ಯಾವ ಸಮಯದಲ್ಲಿ ವ್ಯಾಯಾಮ ಮಾಡಿದ್ರೆ ಉತ್ತಮ?

ಬುಧವಾರ, 13 ಅಕ್ಟೋಬರ್ 2021 (07:08 IST)
ಶರೀರ ಎಂಬುದು ಈ ಪ್ರಕೃತಿ ನಮಗೆ ನೀಡಿರುವ ಒಂದು ಅದ್ಭುತ ಯಂತ್ರ ಎಂದು ಹೇಳಬಹುದು. ದೇಹವೇ ದೇಗುಲ, ಇದನ್ನ ನಾವು ಹೇಗೆ ನೋಡಿಕೊಳ್ಳುತ್ತೇವೆ ಎಂಬುದು ಬಹಳ ಮುಖ್ಯವಾಗುತ್ತೆ. ಕೆಲವರು ಫಿಟ್ ಆಗಲು ವ್ಯಾಯಮ ಮಾಡಿ ದೇಹವನ್ನ ಕಟ್ಟು ಮಸ್ತಾಗಿ ಇಟ್ಟುಕೊಂಡಿರುತ್ತಾರೆ.

ವ್ಯಾಯಾಮ ಎಂಬುದು ದೇಹ ಎಂಬ ಯಂತ್ರವನ್ನು ಸುಸ್ಥಿತಿಯಲ್ಲಿಡುವಂತೆ ನಿರ್ವಹಣೆ ಮಾಡುವ ವಿಧಾನ. ನೀವು ಸದಾ ಫಿಟ್ ಅಂಡ್ ಯಂಗ್ ಆಗಿ ಕಾಣಬೇಕು ಅಂದ್ರೆ ವ್ಯಾಯಾಮ ನಿಮ್ಮ ಹವ್ಯಾಸವಾಗಬಾರದು, ಅದು ನಿಮ್ಮ ದಿನಚರಿಯಾಗಬೇಕು. ಪ್ರತಿದಿನ ಸರಿಯಾಗಿ ದೇಹ ದಂಡಿಸಿದರೆ ಮಾತ್ರ ಉತ್ತಮ ಆರೋಗ್ಯ ಪಡೆಯಬಹುದು. ಆದರೆ ಕೆಲ ಜನರಲ್ಲಿ ವ್ಯಾಯಾಮ ಯಾವ ಸಮಯದಲ್ಲಿ ಮಾಡಿದರೆ ಉತ್ತಮ ಅನ್ನುವ ಗೊಂದಲಗಳಿರುತ್ತೆ.
ದೇಹದ ಜೊತೆ ಮನಸ್ಸನ್ನು ಕೂಡು ಸಿದ್ದಗೊಳಿಸುವುದು ಅತಿ ಮುಖ್ಯ. ಮನಸ್ಸು ಮಾಡಿದರೇ ಏನು ಬೇಕಾದರೂ ಸಾಧಿಸಬಹುದು. ಹೀಗಾಗಿ ವ್ಯಾಯಾಮ ಮಾಡುವುದನ್ನ ರೂಡಿಸಿಕೊಳ್ಳಲು ದೃಢ ಸಂಕಲ್ಪ ಮುಖ್ಯವಾಗುತ್ತೆ. ಕೆಲವರಿಗೆ ಮುಂಜಾನೆ ಎದ್ದು ಓಡುವುದು ಇಷ್ಟವಾಗುತ್ತೆ. ಹೀಗೆ ಮಾಡಿದರೆ ದಿನ ಪೂರ್ತಿ ಮನಸ್ಸು ಉಲ್ಲಾಸದಾಯಕವಾಗಿರುತ್ತೆ ಅನ್ನುವ ನಂಬಿಕೆ. ಮತ್ತೆ ಕೆಲವರು ಸಾಯಂಕಾಲ ಜಿಮ್, ಪಾರ್ಕ್ಗಳಿಗೆ ಹೋಗಿ ವ್ಯಾಯಾಮ ಮಾಡುತ್ತಾರೆ. ಇನ್ನೂ ಕೆಲವರು ಮಧ್ಯಾಹ್ನದ ವೇಳೆ ವಾಕ್ ಮಾಡುವುದು ಇಷ್ಟ.
ವ್ಯಾಯಾಮಕ್ಕೆ ಯಾವ ಟೈಂ ಬೆಸ್ಟ್?

ನಮ್ಮ ದೇಹ ಜೈವಿಕ ಗಡಿಯಾರ ದೇಹದ ಕ್ರಿಯೆಗಳಾದ ರಕ್ತದೊತ್ತಡ, ಉಷ್ಣತೆ, ಹೃದಯಬಡಿತ, ಹಾರ್ಮೋನ್ಗಳ ಮಟ್ಟ ಎಲ್ಲದರ ಮೇಲೆ ಪ್ರಭಾವ ಹೊಂದಿದೆ. ಇದೆಲವನ್ನ ಗಮನದಲ್ಲಿಟ್ಟುಕೊಂಡಿ ವ್ಯಾಯಾಮ ಮಾಡಲು ಸಿದ್ಧತೆ ಮಾಡಿಕೊಳ್ಳಬೇಕು. ಈ ಜೈವಿಕ ಗಡಿಯಾರವನ್ನ ಕೀ ಕೊಟ್ಟು ನಮಗೆ ಬೇಕಾದ ರೀತಿಯಲ್ಲಿ ಬದಲಿಸಲು ಸಾಧ್ಯವಿಲ್ಲ. ಒಬ್ಬೊಬ್ಬರ ದೇಹ ಒಂದೊಂದು ರೀತಿ ಇರುತ್ತದೆ. ಹೀಗಾಗಿ ಯಾವ ಸಮಯದಲ್ಲಾದರೂ ಸರಿ. ನಿಯಮಿತವಾಗಿ ದಿನವೂ ಒಂದೇ ಸಮಯಕ್ಕೆ ವ್ಯಾಯಾಮ ಮಾಡುವುದು ಉತ್ತಮ. ಬೆಳಗ್ಗೆ, ಸಂಜೆ ಸಮಯಗಳೆರಡರಲ್ಲೂ ಬೇರೆ ಬೇರೆ ಲಾಭಗಳಿವೆ.
ಬೆಳಗಿನ ವ್ಯಾಯಾಮದ ಲಾಭಗಳೇನು?
ಚುಮು ಚುಮು ಚಳಿ, ಮುಂಜಾನೆ ಹಾಯಾದ ನಿದ್ದು ಬಿಟ್ಟು ಎದ್ದು ವ್ಯಾಯಾಮ ಮಾಡಲು ದೃಢ ಮನಸ್ಸು ಬೇಕು. ಒಂದು ದಿನ ಎದ್ದು, ಮಾರನೇ ದಿನ ಬೆಳಗ್ಗೆ ಎದ್ದು ವ್ಯಾಯಾಮ ಮಾಡಲು ಮನಸ್ಸಿಲ್ಲದೇ ಮರುದಿನಕ್ಕೆ ಮುಂದೂಡಬಾರದು. ಸಾಯಂಕಾಲ ಕೆಲವು ಬಾರಿ ಇತರೆ ಕೆಲಸಗಳ ಒತ್ತಡ ಹೆಚ್ಚಾದಾಗ ಮನಸ್ಸಿಗೆ ವ್ಯಾಯಾಮ ಮಾಡುವ ಆಸಕ್ತಿ, ಶಕ್ತಿ ಎರಡೂ ಇರುವುದಿಲ್ಲ. ಹೀಗಾಗಿ ಬೆಳಗ್ಗೆ ಎದ್ದ ಕೂಡಲೇ ಮನಸ್ಸು ಏನಾದರೂ ನೆಪ ಹುಡುಕುವ ಬದಲು ದೃಢ ಮನಸ್ಸಿನಿಂದ ವ್ಯಾಯಾಮ ಮಾಡುವುದು ಸೂಕ್ತ.
 ನಿದ್ದೆಗೆ ಸಹಾಯ ಬೆಳಗ್ಗಿನ ವ್ಯಾಯಾಮ

ಆಫೀಸ್ನಿಂದ ಬಂದು ಸುಸ್ತಾಗಿ, ಮತ್ತೆ ರಾತ್ರಿ ವ್ಯಾಯಾಮ ಮಾಡಿದಾಗ ನಿದ್ದೆಯ ಸಮಯದಲ್ಲಿ ವ್ಯತ್ಯಾಸಗಳು ಆಗಬಹುದು. ವ್ಯಾಯಾಮದಿಂದ ಹೃದಯ ಬಡಿತ, ದೇಹದ ಉಷ್ಣತೆ ಹೆಚ್ಚುತ್ತದೆ. ನಿದ್ದೆಗೂ ಮುನ್ನ ದೇಹದ ಎಲ್ಲ ಕ್ರಿಯೆಗಳ ಕೆಲಸ ನಿಧಾನವಾಗಬೇಕು. ಹಾಗಾದರೇ ಮಾತ್ರ ನಿಮಗೆ ಒಳ್ಳೆ ನಿದ್ದೆ ಬರುತ್ತದೆ. ಹೀಗಾಗಿ ಬೆಳಗ್ಗೆಯೇ ವ್ಯಾಯಾಮ ಮಾಡಿದರೆ, ದೇಹಕ್ಕೆ ಶ್ರಮವಾಗಿ ದಣಿದಿರುತ್ತೆ. ರಾತ್ರಿ ದಿಂಬಿಗೆ ತಲೆ ಇಟ್ಟರೆ ಸುಖವಾಗಿ ನಿದ್ದೆ ಬರುತ್ತದೆ.
ಕೊಬ್ಬು ಕರಗಿಸಲು ಬೆಳಗ್ಗಿನ ವರ್ಕೌಟ್ ಬೆಸ್ಟ್

ಸಾಧಾರಣವಾಗಿ ಬೆಳಿಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡಲಾಗುತ್ತೆ. ರಾತ್ರಿ ಮಲಗಿದ ಸಮಯದಲ್ಲಿ ಅಂದರೆ ಸುಮಾರು ಎಂಟರಿಂದ ಹತ್ತು ಗಂಟೆಗಳ ಕಾಲ ಹೊಟ್ಟೆಯಲ್ಲಿ ಯಾವುದೇ ಆಹಾರ ಇರುವುದಿಲ್ಲ. ಹೀಗಿರುವಾಗ ವ್ಯಾಯಾಮ ಮಾಡಿದರೆ ದೇಹದ ಕೆಟ್ಟ ಕೊಲೆಸ್ಟ್ರಾಲ್) ಹೆಚ್ಚು ಕರಗುತ್ತದೆ.
ಕಡಿಮೆ ಹಸಿವು, ಜಂಕ್ ಫುಡ್ ತಿನ್ನುವ ಹವ್ಯಾಸಕ್ಕೆ ತಡೆ

ಬೆಳಿಗ್ಗೆ ವ್ಯಾಯಾಮ ಮಾಡುವುದರಿಂದ ಹಸಿವು ಕಡಿಮೆಯಾಗುತ್ತದೆ. ದೇಹಕ್ಕೆ ಬೇಕಾದಷ್ಟೇ ಆಹಾರವನ್ನು ಸೇವಿಸಬಹುದು. ದಿನಪೂರ್ತಿ ಜಂಕ್ ಫುಡ್ ತಿನ್ನುವ ಮೂಲಕ ತೂಕ ಹೆಚ್ಚಿಸುವ ಹವ್ಯಾಸವನ್ನ ತಡೆಯಬಹುದು.
ಮಧ್ಯಾಹ್ನ-ಸಂಜೆಯ ವ್ಯಾಯಾಮದಿಂದಾಗುವ ಲಾಭಗಳೇನು?
- ದೇಹದ ಉಷ್ಣತೆ ಹೆಚ್ಚಿರುತ್ತೆ
ನಮ್ಮ ದೇಹದ ಉಷ್ಣತೆ ಬೆಳಿಗ್ಗೆ ಎದ್ದಾಗಲಿಂದ ನಿಧಾನವಾಗಿ ಹೆಚ್ಚುತ್ತಾ ಮಧ್ಯಾಹ್ನದ ಹೊತ್ತಿಗೆ ಗರಿಷ್ಠ ಮಟ್ಟ ತಲುಪುತ್ತದೆ. ಮಾಂಸಖಂಡಗಳ ಸಾಮರ್ಥ್ಯ, ಸಹನಶಕ್ತಿ, ಬಾಗುವಿಕೆ ಈ ಸಮಯದಲ್ಲಿ ಹೆಚ್ಚಿರುವುದರಿಂದ ವ್ಯಾಯಾಮ ಮಾಡುವುದು ಸುಲಭ. ಅದೇ ಬೆಳಗ್ಗೆ ವರ್ಕೌಟ್ಗೂ ಮುನ್ನ ವಾಮ್ ಅಪ್ ಮಾಡಲು ಹೆಚ್ಚು ಸಮಯಬೇಕು. ಇಲ್ಲದಿದ್ದರೆ ಸ್ನಾಯುಗಳು ಸೆಳೆಯುವ ಸಾಧ್ಯತೆ ಹೆಚ್ಚಿರುತ್ತೆ
- ತೂಕ ಇಳಿಸಲು ಬಹಳ ಸಹಕಾರಿ
ದೇಹದ ಎಲ್ಲಾ ಕ್ರಿಯೆಗಳೂ ವೇಗವಾಗಿ ನಡೆಯುತ್ತಿರುವುದರಿಂದ ದೇಹದಲ್ಲಿ ಕ್ಯಾಲರಿ ಕೂಡ ವೇಗವಾಗಿ ಕರಗುತ್ತದೆ. ಹೀಗಾಗಿ ತೂಕ ಇಳಿಕೆ ಸುಲಭ. ಯಾವುದೇ ಸಮಯದಲ್ಲಿ ನೀವು ವ್ಯಾಯಾಮ ಮಾಡಿದರೂ ಸರಿ, ಆದರೆ ಅದನ್ನು ಪ್ರತಿದಿನ ಮಾಡಲು ಮರೆಯದಿರಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ