ಬೆಂಗಳೂರು: ಪ್ರತಿನಿತ್ಯ ಅಡುಗೆ ಮಾಡಲು ಬೋರ್ ಎನಿಸಿದಾಗ ಸುಲಭವಾಗಿ ಅಂಗಡಿಯಿಂದ ಬ್ರೆಡ್ ತಂದು ಟೋಸ್ಟ್ ಮಾಡಿಕೊಂಡು ತಿಂದುಬಿಡುತ್ತೇವೆ.
ಯಾರಿಗಾದರೂ ಹುಷಾರಿಲ್ಲ ಎಂದಾಗ ಥಟ್ಟನೇ ತಿನ್ನಲು ಕೊಡುವುದು ಬ್ರೆಡ್ ನ್ನು. ಬ್ಯಾಚುಲರ್ ಗಳಿಗಂತೂ ಬ್ರೆಡ್ ಸುಲಭ ಆಹಾರ. ಅದಕ್ಕೆ ಒಂಚೂರು ತರಕಾರಿ ಫ್ರೈ ಮಾಡಿಕೊಂಡು ನಡುವೆ ಇಟ್ಟರೆ ಸ್ಯಾಂಡ್ ವಿಚ್ ಎಂದು ಚಪ್ಪರಿಸಿಕೊಂಡು ತಿನ್ನುತ್ತೇವೆ. ಆದರೆ ಬ್ರೆಡ್ ನ್ನೂ ಅತಿಯಾಗಿ ತಿಂದರೆ ಒಳ್ಳೆಯದಲ್ಲ ಎನ್ನುತ್ತಾರೆ ತಜ್ಞರು. ಹಾಗಿದ್ದರೆ ಅತಿಯಾಗಿ ಬ್ರೆಡ್ ಸೇವಿಸುವುದರಿಂದ ಆಗುವ ಅಡ್ಡ ಪರಿಣಾಮಗಳೇನು ನೋಡೋಣ.
ಬ್ರೆಡ್ ಗಳಲ್ಲಿ ಬಿಳಿ ಬ್ರೆಡ್ ಆರೋಗ್ಯಕ್ಕೆ ಒಳ್ಳೆಯದೇ ಅಲ್ಲ. ಇದನ್ನು ಅತಿಯಾಗಿ ಸೇವಿಸುವುದರಿಂದ ತೂಕ ಹೆಚ್ಚಳ, ಮಧುಮೇಹ, ಹೃದಯದ ಖಾಯಿಲೆ ಇಂತಹ ಸಮಸ್ಯೆಗಳು ಬರಬಹುದು. ಅಲ್ಲದೆ ಮಲಬದ್ಧತೆ ಸಮಸ್ಯೆ ಇರುವವರು ಇದನ್ನು ಸೇವಿಸಲೇಬಾರದು.
ಇಡೀ ಧಾನ್ಯದ ಬ್ರೆಡ್, ಕಂದು ಬ್ರೆಡ್ ಕೊಂಚ ಮಟ್ಟಿಗೆ ಆರೋಗ್ಯಕರವಾಗಿರುತ್ತದೆ. ಹಾಗಿದ್ದರೂ ಇದು ಸಂಪೂರ್ಣ ಆರೋಗ್ಯಕರ ಎನ್ನುವುದಕ್ಕೆ ಇದುವರೆಗೆ ಯಾವುದೇ ಪುರಾವೆ ಇಲ್ಲ. ಅದರಲ್ಲೂ ಬ್ರೆಡ್ ಹಾಳಾಗದಂತೆ ಪ್ರಿಸರ್ವೇಟಿವ್ ಹಾಕಿಡಲೇಬೇಕು. ಇದು ಅನೇಕ ಲೈಫ್ ಸ್ಟೈಲ್ ರೋಗಗಳಿಗೆ ಕಾರಣವಾಗಬಹುದು. ಹಾಗಾಗಿ ಆದಷ್ಟು ಫ್ರೆಶ್ ಬ್ರೆಡ್ ಸೇವಿಸುವುದು ಉತ್ತಮ. ಸಂಸ್ಕರಿತ ಸಕ್ಕರೆ ಹಾಕಿದ ಬ್ರೆಡ್ ಗಳನ್ನು ತಿನ್ನುವುದು ಅಷ್ಟು ಒಳ್ಳೆಯದಲ್ಲ. ಕೆಲವರಿಗೆ ಗೋಧಿಯ ಅಲರ್ಜಿ ಇರುತ್ತದೆ. ಅಂತಹವರು ಬ್ರೆಡ್ ಬಳಸಿದಾಗ ಆರೋಗ್ಯ ಸಮಸ್ಯೆಗಳು ಬರಬಹುದು. ಯಾವುದೇ ಆಹಾರ ವಸ್ತುವಾದರೂ ಹಾಳಾಗದಂತೆ ತುಂಬಾ ಸಮಯ ಸಂರಕ್ಷಿಸಿಟ್ಟು ತಿನ್ನುವುದು ಒಳ್ಳೆಯದಲ್ಲ. ಹೀಗಾಗಿ ಬ್ರೆಡ್ ಸೇವನೆಯೂ ಹಿತಮಿತವಾಗಿದ್ದರೆ ಉತ್ತಮ.