ಜೇನುತುಪ್ಪ ಬೆರೆಸಿ ಕುಡಿದರೆ ನೆಗಡಿ, ಕೆಮ್ಮು ದೂರವಾಗುತ್ತದೆ.
- ಮೈ ಮೇಲೆ ಪಿತ್ತದ ಗಂದೆಗಳು ಎದ್ದಾಗ ದೊಡ್ಡಪತ್ರೆಯ ಎಲೆಯ ರಸವನ್ನು ಸೇವಿಸುವುದು ಮತ್ತು ಮೈ ಗೆ ಹಚ್ಚಿಕೊಳ್ಳುವ ಪದ್ಧತಿ ಹಲವು ಕಡೆಗಳಲ್ಲಿದೆ.
- ಮಕ್ಕಳಿಗೆ ಜ್ವರ ಬಂದಾಗ ದೊಡ್ಡಪತ್ರೆಯ ಎಲೆಯನ್ನು ಬಾಡಿಸಿ ನೆತ್ತಿಯ ಮೇಲೆ ಇಟ್ಟರೆ ಜ್ವರ ಕಡಿಮೆಯಾಗುತ್ತದೆ.
- 1 ವಾರದ ವರೆಗೆ ದೊಡ್ಡಪತ್ರೆಯ ಎಲೆಗಳನ್ನು ತಿಂದರೆ ಅರಿಶಿನ ಕಾಮಾಲೆಯು ವಾಸಿಯಾಗುತ್ತದೆ.
- ದೊಡ್ಡಪತ್ರೆ ಎಲೆಯ ಪೇಸ್ಟ್ ತಯಾರಿಸಿ ಅದನ್ನು ಚೇಳು ಕಚ್ಚಿದ ಗಾಯಕ್ಕೆ ಹಚ್ಚಿದರೆ ನೋವು ದೂರವಾಗುತ್ತದೆ.
- ದೊಡ್ಡಪತ್ರೆಯ ಎಲೆಯನ್ನು ಉಪ್ಪು ಸಹಿತ ತಿಂದರೆ ಜೀರ್ಣಶಕ್ತಿ ಅಧಿಕವಾಗುತ್ತದೆ.
- ದೊಡ್ಡಪತ್ರೆ ಎಲೆಗಳ ರಸ ಮತ್ತು ಅಷ್ಟೇ ಪ್ರಮಾಣದ ಎಳ್ಳೆಣ್ಣೆ ಸೇರಿಸಿ ಇದನ್ನು ನಿತ್ಯ ತಲೆಗೆ ಹಾಕುವುದರಿಂದ ತಲೆ ತಂಪಾಗುವುದರೊಂದಿಗೆ ಕಣ್ಣುರಿ ಕಡಿಮೆಯಾಗುತ್ತದೆ.
- ದೊಡ್ಡಪತ್ರೆ ಎಲೆಗಳಿಂದ ಚಟ್ನಿಯನ್ನು ಮಾಡಿಕೊಂಡು ಸೇವಿಸುವುದರಿಂದ ತಲೆಸುತ್ತು ನಿಲ್ಲುತ್ತದೆ.
- ದೊಡ್ಡಪತ್ರೆ ಎಲೆ, ಕಾಳುಮೆಣಸು ಮತ್ತು ಉಪ್ಪನ್ನು ಅಗೆದು ರಸ ಕುಡಿದರೆ ಬಾಯಿಯ ದುರ್ನಾತ ದೂರವಾಗಿ ಪಿತ್ತ ಶಮನವಾಗುತ್ತದೆ.
- ಕಜ್ಜಿ, ತುರಿಕೆಗಳಾದಾಗ ದೊಡ್ಡಪತ್ರೆ ಎಲೆಗಳನ್ನು ಉಜ್ಜಿಕೊಂಡರೆ ಚರ್ಮವ್ಯಾಧಿಗಳು ಗುಣವಾಗುವವು.
- ದೊಡ್ಡಪತ್ರೆ ಎಲೆಗಳಲ್ಲಿ ಕಾಲರಾ ರೋಗವನ್ನು ಗುಣಪಡಿಸುವ ಅಂಶಗಳಿವೆ.
- ದೊಡ್ಡಪತ್ರೆ ಎಲೆಗಳನ್ನು ಬಾಡಿಸಿ ರಸವನ್ನು ತೆಗೆದು ಜೇನು ಅಥವಾ ಕಲ್ಲುಸಕ್ಕರೆಯನ್ನು ಸೇರಿಸಿ ದಿನಕ್ಕೆ 3 ಬಾರಿ ಕುಡಿಯುವುದರಿಂದ ಭೇದಿಯು ಕಡಿಮೆಯಾಗುತ್ತದೆ.
- ದೊಡ್ಡಪತ್ರೆಯ ಹಸಿ ಎಲೆಯ ರಸ ತೆಗೆದು ಜೇನುತುಪ್ಪ ಸೇರಿಸಿ ಕುಡಿಯುವುದರಿಂದ ಕಫ ಕಡಿಮೆಯಾಗುತ್ತದೆ.
- ಮಕ್ಕಳಿಗೆ ನೆಗಡಿಯಾದಾಗ ದೊಡ್ಡಪತ್ರೆ ಎಲೆಗಳನ್ನು ಬೆಂಕಿಯಲ್ಲಿ ಬಾಡಿಸಿ ರಸವನ್ನು ನೆತ್ತಿಗೆ ಹಿಂಡುವುದರಿಂದ ಕಡಿಮೆಯಾಗುತ್ತದೆ.