ನೆಗಡಿ, ಕೆಮ್ಮು, ಅಜೀರ್ಣದಂತಹ ಸಣ್ಣ-ಪುಟ್ಟ ಸಮಸ್ಯೆಗಳಿಗೆ ವೈದ್ಯರ ಬಳಿ ಓಡುತ್ತಿದ್ದ ಜನರು ಈಗ ಮನೆಮದ್ದುಗಳ ಬಗ್ಗೆ ಒಲವು ತೋರುತ್ತಿದ್ದಾರೆ ಅಂದರೆ ನಮ್ಮ ಪೂರ್ವಜರು ಅನುಸರಿಸುತ್ತಿದ್ದ ಮಾರ್ಗಗಳತ್ತಲೇ ವಾಲುತ್ತಿದ್ದಾರೆ. ಇಂತಹ ಮನೆಮದ್ದುಗಳ ಔಷಧಿಗಳ ಪಟ್ಟಿಯಲ್ಲಿ ಬೆಳ್ಳುಳ್ಳಿಯೂ ಒಂದು.
ವೈದ್ಯಕೀಯ ಶಾಸ್ತ್ರದಲ್ಲಿ ಬೆಳ್ಳುಳ್ಳಿಗೆ ಪ್ರಮುಖವಾದ ಸ್ಥಾನವಿದೆ. ಇದರಿಂದ ಬಹಳ ಆರೋಗ್ಯ ಪ್ರಯೋಜನಗಳಿವೆ. ಬೆಳ್ಳುಳ್ಳಿಯ ಸಣ್ಣ ಸಣ್ಣ ಎಸಳುಗಳೂ ಸಹ ಔಷಧೀಯ ಗುಣಗಳನ್ನು ಹೊಂದಿದೆ. ಇದನ್ನು ಹಲವಾರು ವರ್ಷಗಳಿಂದ ಅನೇಕ ಚಿಕಿತ್ಸೆಗಳಲ್ಲಿಯೂ ಬಳಸಲಾಗುತ್ತಿದೆ.
* ಕೆಮ್ಮು, ಅಸ್ತಮಾ, ನ್ಯುಮೋನಿಯಾ, ಎದೆ ಕಟ್ಟಿರುವ ಸಮಸ್ಯೆಯಿಂದ ಬಳಲುತ್ತಿರುವವರು ಬೆಳ್ಳುಳ್ಳಿ ಹಾಲಿಗೆ ಒಂದು ಚಿಟಿಕೆ ಅರಿಶಿಣವನ್ನು ಸೇರಿಸಿ 3 ಬಾರಿ ಕುಡಿಯುವುದರಿಂದ ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ
* ತೀವ್ರವಾಗಿ ಜ್ವರ ಬಂದಾಗ ದೇಹದಲ್ಲಿ ಪ್ಲೇಟ್‌ಲೇಟ್‌ಗಳು ಕಡಿಮೆಯಾಗುತ್ತವೆ. ಪ್ಲೇಟ್‌ಲೇಟ್‌ಗಳು ವೇಗವಾಗಿ ಹೆಚ್ಚಾಗಲು ಮತ್ತು ಇನ್‌ಫೆಕ್ಷನ್ ಕಡಿಮೆಯಾಗಲು ಬೆಳ್ಳುಳ್ಳಿಯು ಒಳ್ಳೆಯ ಔಷಧವಾಗಿದೆ.
* ಬೆಳ್ಳುಳ್ಳಿಯು ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳನ್ನು ದೂರವಿರಿಸಲು ಸಹಾಯ ಮಾಡುತ್ತದೆ. ಬೆಳ್ಳುಳ್ಳಿಯು ಕೋಲಿ ಮತ್ತು ಸಾಲ್ಮೊನೆಲ್ಲಾ ಎಂಟೆರೈಟಿಡೀಸ್‌ನಂತಹ ಬ್ಯಾಕ್ಟೀರಿಯಾಗಳನ್ನು ನಾಶಪಡಿಸುವ ಮೂಲಕ ಆಹಾರವು ವಿಷವಾಗುವಿಕೆಯನ್ನು ತಡೆಯುತ್ತದೆ.
* ನೋವುಂಟು ಮಾಡುತ್ತಿರುವ ಹಲ್ಲಿನ ಮೇಲೆ ಬೆಳ್ಳುಳ್ಳಿಯ ಸಣ್ಣ ಚೂರೊಂದನ್ನು ಇರಿಸುವುದರಿಂದ ಹಲ್ಲುನೋವು ಶಮನವಾಗುವುದು.
* ಬೆಳ್ಳುಳ್ಳಿಯಲ್ಲಿ ಪ್ರೋಟೀನ್, ವಿಟಾಮಿನ್ ಎ, ಬಿ, ಸಿ ಸೇರಿದಂತೆ ಹಲವು ಪೌಷ್ಟಿಕಾಂಶಗಳಿವೆ. ಹಾಲಿನಲ್ಲಿ ಬೆಳ್ಳುಳ್ಳಿಯನ್ನು ಹಾಕಿ ಕುದಿಸಿ ಬಾಣಂತಿಯರಿಗೆ ಕೊಡುವುದರಿಂದ ಅವರಲ್ಲಿ ಮೊಲೆ ಹಾಲು ಹೆಚ್ಚಾಗುತ್ತದೆ.
* ಬೆಳ್ಳುಳ್ಳಿಯು ಸರಿಯಾದ ಪಚನಕ್ರಿಯೆಯನ್ನು ಹಾಗೂ ಒಳ್ಳೆಯ ಹಸಿವನ್ನು ಉದ್ದೀಪಿಸುತ್ತದೆ.
* ಬೆಳ್ಳುಳ್ಳಿಯು ಇನ್ಸುಲಿನ್ ಬಿಡುಗಡೆಯನ್ನು ಹೆಚ್ಚಿಸುತ್ತದೆ ಮತ್ತು ರಕ್ತದಲ್ಲಿರುವ ಸಕ್ಕರೆ ಅಂಶವನ್ನು ನಿಯಂತ್ರಿಸುತ್ತದೆ.
* ಬೆಳ್ಳುಳ್ಳಿ ಎಣ್ಣೆಯಿಂದ ಬೆನ್ನು ನೋವಿರುವಲ್ಲಿ ಹಚ್ಚಿ ಮಸಾಜ್ ಮಾಡಿದರೆ ನೋವು ಬೇಗನೆ ಶಮನವಾಗುತ್ತದೆ.
* ಬೆಳ್ಳುಳ್ಳಿಯು ಹೃದಯ ಸಂಬಂಧಿ ತೊಂದರೆಗಳಾದ ಹೃದಯಾಘಾತ ಮತ್ತು ಅಥೆರೊಸ್ಕಲೆರೊಸ್‌ನಿಂದ ರಕ್ಷಿಸುತ್ತದೆ ಮತ್ತು ಹೃದಯಕ್ಕೆ ಆಕ್ಸಿಜನ್ ಕಣಗಳಿಂದುಂಟಾಗುವ ತೊಂದರೆಯನ್ನು ತಪ್ಪಿಸುತ್ತದೆ.
* ಬೆಳ್ಳುಳ್ಳಿಯಲ್ಲಿ ಆಲೈಸಿನ್ ಎಂಬ ಇನ್ನೊಂದು ಪೋಷಕಾಂಶವಿದ್ದು ಇದು ರಕ್ತದಲ್ಲಿ ಟ್ರೈಗ್ಲಿಸರೈಡ್ ಪ್ರಮಾಣವನ್ನು ನಿಯಂತ್ರಿಸುವ ಗುಣ ಹೊಂದಿದೆ. ಇದು ಒಟ್ಟು ಕೊಲೆಸ್ಟ್ರಾಲ್ ಮಟ್ಟದ ಮೇಲೆ ಪ್ರಭಾವ ಬೀರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆಗೊಳಿಸುತ್ತದೆ.
* ಪ್ರತಿದಿನ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಮೂರು ಎಸಳು ಬೆಳ್ಳುಳ್ಳಿಯನ್ನು ತಿನ್ನುವ ಅಭ್ಯಾಸ ಮಾಡಿಕೊಳ್ಳುವುದರಿಂದ ರಕ್ತ ಶುದ್ಧಿಯಾಗುತ್ತದೆ ಮತ್ತು ಮುಖದ ಮೇಲಿರುವ ಮೊಡವೆ ಮತ್ತು ಕಲೆಗಳು ದೂರವಾಗುತ್ತದೆ.
* ಎರಡು ಎಸಳು ಬೆಳ್ಳುಳ್ಳಿಯನ್ನು ಜಜ್ಜಿ ಹೆಬ್ಬೆರಳಿನ ತಳಭಾಗದಲ್ಲಿಟ್ಟು ಬಟ್ಟೆ ಕಟ್ಟಿದರೆ ಕಾಲು ಊದುವುದು ಕಡಿಮೆಯಾಗುತ್ತದೆ.
ಭಾರತೀಯ ಶೈಲಿಯ ಅಡುಗೆಯಲ್ಲಿ ಹೆಚ್ಚು ಬಳಕೆಯಾಗುವ ಆಹಾರ ಪದಾರ್ಥವೆಂದರೆ ಬೆಳ್ಳುಳ್ಳಿ ಎಂದು ಹೇಳಬಹುದು. ಬೆಳ್ಳುಳ್ಳಿಯು ಚಿಕ್ಕದಾಗಿದ್ದರೂ ಸಾಂಬಾರ್ ಪದಾರ್ಥಗಳಲ್ಲಿ ವಿಶೇಷ ಸ್ಥಾನಮಾನವನ್ನು ಹೊಂದಿದೆ. ಒಂದೆಂದೂ ಎಸಳಿನಲ್ಲಿಯೂ ಸಹ ಔಷಧೀಯ ಗುಣಗಳನ್ನು ಹೊಂದಿದೆ. ಬೆಳ್ಳುಳ್ಳಿಯನ್ನು ಬಳಸಿ ಮಾಡುವ ಆಹಾರ ಪದಾರ್ಥಗಳೂ ಸಹ ಅತ್ಯಂತ ರುಚಿಯಾಗಿರುತ್ತದೆ. ಆದರೆ ನಾವು ಎಷ್ಟೇ ನಮ್ಮ ಆರೋಗ್ಯದ ಮೇಲೆ ಕಾಳಜಿ ವಹಿಸಿದರೂ ನಾವು ಖಾಯಿಲೆಗೆ ತುತ್ತಾಗುವುದು ಸಹಜ. ಆ ಸಂದರ್ಭದಲ್ಲಿ ನಾವು ವೈದ್ಯರ ಸಲಹೆಯನ್ನು ಪಡೆಯುವುದು ಉತ್ತಮ. ಕೆಲವರ ದೇಹ ಪ್ರಕೃತಿಗೆ ಬೆಳ್ಳುಳ್ಳಿಯು ಸರಿ ಹೊಂದುವುದಿಲ್ಲ. ಅಂತವರು ವೈದ್ಯರ ಸಲಹೆಯನ್ನು ಪಡೆದು ನಂತರ ಬೆಳ್ಳುಳ್ಳಿಯನ್ನು ಸೇವಿಸುವುದು ಉತ್ತಮ.