ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ಮೊಬೈಲ್, ಲ್ಯಾಪ್ ಟಾಪ್ ಎಂದು ಇಲೆಕ್ಟ್ರಾನಿಕ್ ಗ್ಯಾಜೆಟ್ ಗಳು ಬಂದ ಮೇಲೆ ಕೈಯಿಂದ ನೋಟ್ ಬರೆಯುವ ಅಭ್ಯಾಸವನ್ನೇ ಮರೆತುಬಿಟ್ಟಿದ್ದೇವೆ.
ಅಪ್ಪ ಬರೆಯುತ್ತಿದ್ದ ಲೆಕ್ಕಾಚಾರದ ಪುಸ್ತಕ ನೆನಪಿದೆಯಾ?
ನಮ್ಮ ಬಾಲ್ಯದಲ್ಲಿ ನಮ್ಮ ತಂದೆ ಅಥವಾ ತಾತ ಸಂಜೆ ಹೊತ್ತಿಗೆ ಅಂದಿನ ದಿನದ ಲೆಕ್ಕಾಚಾರವನ್ನು ಒಂದು ಪುಸ್ತಕದಲ್ಲಿ ಬರೆದಿಟ್ಟುಕೊಳ್ಳುವುದನ್ನು ನೋಡಿರಬಹುದು. ಆದರೆ ಇಂದು ಆ ಅಭ್ಯಾಸ ಯಾರಿಗೂ ಇಲ್ಲ. ಎಲ್ಲಾ ಮೊಬೈಲ್ ಮೆಮೊರಿಯಲ್ಲೇ ಫೀಡ್ ಆಗುತ್ತದೆ. ಕನಿಷ್ಠ ಡೈರಿ ಬರೆಯುವ ಅಭ್ಯಾಸ ಇರುವವರೂ ಅಪರೂಪ. ಆದರೆ ನಮ್ಮ ಕೈ ಬರವಣಿಗೆಯಲ್ಲಿ ದಿನಕ್ಕೆ ಒಂದು ಪುಟವಾದರೂ ಬರೆದರೆ ಎಷ್ಟು ಉಪಯೋಗ ಗೊತ್ತಾ?
ಮನಃಶಾಸ್ತ್ರದ ಕುರಿತ ನಿಯತಕಾಲಿಕವೊಂದರಲ್ಲಿ ಪ್ರಕಟವಾದ ಅಧ್ಯಯನ ವರದಿ ಪ್ರಕಾರ ಕೈ ಬರವಣಿಗೆಯಿಂದ ನಮ್ಮ ಮೆದುಳಿಗೆ ಸಾಕಷ್ಟು ಲಾಭವಿದೆ. ಸುಮಾರು 36 ವಿವಿ ವಿದ್ಯಾರ್ಥಿಗಳನ್ನು ಪರೀಕ್ಷಿಸಿ ಈ ಅಭಿಪ್ರಾಯಕ್ಕೆ ಬರಲಾಗಿದೆ ಈ ಅಧ್ಯಯನ ವರದಿ ಪ್ರಕಾರ ಕೈ ಬರವಣಿಗೆಯಿಂದ ನಮ್ಮ ಕಲಿಕಾ ಶಕ್ತಿ, ಸ್ಮರಣ ಶಕ್ತಿ ಮತ್ತು ಮನನ ಮಾಡಿಕೊಳ್ಳುವ ಸಾಮರ್ಥ್ಯ ಹೆಚ್ಚುತ್ತದೆ.
ಬರೆಯುವಾಗ ನಮ್ಮ ಮೆದುಳು ಮತ್ತು ಅಕ್ಷರದ ನಡುವೆ ಸಂವಹನ ನಡೆಯುತ್ತದೆ. ನಾವು ಏನು ಬರೆಯುತ್ತೇವೆಯೋ ಅದನ್ನು ಕಲ್ಪಿಸಿಕೊಳ್ಳುತ್ತೇವೆ. ಇದು ಪ್ರಮುಖವಾಗಿ ವಿದ್ಯಾರ್ಥಿಗಳ ಕಲಿಕೆಗೆ ಬಹುಮುಖ್ಯವಾಗಿದೆ. ಹೀಗಾಗಿ ಪ್ರತಿನಿತ್ಯ ಕನಿಷ್ಠ ಒಂದು ಪುಟವಾದರೂ ಬರೆಯುವ ಅಭ್ಯಾಸ ಮಾಡಿಕೊಂಡರೆ ಒಳ್ಳೆಯದು ಎನ್ನುತ್ತಾರೆ ಅಧ್ಯಯನಕಾರರು.