ರೋಚಕ ಇತಿಹಾಸದ ಸ್ವತಂತ್ರ ಭಾರತ

ಜೋಮನ್ ವರ್ಗೀಸ್
ND
ಸ್ವತಂತ್ರ ಭಾರತ ಅನೇಕ ಮಹನೀಯರ ತ್ಯಾಗಬಲಿದಾನಗಳ ಸಂಕೇತ. ಬ್ರಿಟಿಷರ ಕಪಿಮುಷ್ಟಿಗೆ ಸಿಲುಕಿ ನಲುಗುತ್ತಿರುವಾಗ ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿ ಹೋರಾಟಕ್ಕೆ ಕಂಕಣಬದ್ಧರಾಗಿ ನಿಂತ ಹೋರಾಟಗಾರರ ನೆನಪು ಅವಿಸ್ಮರಣೀಯ. ಅಂತಹ ನೋವು-ನಲಿವಿನ ಸ್ವತಂತ್ರ ಭಾರತದ ಇತಿಹಾಸ ರೋಚಕವಾದದ್ದು.

ಸ್ವತಂತ್ರ ಭಾರತಕ್ಕೆ 61 ರ ಸಂಭ್ರಮ. ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತ ಮತ್ತೊಮ್ಮೆ ಆ ಸುವರ್ಣ ಗಳಿಕೆಯ ಸ್ಮರಣೆಗೆ ಸಜ್ಜಾಗುತ್ತಿದೆ. ನೀಲ ನಭದಲ್ಲಿ ಹಾರುತ್ತಿರುವ ರಾಷ್ಟ್ರದ್ವಜ ತನ್ನ ಹಿಂದಿರುವ ತ್ಯಾಗ, ಬಲಿದಾನ, ರಕ್ತಪಾತಗಳ ಸುದೀರ್ಘ ಇತಿಹಾಸವನ್ನು ತರೆದಿಡುತ್ತಿದೆ. ಆಗಸ್ಟ್ 15, 1947 ಭಾರತ ಇತಿಹಾಸದಲ್ಲಿ ಸ್ಮರಣೀಯ ದಿನ.

ಭಾರತಕ್ಕೆ ಸ್ವಾತಂತ್ರ್ಯ ದೊರೆತಾಗ ಇದ್ದ ಜನಸಂಖ್ಯೆ 30 ಕೋಟಿ. ಇದೀಗ ಆ ಸಂಖ್ಯೆ ನಾಲ್ಕು ಪಟ್ಟು ವೃದ್ಧಿಸಿದೆ. ಆಕಾಶದ ತಾರೆಗಳಂತೆ ಎಣಿಕೆಗೆ ನಿಲುಕದೆ ಅದು ಬೆಳೆಯುತ್ತಿದೆ! ಜಗತ್ತಿನ ಇತಿಹಾಸದಲ್ಲಿ ಸ್ವಾತಂತ್ರ್ಯ ದೊರಕಿದ ಮೇಲೂ ಆಮೆ ವೇಗದಲ್ಲಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವೆಂದರೆ ಭಾರತ. ನಮ್ಮಲ್ಲಿನ ಭ್ರಷ್ಟಾಚಾರ, ರಾಜಕೀಯ ಇಚ್ಛಾಶಕ್ತಿಯ ಕೊರತೆ, ಅಪ್ರಾಮಾಣಿಕತೆ ಹೀಗೆ ಪಟ್ಟಿ ಮಾಡಿದರೆ ಸಮಸ್ಯೆಗಳ ಸರಮಾಲೆ ಎದುರಾಗುತ್ತದೆ.

ಕಳೆದ 61 ವರ್ಷಗಳಲ್ಲಿ ನಾವು ಸಾಕಷ್ಟು ಪ್ರಗತಿ ಸಾಧಿಸಿದ್ದೇವೆ. ರಾಜಕೀಯ ನಾಯಕರ ಭರವಸೆಯ ಭಾಷಣದ ನಡುವೆ, ನಿಜವಾದ ಪ್ರಾಮಾಣಿಕತೆಯಿಂದ ದುಡಿದ ಬೆರಳೆಣಿಕೆಯ ಅಧಿಕಾರ ವರ್ಗದಿಂದ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಸಾಲಿನಲ್ಲಿ ನಾವೂ ಸೇರ್ಪಡೆಗೊಂಡಿದ್ದೇವೆ. ಆರೋಗ್ಯ, ಶಿಕ್ಷಣ, ರಾಜಕೀಯ, ಸಾಮಾಜಿಕ, ಆರ್ಥಿಕ ವಲಯಗಳಲ್ಲಿ ಹೊಸ ಬೆಳಕು ಹರಿದಿದೆ. ಕುಗ್ರಾಮದ ಕತ್ತಲಲ್ಲೂ ಮಾಹಿತಿ ತಂತ್ರಜ್ಞಾನದ ಹೊನಲು ಹರಿದಿದೆ.

"ತಂತ್ರಜ್ಞಾನ ಇಲ್ಲದೆ ನಾಗರಿಕತೆ ಬೆಳೆಯುವುದಿಲ್ಲ"- ಜಗತ್ತಿಗೆ ಮೊಟ್ಟ ಮೊದಲು ಕಂಪ್ಯೂಟರ್ ಪರಿಚಯಿಸಿದ ಚಾರ್ಲ್ಸ್‌ಬ್ಯಾಬೇಜ್ ಶತಮಾನಗಳ ಹಿಂದೆ ಹೇಳಿದ ಮಾತಿದು. ತಂತ್ರಜ್ಞಾನ ಬೆಳೆದಂತೆ ಉತ್ಪಾದನೆ ಜಾಸ್ತಿಯಾಗುತ್ತದೆ. ಬೆಲೆ ಕಡಿಮೆಯಾಗುತ್ತದೆ. ಗಾತ್ರ ಕುಗ್ಗುತ್ತದೆ. ಆದರೆ ಅದರ ಉಪಯೋಗ ಎಲ್ಲ ಕ್ಷೇತ್ರಗಳಿಗೂ ವಿಸ್ತರಿಸುತ್ತದೆ. ಆದರೆ ಸ್ವತಂತ್ರ ಭಾರತದಲ್ಲಿ ಉಳಿದ ಕ್ಷೇತ್ರಗಳು ಬೆಳೆದಂತೆ ತಂತ್ರಜ್ಞಾನ ಬೆಳೆದಿಲ್ಲ. ಉಳಿದ ದೇಶಗಳು ತಂತ್ರಜ್ಞಾನದಲ್ಲಿ ಕ್ಷಿಪ್ರಗತಿಯ ಬೆಳವಣಿಗೆ ಕಾಣುತ್ತಿದ್ದರೆ ಭಾರತ ಸ್ವತಂತ್ರವಾಗಿ ಉಪಗ್ರಹವೂಂದನ್ನು ಹಾರಿಬಿಡಲು ಕೆಲವು ವರ್ಷಗಳನ್ನು ತೆಗೆದುಕೊಂಡಿತು. ವಿದೇಶಿಗಳಿಗೆ ಹಳತಾಗಿರುವ ಐಟಿ ಎನ್ನುವ ಪದ ನಮಗೆ ಚಿರನೂತನ. ಭಾರತದಲ್ಲಿ ಆ ಪದ ಬಳಕೆ ವ್ಯಾಪಕತೆ ಪಡೆದುಕೊಂಡು ಐದಾರು ವರ್ಷಗಳು ಕಳೆದಿರಬೇಕಷ್ಟೇ.

ಮಾಹಿತಿ ತಂತ್ರಜ್ಞಾನದ ಬೆಳವಣಿಗೆ ಮನುಷ್ಯನ ಎಲ್ಲಾ ಅವಶ್ಯಕತೆಗಳನ್ನು ಪೂರೈಸುತ್ತದೆ ಎನ್ನುವ ಮಾತಿನಲ್ಲಿ ಹುರುಳಿಲ್ಲ. ಆದರೆ ನಮ್ಮ ಅವಶ್ಯಕತೆಗಳ ಪ್ರಮಾಣವನ್ನು ತಗ್ಗಿಸುತ್ತದೆ, ಉಳಿದೆಲ್ಲವುಗಳಿಗಿಂತ ಹತ್ತಿರವೂ ಅನಿವಾರ್ಯವೂ ಆಗಿದೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ತಂತ್ರಜ್ಞಾನ ಇಲ್ಲದ ಜಗತ್ತನ್ನು ಒಂದು ಕ್ಷಣವೂ ಊಹಿಸಲು ಸಾಧ್ಯವಿಲ್ಲ. ಹೀಗಿರುವಾಗ ಅದರೆಡೆಗಿನ ನಿರ್ಲಕ್ಷ್ಯಕ್ಕಿಂತ ಸದ್ಬಳಕೆಯೇ ಚಾಣಾಕ್ಯತನ. ಅಪ್ಪ ನೆಟ್ಟ ಆಲದ ಮರಕ್ಕೆ ನೇಣು ಹಾಕುತ್ತೇನೆ ಎನ್ನುವ ಸಾಂಪ್ರದಾಯಿಕ ಧೋರಣೆ ಎಂದೋ ಮುಗಿದು ಹೋಗಿದೆ. ಮತ್ತೆ ಅದನ್ನೇ ಹಾಡುವುದು ಅರ್ಥಹೀನ.

ಸ್ವಾತಂತ್ರ್ಯ ನಂತರ ಭಾರತ ಮಾಹಿತಿ ತಂತ್ರಜ್ಞಾನದಲ್ಲಿ ಸಾಧಿಸಿದ ಪ್ರಗತಿಯನ್ನು ಗಮನಿಸೋಣ. ಇನ್ನು ಕೆಲವೇ ಕೆಲವು ವರ್ಷಗಳಲ್ಲಿ ಭಾರತ ಜಗತ್ತಿನಲ್ಲಿಯೇ ಅತಿ ಹೆಚ್ಚು ಸಾಫ್ಟ್‌ವೇರ್ ಹಾಗೂ ಸಾಫ್ಟ್‌ವೇರ್ ಉದ್ಯೋಗಿಗಳನ್ನು ರಫ್ತು ಮಾಡುವ ದೇಶವಾಗಲಿದೆ. 2008 ರಲ್ಲಿ ಭಾರತ ಸಾಫ್ಟ್‌ವೇರ್ ರಫ್ತಿನಿಂದ 50 ಮಿಲಿಯನ್ ಡಾಲರ್ ಲಾಭ ಗಳಿಸಲಿದೆ ಎನ್ನುತ್ತದೆ ಜಾಗತಿಕ ಸಮೀಕ್ಷೆ. ಜಾಗತಿಕ ಆರ್ಥಿಕತೆಯಲ್ಲಿ ಅಮೆರಿಕ, ಚೀನಾ ನಂತರ ಮೂರನೇ ಶಕ್ತಿಯಾಗಿ ಬೆಳೆಯುತ್ತಿದೆ ಭಾರತ.

ಭಾರತದ ಆರ್ಥಿಕತೆ ಸಾಂಪ್ರದಾಯಿಕ ವೃತ್ತಿಯಾದ ಕೃಷಿ, ಕೈಕಸಬು, ಆಧುನಿಕತೆಯನ್ನು ಹೊಂದಿರುವ ಕೈಗಾರಿಕೆಗಳು ಉತ್ತಮ ಗುಣಮಟ್ಟದ ಸೇವೆಯಲ್ಲಿ ಅಡಗಿದೆ. ಭಾರತೀಯರ ಸೇವಾ ನೈಪುಣ್ಯತೆ ಇಡಿ ಜಗತ್ತನ್ನು ಬೆರಗಾಗುವಂತೆ ಮಾಡಿದೆ. ದೇಶದ ಶೇ.25 ರಷ್ಟು ಜನತೆ ಕಡುಬಡತನದಲ್ಲಿ ಜೀವನ ಸವೆಸುತ್ತಿದ್ದರೂ ಕೃಷಿ ವೃತ್ತಿಯನ್ನು ನಂಬಿ ಬದಕುತ್ತಿದ್ದಾರೆ. ಜಾಗತೀಕರಣದ ಗಾಳಿ ಬೀಸುತ್ತಿದ್ದರು ಎದೆಗುಂದದೆ ತಮ್ಮ ಕಾಯಕದಲ್ಲಿ ಕೃಷಿಕರು ತೊಡಗಿದ್ದಾರೆ. ದೇಶ ನಿರಂತರ ಅಭಿವೃದ್ಧಿಪಥದತ್ತ ಸಾಗುತ್ತಿದ್ದರೂ ಶ್ರೀಮಂತರ ಬಡವರ ನಡುವಿನ ಕಂದರ ಹೆಚ್ಚುತ್ತಿರುವುದು ಆತಂಕಕ್ಕೆ ಎಡೆಮಾಡಿದೆ. ಸದಾ ಸ್ವಾತಂತ್ರ್ಯವನ್ನು ಬಯಸುತ್ತ ಗುಂಡಿಗೆ ಹೆದರದೆ ಬ್ರಿಟಿಷರ ನೇಣಿಗೆ ಬಲಿಯಾಗಿ ಜೈ ಭಾರತ ಮಾತೆ ಎಂದು ಘೋಷಿಸಿದ ಹೆಮ್ಮೆಯ ಪುತ್ರರ ಸ್ವಾಭಿಮಾನಕ್ಕೆ ಎಣೆಯುಂಟೆ.