ಬೆಂಗಳೂರು: ಚಿಕ್ಕ ಮಕ್ಕಳು ಮಲಬದ್ಧತೆ ಅಥವಾ ಮಲ ವಿಸರ್ಜನೆ ವೇಳೆ ತಿಣುಕಾಡುತ್ತಿದ್ದರೆ ಅವರಿಗೆ ಮನೆಯಲ್ಲಿಯೇ ಮಾಡಬಹುದಾದ ಪರಿಹಾರಗಳು ಏನು ಎಂದು ನೋಡೋಣ.
ಮಲಬದ್ಧತೆ ಎನ್ನುವುದು ಇಂದು ಕೇವಲ ವಯಸ್ಕರಿಗೆ ಮಾತ್ರ ಕಂಡುಬರುತ್ತಿಲ್ಲ. ಚಿಕ್ಕ ಮಗುವಿನಲ್ಲೂ ಈ ಸಮಸ್ಯೆ ಕಂಡುಬರುತ್ತಿದೆ. ಆದರೆ ಮಕ್ಕಳು ಈ ಸಮಸ್ಯೆಯಿಂದ ಹೇಳಿಕೊಳ್ಳಲಾಗದ ಸಂಕಟ ಅನುಭವಿಸುತ್ತಾರೆ. ಸರಿಯಾಗಿ ಆಹಾರ ಸೇರದೇ ಕೃಶರಾಗುತ್ತಾರೆ. ಹಾಗಿದ್ದರೆ ಚಿಕ್ಕಮಕ್ಕಳಲ್ಲಿ ಇಂತಹ ಸಮಸ್ಯೆ ಬಂದಾಗ ಮನೆಯಲ್ಲಿಯೇ ಏನು ಪರಿಹಾರ ಮಾಡಬಹುದು?
ಹಾಲು ಮತ್ತು ತುಪ್ಪ: ಅರ್ಧ ಲೋಟ ಬಿಸಿ ಹಾಲಿಗೆ ಸ್ವಲ್ಪ ತುಪ್ಪ ಸೇರಿಸಿ ಪ್ರತಿನಿತ್ಯ ರಾತ್ರಿ ಮಲಗುವ ಮುನ್ನ ಕೊಡಿ. ಇದು ಮಲ ವಿಸರ್ಜನೆ ಸುಗಮವಾಗಿಸುತ್ತದೆ.
ಕೊಬ್ಬರಿ ಎಣ್ಣೆಯ ಪ್ರಯೋಗ: ಇನ್ನೂ ಮಾತು ಬಾರದ ಚಿಕ್ಕಮಕ್ಕಳಿಗೆ ಮಲ ವಿಸರ್ಜಿಸಲು ತಿಣುಕಾಡುವಂತಾದರೆ ಗುದದ್ವಾರದ ಸುತ್ತ ಕೊಬ್ಬರಿ ಎಣ್ಣ ಹಚ್ಚಿ.
ಬಿಸಿ ನೀರಿನ ಸ್ನಾನ: ಸ್ನಾನದ ಬಳಿಕ ಕೊಂಚ ಹೊತ್ತು ಮಕ್ಕಳನ್ನು ಬಿಸಿ ನೀರಿನ ಟಬ್ ನಲ್ಲಿ ಕೂರಿಸಿ ಆಡಲು ಬಿಡಿ. ಇದನ್ನು ಮಕ್ಕಳು ಎಂಜಾಯ್ ಮಾಡುತ್ತಾರೆ ಕೂಡಾ.
ಗಂಜಿ ನೀರಿಗೆ ಬೆಣ್ಣೆ ಹಾಕಿ ಕೊಡಿ: ಹದ ಬಿಸಿ ಗಂಜಿ ನೀರಿಗೆ ಒಂದು ಚಮದಷ್ಟು ಬೆಣ್ಣೆ ಹಾಕಿ ಕೊಡಿ. ಇದು ದೇಹ ತಂಪಗಾಗಿಸುವುದಲ್ಲದೆ, ಮಲ ಸುಲಭವಾಗಿ ಹೊರಹಾಕಲು ಸಹಾಯ ಮಾಡುತ್ತದೆ.
ನೀರು ಮತ್ತು ನೀರಿನಂಶ ಸೇವನೆ: ಇದು ಎಲ್ಲರಿಗೂ ಅತ್ಯಂತ ಮಹತ್ವದ್ದು. ದೇಹಕ್ಕೆ ಸಾಕಷ್ಟು ನೀರಿನಂಶ ಸೇರಿಸುವುದು ಅಗತ್ಯ. ಹೀಗಾಗಿ ಆಗಾಗ ಹದ ಬಿಸಿ ನೀರಿನ ಸೇವನೆ ಮತ್ತು ನೀರಿನಂಶದ ಆಹಾರ ವಸ್ತುಗಳನ್ನು ಕೊಡಿ.
ನೆನಪಿಡಿ, ಮಕ್ಕಳು ಹಸಿವೆ ಎಂದಾಗ ನಾವು ತಕ್ಷಣಕ್ಕೆ ಸುಲಭವಾಗಿ ಕೊಡುವುದು ಬಿಸ್ಕಟ್ ಪ್ಯಾಕೇಟ್. ಆದರೆ ಬಿಸ್ಕಟ್, ಬ್ರೆಡ್ ಮುಂತಾದ ಆಹಾರ ವಸ್ತುಗಳು ಅವರಲ್ಲಿ ಮಲಬದ್ಧತೆಗೆ ಕಾರಣವಾಗಬಹುದು. ಹೀಗಾಗಿ ಇಂತಹ ಆಹಾರ ವಸ್ತುಗಳನ್ನು ಅವಾಯ್ಡ್ ಮಾಡಿ.