ಬೆಂಗಳೂರು: ಇತ್ತೀಚೆಗೆ ಹೆಚ್ಚಿನ ಮಹಿಳೆಯರು ಮುಟ್ಟಿನ ಸಮಯದಲ್ಲಿ ಹೊಟ್ಟೆ ನೋವಿನಿಂದ ಬಳಲುವುದು ಸಾಮಾನ್ಯವಾಗಿದೆ. ಇದರಿಂದ ದೈನಂದಿನ ಚಟುವಟಿಕೆಗೂ ತೊಂದರೆಯಾಗುತ್ತದೆ.
ಕಾಲೇಜು, ಶಾಲೆ, ಕಚೇರಿಗಳಿಗೆ ತೆರಳುವಾಗ ಹೊಟ್ಟೆನೋವಿನಿಂದಾಗಿ ಎಂದಿನ ಕೆಲಸದಲ್ಲಿ ತೊಡಗಿಸಿಕೊಳ್ಳಲು ಸಮಸ್ಯೆಯಾಗುತ್ತದೆ. ಕೆಲವರಿಗೆ ಹೊಟ್ಟೆ ನೋವಿನ ಜೊತೆಗೆ ತಲೆಸುತ್ತು, ವಾಕರಿಕೆ, ಕಾಲು ಸೆಳೆತ ಇತ್ಯಾದಿ ಸಮಸ್ಯೆಗಳೂ ಜೊತೆಯಾಗಿರುತ್ತದೆ. ಇದರಿಂದ ಯಾರಿಗೂ ಹೇಳಿಕೊಳ್ಳಲಾಗದ ಯಮಯಾತನೆ ಅನುಭವಿಸಬೇಕಾಗುತ್ತದೆ. ಮುಟ್ಟಿನ ಹೊಟ್ಟೆ ನೋವಿನ ಸಂದರ್ಭದಲ್ಲಿ ನಾವು ಮಾಡಬಹುದಾದ ಎರಡು ಸಿಂಪಲ್ ಮನೆ ಮದ್ದು ಏನೆಂದು ಇಲ್ಲಿ ನೋಡಿ.
ಜೀರಿಗೆ ಕಷಾಯ: ಮುಟ್ಟಿನ ಸಂದರ್ಭದಲ್ಲಿ ಹೊಟ್ಟೆಯಲ್ಲಿ ಗಾಳಿ ತುಂಬಿಕೊಂಡಂತಾಗಿ ಒಂದು ರೀತಿಯ ಗ್ಯಾಸ್ಟ್ರಿಕ್ ರೀತಿಯ ಸಮಸ್ಯೆ ಎದುರಿಸುತ್ತಾರೆ. ಇದಕ್ಕೆ ಜೀರಿಗೆ ಬೆಸ್ಟ್. ಜೀರಿಗೆಯನ್ನು ಹುರಿದುಕೊಂಡು ಅದನ್ನು ನೀರು ಹಾಕಿ ಚೆನ್ನಾಗಿ ಕುದಿಸಿ ಕಷಾಯ ಮಾಡಿ ಅದಕ್ಕೆ ಒಂದು ಚಮಚದಷ್ಟು ತುಪ್ಪ ಸೇರಿಸಿ ಸೇವಿಸಿದರೆ ಹೊಟ್ಟೆನೋವು ಶಮನವಾಗುತ್ತದೆ.
ಇಂಗು, ಮಜ್ಜಿಗೆ ಸೇವಿಸಿ: ಒಂದು ಗ್ಲಾಸ್ ತಿಳಿ ಮಜ್ಜಿಗೆಗೆ ಚಿಟಿಕೆ ಇಂಗು ಮತ್ತು ಮೆಂತ್ಯದ ಪುಡಿ ಹಾಕಿ ಸೇರಿಸಿಕೊಂಡು ಸೇವಿಸಿ. ಇದು ದೇಹದಲ್ಲಿ ರಕ್ತದ ಹರಿವು ಸುಗಮವಾಗಿಸುತ್ತದೆ. ಇಂದು ಪ್ರೊಜೆಸ್ಟರಾನ್ ಸ್ರವಿಸುವಿಕೆಯನ್ನು ಹೆಚ್ಚಿಸುವ ಗುಣ ಹೊಂದಿದೆ. ಹೀಗಾಗಿ ಇದು ಹೊಟ್ಟೆ ನೋವಿಗೆ ಪರಿಹಾರ ನೀಡಬಲ್ಲದು.